ಕಾಂಗ್ರೆಸ್ಸಿಂದ ಚುನಾವಣೆಗೆ ಟಾರ್ಗೆಟ್‌: ಲೀಡ್‌ ಕೊಡಿಸದಿದ್ದರೆ ಸಚಿವರು, ಶಾಸಕರ ಹುದ್ದೆಗೆ ಸಂಚಕಾರ!

KannadaprabhaNewsNetwork |  
Published : Mar 30, 2024, 12:55 AM ISTUpdated : Mar 30, 2024, 07:51 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಉತ್ತಮ ಲೀಡ್‌ ದೊರಕಿಸಿಕೊಡುವ ಟಾರ್ಗೆಟ್ ಅನ್ನು ಸಚಿವರು ಹಾಗೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಪಡೆದಿರುವ ಶಾಸಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಉತ್ತಮ ಲೀಡ್‌ ದೊರಕಿಸಿಕೊಡುವ ಟಾರ್ಗೆಟ್ ಅನ್ನು ಸಚಿವರು ಹಾಗೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಪಡೆದಿರುವ ಶಾಸಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ನೀಡಿದೆ. ಅಷ್ಟೇ ಅಲ್ಲ, ಒಂದು ವೇಳೆ ನಿರೀಕ್ಷಿತ ಲೀಡ್ ದೊರಕಿಸಿಕೊಡದಿದ್ದರೆ ತಮ್ಮ ಸ್ಥಾನಕ್ಕೆ ಚ್ಯುತಿ ಬರುವುದು ಗ್ಯಾರಂಟಿ ಎಂದೂ ಎಚ್ಚರಿಸಿದೆ.

ರಾಜ್ಯ ನಾಯಕತ್ವದ ಮೂಲಕ ಸಚಿವರು ಹಾಗೂ ನಿಗಮ-ಮಂಡಳಿ ಅಧ್ಯಕ್ಷಗಿರಿ ಪಡೆದಿರುವ ಶಾಸಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಈ ಎಚ್ಚರಿಕೆ ರವಾನಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ 20 ಸ್ಥಾನ ಗೆಲ್ಲುವ ಗುರಿ ಹೊಂದಿದ್ದು, ಈ ಗುರಿ ಮುಟ್ಟಬೇಕಾದರೆ ಸರ್ಕಾರದಲ್ಲಿ ಅಧಿಕಾರ ಹೊಂದಿರುವವರು ಪಕ್ಷದ ಅಭ್ಯರ್ಥಿ ಗೆಲುವಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಬೇಕು. 

ಈ ಕೊಡುಗೆ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಚಿವರು ಹಾಗೂ ಶಾಸಕರಿಗೆ ಉಸ್ತುವಾರಿ ನೀಡಿರುವ ಕ್ಷೇತ್ರ ಹಾಗೂ ಮತಗಟ್ಟೆಗಳಲ್ಲಿ ದೊರೆತ ಲೀಡ್‌ ಆಧಾರದ ಮೇಲೆ ನಿರ್ಧಾರ ಮಾಡಲು ಹೈಕಮಾಂಡ್‌ ನಿರ್ಧರಿಸಿದೆ.

ಚುನಾವಣೆ ಬಳಿಕ ಪಕ್ಷವು ಎಲ್ಲಾ ಸಚಿವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಮಾಡಲಿದೆ. ಶಾಸಕರ ಕಾರ್ಯವೈಖರಿ ಬಗ್ಗೆಯೂ ನಿಗಾ ವಹಿಸಲಿದ್ದು, ಪಕ್ಷದ ಸೂಚನೆಯನ್ನು ನಿರ್ಲಕ್ಷಿಸಿದ ಸಚಿವರು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷ ನೀಡಿರುವ ಅಧಿಕಾರವನ್ನು ಕಳೆದುಕೊಳ್ಳಬೇಕಾಗಬಹುದು. 

ಸಚಿವರು ಸಚಿವ ಸ್ಥಾನವನ್ನೇ ಕಳೆದುಕೊಳ್ಳಬಹುದು. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಬಂದಿದ್ದ ಲೀಡ್‌ ಕಾಯ್ದುಕೊಂಡು ಹೆಚ್ಚು ಸ್ಥಾನ ಗೆಲ್ಲಿಸಬೇಕು ಎಂದು ಸಷ್ಟ ಸೂಚನೆ ನೀಡಿದೆ.

ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ನೇಮಕಗೊಂಡಿರುವ ಸಚಿವರು, ಅಲ್ಲಿನ ಪ್ರತಿಯೊಂದು ಆಗು-ಹೋಗುಗಳಿಗೂ ಜವಾಬ್ದಾರರು. ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಗಳಾಗಿ ಪರಿವರ್ತನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸಿಎಂ-ಡಿಸಿಎಂಗೂ ಟಾಸ್ಕ್‌: ಶಾಸಕರು ಹಾಗೂ ಸಚಿವರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವರೇ ಎಂಬ ಬಗ್ಗೆ ನಿಗಾ ವಹಿಸುವ ಹಾಗೂ ಈ ಬಗ್ಗೆ ಮೌಲ್ಯಮಾಪನ ನಡೆಸುವ ಟಾಸ್ಕ್‌ ಅನ್ನು ಕಾಂಗ್ರೆಸ್ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದೆ. 

ಕಳೆದ ವಿಧಾನಸಭೆಯಲ್ಲಿ ಪಕ್ಷ ಗಳಿಸಿದ ಲೀಡ್‌ ಅನ್ನು ಕಾಪಿಟ್ಟುಕೊಳ್ಳಬೇಕು. ಸಾಧ್ಯವಾದರೆ ಹೆಚ್ಚಿನ ಲೀಡ್ ದೊರಕಿಸಿಕೊಡಬೇಕು. ಈ ಗುರಿ ಮುಟ್ಟದ ಶಾಸಕರು ಹಾಗೂ ಸಚಿವರ ಬಗ್ಗೆ ಮಾಹಿತಿಯನ್ನು ಚುನಾವಣೆ ನಂತರ ತಮಗೆ ನೀಡುವಂತೆ ಹೈಕಮಾಂಡ್‌ ವರಿಷ್ಠರು ರಾಜ್ಯ ನಾಯಕತ್ವಕ್ಕೆ ಸೂಚಿಸಿದ್ದು, ಈ ಮಾಹಿತಿ ಆಧರಿಸಿ ಸಚಿವರು ಹಾಗೂ ಶಾಸಕರ ಸ್ಥಾನ-ಮಾನ ನಿರ್ಧರಿಸಲಿದೆ.

ವಿಧಾನಸಭೆ ಚುನಾವಣೆ ಲೀಡ್‌ ಕಾಯ್ದಿಟ್ಟುಕೊಳ್ಳಿ: 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 122 ಸ್ಥಾನ ಗಳಿಸಿತ್ತು. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 9 ಸ್ಥಾನ ಗಳಿಸಿತ್ತು. 

ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.36.35ರಷ್ಟು ಮತ ಮಾತ್ರ ಪಡೆದಿದ್ದರೆ, ಕಾಂಗ್ರೆಸ್‌ ಶೇ.38.14ರಷ್ಟು ಮತ ಪಡೆದಿತ್ತು. ತನ್ಮೂಲಕ ಸ್ಥಾನಗಳು ಕಡಿಮೆ ಬಂದರೂ (80) ಶೇಕಡಾವಾರು ಮತ ಗಳಿಕೆಯಲ್ಲಿ ಬಿಜೆಪಿಗಿಂತ (104) ಉತ್ತಮ ಫಲಿತಾಂಶ ಪಡೆದಿತ್ತು.

ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಒಟ್ಟಾಗಿ ತೆರಳಿದರೂ ಕೇವಲ ಶೇ.31ರಷ್ಟು ಮತ ಪಡೆಯಲಷ್ಟೇ ಕಾಂಗ್ರೆಸ್‌ ಶಕ್ತವಾಯಿತು. 2014ರಲ್ಲಿ ಮೋದಿ ಅಲೆಯ ನಡುವೆಯೂ 9 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ 2019ರಲ್ಲಿ ಕೇವಲ ಒಂದು ಸ್ಥಾನಕ್ಕೆ ಕುಸಿದಿತ್ತು.

ಈ ತಪ್ಪು 2024ರ ಲೋಕಸಭೆ ಚುನಾವಣೆಯಲ್ಲಿ ಮರುಕಳಿಸಬಾರದು. ಶತಾಯಗತಾಯ 20ರಿಂದ 22 ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. 

ಇದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬ ಶಾಸಕರು, ಸಚಿವರು ಶಕ್ತಿ ಮೀರಿ ಕೆಲಸ ಮಾಡಬೇಕು ಎಂದು ಹೈಕಮಾಂಡ್‌ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು