ಕಾಂಗ್ರೆಸ್‌ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್‌ : ನಿಖಿಲ್‌

Sujatha NRPublished : Jul 1, 2025 11:34 AM

ಸರ್ಕಾರದ ಗ್ಯಾರಂಟಿಗಳನ್ನು ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸುತ್ತಿಲ್ಲ. ತಿಂಗಳು ತಿಂಗಳು ಗ್ಯಾರಂಟಿ ಹಣ ಕೊಡ್ತೀವಿ ಅಂತ ಅವರ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ. ಚುನಾವಣೆ ವೇಳೆ ಮಾತ್ರ ಗೃಹಲಕ್ಷ್ಮಿ ಹಣ ಹಾಕುತ್ತಾರೆ

 ಮಳವಳ್ಳಿ / ನಾಗಮಂಗಲ :  ಕಾಂಗ್ರೆಸ್ ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಬರುವವರೆಗೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಹಾಕುವುದಿಲ್ಲ. ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಸಂಸ್ಥೆ ಚುನಾವಣೆಗೆ ಇಂದಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಜನರೊಂದಿಗೆ ಜನತಾದಳ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಗ್ಯಾರಂಟಿಗಳನ್ನು ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸುತ್ತಿಲ್ಲ. ತಿಂಗಳು ತಿಂಗಳು ಗ್ಯಾರಂಟಿ ಹಣ ಕೊಡ್ತೀವಿ ಅಂತ ಅವರ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ. ಚುನಾವಣೆ ವೇಳೆ ಮಾತ್ರ ಗೃಹಲಕ್ಷ್ಮಿ ಹಣ ಹಾಕುತ್ತಾರೆ. ಈ ಹಿಂದೆ ಉಪಚುನಾವಣೆ, ಸಂಸತ್ ಚುನಾವಣೆ ವೇಳೆ ಹಾಕಿದ್ದರು. ಈಗ ಮುಂದೆ ತಾ.ಪಂ ಹಾಗೂ ಜಿ.ಪಂ ಚುನಾವಣೆ ಬರೋವರೆಗೂ ಜನ ಕಾಯಬೇಕು ಎಂದು ಕಿಡಿಕಾರಿದರು.

ಸಮರ್ಪಕ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡದ ಕಾಂಗ್ರೆಸ್ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದು, 2028ಕ್ಕೆ ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರೀಕ್ಷೆಯಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ಸಾರ್ವಜನಿಕರು ಸ್ಮರಿಸುತ್ತಿದ್ದಾರೆ ಎಂದರು.

ರಾಮನಗರದಲ್ಲಿ ಫಲಾನುಭವಿಗಳ ಸಭೆ ಮಾಡಿದ ಪೆನ್ನು ಪೇಪರ್ ನಾಯಕರು, ನನ್ನ ತಮ್ಮನಿಗೆ ಮತ ಹಾಕದಿದ್ದರೆ ಕ್ಷೇತ್ರದ ಹೆಣ್ಣು ಮಕ್ಕಳಿಗೆ ನಮ್ಮೆಲ್ಲ ಕಾರ್ಯಕ್ರಮ ನಿಲ್ಲುಸುತ್ತೇವೆ ಎಂದು ಧಮ್ಕಿ ಹಾಕಿದ್ದರು. ಈಗ ಸೋತು ಮನೆಯಲ್ಲಿ ಕೂತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರೇ ನಿಮ್ಮ ಹಿರಿತನಕ್ಕೆ ಗೌರವವಿದೆ. ಆದರೆ, ರಾಜಕಾರಣದಲ್ಲಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೀರಿ ಎಂದರೆ ಅದಕ್ಕೆ ಯಾರು ಕಾರಣ? ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಗುಡುಗಿದರು.

ಜೆಸಿಬಿ ಮೂಲಕ ಸೇಬಿನ ಹಾರ:

ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಪಟ್ಟಣದ ಹೊರವಲಯ ಶ್ರೀದಂಡಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಿಖಿಲ್‌, ಕಾರ್ಯಕರ್ತನ ಬೈಕ್‌ನಲ್ಲಿ ಬೈಕ್ ಜಾಥಾದಲ್ಲಿ ಪಟ್ಟಣಕ್ಕೆ ಆಗಮಿಸಿದರು. ಪ್ರಮುಖ ವೃತ್ತದಲ್ಲಿ ನಿಖಿಲ್‌ಗೆ ಜೆಸಿಬಿ ಮೂಲಕ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಇದ್ದರು.

ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಪಕ್ಷ ಸಂಘಟನೆ: ನಿಖಿಲ್

ನಾಗಮಂಗಲ ಪಟ್ಟಣದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಅಲ್ಲಿಯವರೆಗೆ ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಪಕ್ಷ ಸಂಘಟನೆ ಮಾಡಬೇಕು. ಎರಡು ಬಾರಿ ಸಿಎಂ ಆಗಿ ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನೀಡಿದ್ದು, ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎಂಬುದು ರಾಜ್ಯದ ಜನರ ಆಶಯವಾಗಿದೆ. ನಾನು ಪ್ರವಾಸ ಕೈಗೊಂಡ ಕ್ಷೇತ್ರಗಳಲ್ಲಿ ಜನಸಾಮಾನ್ಯರ ಬಯಕೆಯೂ ಇದೇ ಆಗಿದೆ. ಆದ್ದರಿಂದ 2028ಕ್ಕೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದರು.

Read more Articles on