ದೇವೇಗೌಡರಿಗೆ ಪ್ರಧಾನಿ, ಕುಮಾರಸ್ವಾಮಿಗೆ ಸಿಎಂ ಪಟ್ಟ ನೀಡಿದ್ದು ಕಾಂಗ್ರೆಸ್ ಎಂದ ಶಾಸಕ ಪಿಎಂ ನರೇಂದ್ರಸ್ವಾಮಿ

KannadaprabhaNewsNetwork | Updated : Jan 09 2024, 11:28 AM IST

ಸಾರಾಂಶ

ಈಗ ಬಿಜೆಪಿಯ ಜಾತಿ ಪಕ್ಷದಲ್ಲಿ ಮೈತ್ರಿಯಲ್ಲಿರುವ ಕುಮಾರಣ್ಣ ಅವರಿಗೆ ಮುಂದೆ ಬಿಜೆಪಿಯಿಂದ ಮೂರು ನಾಮಗಳು ಸಿಗಬಹುದೆನೊ?, ಕುಂಟುಂಬ ರಾಜಕಾರಣ ಮಾಡಿ ತಮ್ಮ ಪುತ್ರನ ಮಂಡ್ಯಕ್ಕೆ ತಂದು ನಿಲ್ಲಿಸಿ ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರು. ಅನುದಾನ ನೀಡಿದ್ದೇನೆ ಎಂದರು. ಆದರೆ, ಆ ಹಣವನ್ನು ಸಹ ನೀಡಲಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜಕೀಯ ಮುತ್ಸದಿ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ಪಟ್ಟ ಹಾಗೂ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯ ಮಂತ್ರಿ ಪಟ್ಟ ನೀಡಿದ್ದು, ಕಾಂಗ್ರೆಸ್ ಪಕ್ಷ ಎನ್ನುವುದನ್ನು ಮರೆತು ಕಾಂಗ್ರೆಸ್ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕರ್ತರ ಸಮಾಗಮ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್‌ನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ಧವಾಗಿ ಮಾಜಿ ಪ್ರಧಾನಿಮಂತ್ರಿಗಳು ಹೇಳಿಕೆ ನೀಡುತ್ತಿದ್ದಾರೆ. ಜೊತೆಗೆ ಇವರ ಆಳ್ವೆಕೆಯಲ್ಲಿ ಕಾಂಗ್ರೆಸ್ ನಿರ್ಣಾಮ ಆಗುತ್ತದೆ ಎಂದು ಎಚ್.ಡಿ.ದೇವೇಗೌಡರು ಹೇಳುತ್ತಿರುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರ ಮಟ್ಟಕ್ಕೆ ಬೆಳೆದಿರುವುದನ್ನು ಮರೆತು ಮಾಜಿ ಮುಖ್ಯ ಮಂತ್ರಿಗಳು ಅವರ ಜಾತ್ಯತೀತ ಜನತಾದಳ ಪಕ್ಷದ ಜಾತ್ಯತೀತ ತತ್ವಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿಯ ಹಿಂದುವಾದಿಗಳು ಹಣೆಪಟ್ಟಿಕಟ್ಟಿಕೊಳ್ಳಲು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಈಗ ಬಿಜೆಪಿಯ ಜಾತಿ ಪಕ್ಷದಲ್ಲಿ ಮೈತ್ರಿಯಲ್ಲಿರುವ ಕುಮಾರಣ್ಣ ಅವರಿಗೆ ಮುಂದೆ ಬಿಜೆಪಿಯಿಂದ ಮೂರು ನಾಮಗಳು ಸಿಗಬಹುದೆನೊ?, ಕುಂಟುಂಬ ರಾಜಕಾರಣ ಮಾಡಿ ತಮ್ಮ ಪುತ್ರನ ಮಂಡ್ಯಕ್ಕೆ ತಂದು ನಿಲ್ಲಿಸಿ ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರು. ಅನುದಾನ ನೀಡಿದ್ದೇನೆ ಎಂದರು. ಆದರೆ, ಆ ಹಣವನ್ನು ಸಹ ನೀಡಲಿಲ್ಲ ಎಂದು ಟೀಕಿಸಿದರು.

ಹಿಂದುಳಿದ ವರ್ಗಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಹಿಂದುಳಿದ ಶೋಷಿತ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಬಹಳ ಶ್ರಮಿಸಿದ ಪಕ್ಷ ಅಂದರೆ ಕಾಂಗ್ರೆಸ್. ಉಳುವವನೆ ಭೂಮಿ ಒಡೆಯ ಎಂದು ಬಡವರು, ಹಿಂದುಳಿದವರು ಜಾತ ಹೆಸರೇಳದೆ ಪ್ರತಿಯೊಬ್ಬರಿಗೂ ಜಮೀನಿನ ಮಾಲೀಕರನ್ನಾಗಿ ಮಾಡಿದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ದೇವರಾಜು, ತಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಆರ್, ಕೃಷ್ಣ, ಅಪೆಕ್ಷ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಬಾಬು ಜಗಜೀವನ್‌ರಾಮ್ ಸಮಿತಿ ಅಧ್ಯಕ್ಷ ಸಿದ್ದಪ್ಪ, ದಲಿತ ಸಂಘಟನೆ ಒಕ್ಕೂಟದ ಅಧ್ಯಕ್ಷ ರವಿಚಂದ್ರ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಕ ಪಾಂಡು, ಗುತ್ತಿಗೆದಾರ ಶಿವಕುಮಾರ್, ಬುದ್ದ ಮಹಾಸಭಾ ಅಧ್ಯಕ್ಷ ಕೆ.ಟಿ ರಂಗಯ್ಯ. ಮೋಹನ ಮುಂಡುಗದೊರೆ ಸೇರಿದಂತೆ ಇತರರು ಇದ್ದರು.

Share this article