ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

KannadaprabhaNewsNetwork | Updated : Jan 14 2024, 11:25 AM IST

ಸಾರಾಂಶ

ಲೋಕಸಭೆ ಚುನಾವಣೆಗೆಂದು ಮಾಡಿಕೊಂಡಿರುವ ಇಂಡಿಯಾ ಕೂಟದ ಅಧ್ಯಕ್ಷರಾಗಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಆದರೆ ಸಂಚಾಲಕ ಹುದ್ದೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಿರಸ್ಕರಿಸಿದ್ದಾರೆ.

ನವದೆಹಲಿ: ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಹೋರಾಡಿ, ಅಧಿಕಾರಕ್ಕೇರಲು ತೀವ್ರ ಪ್ರಯತ್ನ ನಡೆಸಿರುವ ವಿಪಕ್ಷಗಳ ‘ಇಂಡಿಯಾ ಒಕ್ಕೂಟ’ ಶನಿವಾರ ಗಹನ ಚರ್ಚೆಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಟದ ಅಧ್ಯಕ್ಷ ಎಂದು ಆಯ್ಕೆ ಮಾಡಿದೆ. 

ಆದರೆ ಪ್ರತ್ಯೇಕ ಹುದ್ದೆಯಾದ ಸಂಚಾಲಕ ಹುದ್ದೆ ಬಗ್ಗೆ ಜೆಡಿಯು ನಾಯಕ ನಿತೀಶ್‌ ಕುಮಾರ್‌ ನಿರಾಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಇತ್ತೀಚೆಗೆ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಇಂಡಿಯಾ ಕೂಟ ನಿರ್ಧರಿಸಿತ್ತು. ಆದರೆ ಖರ್ಗೆ ಅದಕ್ಕೆ ನಿರಾಸಕ್ತಿ ತೋರಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.ಆನ್‌ಲೈನ್‌ ಮೂಲಕ ಶನಿವಾರ ನಡೆದ ಇಂಡಿಯಾ ಸಭೆಯಲ್ಲಿ ಶಿವಸೇನೆ, ಟಿಎಂಸಿ ಹಾಗೂ ಸಮಾಜವಾ ಪಾರ್ಟಿ ಬಿಟ್ಟು ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕೂಟದ ಸಂಚಾಲಕ ಹುದ್ದೆಯ ಆಫರ್ ನೀಡಲಾಯಿತು. 

ಆದರೆ, ‘ಕಾಂಗ್ರೆಸ್‌ನಿಂದ ಯಾರಾದರೂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು. ನನಗೆ ಸಂಚಾಲಕ ಹುದ್ದೆ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಸಂಚಾಲಕ ಹುದ್ದೆ ಬದಲು ಎಲ್ಲ ಪಕ್ಷಗಳ ಅಧ್ಯಕ್ಷರ ಕಮಿಟಿ ರಚನೆಯಾಗಬೇಕು’ ಎಂದು ಹೇಳಿದರು. 

ಆದಾಗ್ಯೂ ಪಕ್ಷದ ಜತೆ ಚರ್ಚಿಸಿ ಸಂಚಾಲಕ ಹುದ್ದೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು ಎಂದು ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.‘ಆಗ ಖರ್ಗೆ ಅವರ ಹೆಸರು ಮುನ್ನೆಲೆಗೆ ಬಂದು ಅವರು ಅಧ್ಯಕ್ಷರಾಗಬೇಕು ಎಂಬ ಪ್ರಸ್ತಾಪವಾಯಿತು. 

ಅವರ ಹೆಸರಿಗೆ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಎಲ್ಲರ ಒಪ್ಪಿಗೆ ದೊರಕಿತು. ಆಗ ಖರ್ಗೆ ಅವರು ಇಂದಿನ ಸಭೆಗೆ ಗೈರಾಗಿರುವ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಉದ್ಧವ್‌ ಠಾಕ್ರೆ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೊಂದಿಗೆ ಚರ್ಚಿಸುವೆ ಎಂದು ಹೇಳಿದರು’ ಎಂದು ಮೂಲಗಳು ಹೇಳಿವೆ.

ಒಕ್ಕೂಟದಲ್ಲಿ ಸಂಚಾಲಕರಿಗೆ ಪ್ರತ್ಯೇಕ ಸ್ಥಾನವಿದೆ, ಅಧ್ಯಕ್ಷರಿಗಿಂತ ಸ್ವಲ್ಪ ಕೆಳಗಿನ ಹುದ್ದೆಯಾಗಿದೆ.1 ದಿನ ಮುಂಚೆ ಕೂಟದ ಅಧ್ಯಕ್ಷರನ್ನಾಗಿ ಖರ್ಗೆ ಅವರನ್ನು ಹಾಗೂ ಸಂಚಾಲಕರನ್ನಾಗಿ ನಿತೀಶ್‌ ಅವರನ್ನು ನೇಮಿಸುವಂತೆ ಜೆಡಿಯು ಒತ್ತಡ ಹೇರಿದೆ ಎನ್ನಲಾಗಿತ್ತು. 

ಸದ್ಯ ಇಂಡಿಯಾ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯ ಅನುಪಸ್ಥಿತಿ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಖ್ಯಾತರಾಗಿರುವ ಖರ್ಗೆ ಮತ್ತು ಉತ್ತರ ಭಾರತದಲ್ಲಿ ಪ್ರಸಿದ್ಧರಾಗಿರುವ ನಿತೀಶ್‌ ಆಯ್ಕೆ, ದೇಶದ ಉಭಯ ಭಾಗಗಳ ಜನರಲ್ಲಿ ಕೂಟದ ಬಗ್ಗೆ ಉತ್ತಮ ಭಾವನೆ ಮೂಡಿಸಲಿದೆ ಎಂದು ಜೆಡಿಯು ಅಭಿಪ್ರಾಯ ಪಟ್ಟಿದೆ ಎಂದು ಮೂಲಗಳು ತಿಳಿಸಿದ್ದವು.

ಸೀಟು ಹಂಚಿಕೆ ಚರ್ಚೆ: ಇದೇ ವೇಳೆ ಸೀಟು ಹಂಚಿಕೆ ಮಾತುಕತೆಯನ್ನು ಆದಷ್ಟು ಬೇಗ ಮುಗಿಸುವಂತೆ ಭಾರತ ಮೈತ್ರಿಕೂಟದ ಎಲ್ಲಾ ಘಟಕಗಳಿಗೆ ಸೂಚಿಸಲಾಯಿತು. ಆಪ್-ಕಾಂಗ್ರೆಸ್‌ ಮೈತ್ರಿ ಬಗ್ಗೆ ಖರ್ಗೆ, ರಾಹುಲ್‌ ಗಾಂಧಿ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಚರ್ಚಿಸಿದರು. 

ಪೊಂಗಲ್ ನಂತರ ತಮಿಳುನಾಡಿನಲ್ಲಿ ಹಂಚಿಕೆ ನಡೆಯಲಿದೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ತಿಳಿಸಿದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ಸಭೆಯಲ್ಲಿ ಪಾಲ್ಗೊಂಡ ನಾಯಕರು ಹೇಳಿದರು.

Share this article