ಕೋಮುಗಲಭೆ ನಿಯಂತ್ರಣ ಬದಲು ಹೆಚ್ಚು ಮಾಡಲು ಕಾಂಗ್ರೆಸ್‌ ಪಿತೂರಿ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Jun 01, 2025, 02:12 AM ISTUpdated : Jun 01, 2025, 04:28 AM IST
BY Vijayendra

ಸಾರಾಂಶ

ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡಲು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯ ಸರ್ಕಾರ, ಪೊಲೀಸರು ಬೇಲಿಯೇ ಎದ್ದು ಹೊಲ ಮೇದಂತೆ ಅವರೇ ಬೆಂಕಿ ಹಚ್ಚಲು, ಕುಮ್ಮಕ್ಕು ನೀಡುತ್ತಿದ್ದಾರೆ. 

  ಮದ್ದೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋಮುಗಲಭೆ ನಿಗ್ರಹ ಮಾಡಲು ರಾಜ್ಯ ಸರ್ಕಾರ ಮಾಡಿರುವ ತಂಡ ರಚನೆ ಬಗ್ಗೆ ನಮಗೆ ಅನುಮಾನ ಮೂಡಿದೆ. ಕೋಮುಗಲಭೆ ನಿಯಂತ್ರಣ ಬದಲು ಹೆಚ್ಚು ಮಾಡಲು ಪಿತೂರಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದರು.

ಬಸವ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಡ್ಯಕ್ಕೆ ಆಗಮಿಸುವ ಮಾರ್ಗ ಮಧ್ಯೆ ಮದ್ದೂರಿನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಸ್ಲಿಂ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ನಾಲ್ಕೈದು ಜನ ಇದ್ದರು ಎಂದು ಅವರೇ ಹೇಳಿದ್ದರು. ಈಗ ಪ್ರಕರಣದಲ್ಲಿ 10- 15 ಮಂದಿ ಬಂಧಿಸಲು ಮುಂದಾಗಿದೆ. ಮಂಗಳೂರಿನ ಕಾಂಗ್ರೆಸ್‌ನ ಸ್ಥಳೀಯರ ಮುಖಂಡರ ಒತ್ತಡಕ್ಕೆ ಮಣಿದು ಬಿಜೆಪಿ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಂಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡಲು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯ ಸರ್ಕಾರ, ಪೊಲೀಸರು ಬೇಲಿಯೇ ಎದ್ದು ಹೊಲ ಮೇದಂತೆ ಅವರೇ ಬೆಂಕಿ ಹಚ್ಚಲು, ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಮಂಗಳೂರು ಘಟನೆಯಲ್ಲಿ ಗೋಚರವಾಗಿದೆ. ಇದು ದಕ್ಷಿಣ ಕನ್ನಡದಲ್ಲಿ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ರಾಜ್ಯದಲ್ಲಿ ಬಡವರ, ರೈತ, ದಿನಧೀನ ದಲಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಜನಸಾಮಾನ್ಯರಿಗೂ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ಜಾತಿ, ಜಾತಿಗಳ ವಿರುದ್ಧ ವಿಷಬೀಜ ಬಿತ್ತುವುದರಲ್ಲಿ ಬಿಜಿಯಾಗಿದೆ. ಅಭಿವೃದ್ಧಿ ಸಂಪೂರ್ಣ ನಿಂತಿದೆ ಎಂದು ದೂರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 66 ಸೀಟ್ ಗೆದ್ದಿತ್ತು. ಈಗ 62 ಆಗಿದೆ. ಯಾರ್ಯಾರು ಬೇಕು ಎಲ್ಲರನ್ನು ಕರೆದುಕೊಂಡು ಹೋಗಲಿ. ಇನ್ನೂ ಕಡಿಮೆಯಾದರೂ ಯಾವುದೇ ಬೇಸರವಿಲ್ಲ ಎಂದು ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು.

ವಿಧಾನಸಭಾ ಚುನಾವಣೆ ಇನ್ನೂ ಮೂರು ವರ್ಷವಿದೆ. ನಮ್ಮ ಗುರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ. ಮಂಡ್ಯ ಜಿಲ್ಲೆಯಲ್ಲಿಯೂ 3 ರಿಂದ 4 ಸ್ಥಾನ ಗೆಲ್ಲಬೇಕು. ಇದಕ್ಕಾಗಿ ಶಕ್ತಿ ಮೀರಿ ಹೋರಾಟ ಮಾಡಲಾಗುತ್ತಿದೆ ಎಂದರು.

ರಾಷ್ಟ್ರೀಯ ನಾಯಕ ಆಪೇಕ್ಷೆಯಂತೆ ರಾಜ್ಯದಲ್ಲಿ ಮೈತ್ರಿ ಮುಂದುವರೆಯುತ್ತೇವೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸಕ್ಕೆ ತೀರ್ಮಾನಿಸಿ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಸಂಘಟನೆಗೆ ರಾಜ್ಯದ 10 ಭಾಗಗಳಲ್ಲೂ 3 ರಿಂದ 4 ಜಿಲ್ಲೆಗಳ ಒಳಗೊಂಡ ಕೋರ್ ಕಮಿಟಿ ರಚಿಸಿದ್ದು, ನಾಲ್ಕೈದು ಜನರ ತಂಡ ಒಂದೊಂದು ವಿಭಾಗಕ್ಕೆ ತೆರಳಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಿನಿಂದಲೇ ಪೂರ್ವ ತಯಾರಿ ನಡೆಸುತ್ತಿದೆ ಎಂದರು.

ಸ್ಥಳೀಯ ಹಾಗೂ ಗ್ರಾಮ ಮಟ್ಟದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಒಗ್ಗಟ್ಟು ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ನಾಯಕರು, ಅಧ್ಯಕ್ಷರ ತೀರ್ಮಾನದಂತೆ ಮುಂದೆ ಯಾವ ರೀತಿ ಹೋಗಬೇಕು ಅದರಂತೆ ನಡೆಯುತ್ತೇವೆ ಎಂದರು.

PREV
Read more Articles on

Recommended Stories

ಕುಂದಾಪ್ರ ಕನ್ನಡ ಅಧ್ಯಯನ ಪೀಠ ಇನ್ನಷ್ಟು ಬಲಗೊಳ್ಳಲಿ: ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ
ಬಿಬಿಎಂಪಿ ವಿಭಜನೆ ವಿರೋಧಿಸಿ ಬಿಜೆಪಿ ಹೋರಾಟ: ಅಶೋಕ್‌