ಕಾಲ್ತುಳಿತ ಪ್ರಕರಣ ಮುಚ್ಚಿಹಾಕಲು ಜಾತಿಗಣತಿಯನ್ನೇ ಮೂಲೆಗೆ ಸರಿಸಿದ ಕಾಂಗ್ರೆಸ್‌: ಯದುವೀರ್‌

KannadaprabhaNewsNetwork |  
Published : Jun 12, 2025, 12:55 AM ISTUpdated : Jun 12, 2025, 03:55 AM IST
38 | Kannada Prabha

ಸಾರಾಂಶ

ಕಾಲ್ತುಳಿತ ಪ್ರಕರಣದಿಂದ ಹನ್ನೊಂದು ಜನರ ಜೀವ ಹೋಗಿದೆ. ಈ ವೇಳೆ ಹಿಂದುಳಿದ ವರ್ಗಗಳ ಹಿತ ಬಲಿಕೊಡಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಕಾಂತರಾಜು ವರದಿ ಆಯೋಗ ಮತ್ತು ಜಯಪ್ರಕಾಶ್‌ ಹೆಗ್ಡೆ ವರದಿ ತಿರಸ್ಕರಿಸಿ, ಮರು ಸಮೀಕ್ಷೆಗೆ ಮುಂದಾಗಿದೆ.

 ಮೈಸೂರು : ಕಾಲ್ತುಳಿತ ಪ್ರಕರಣವನ್ನು ಮುಚ್ಚಹಾಕಲು ಕಾಂತರಾಜ್‌ ವರದಿಯನ್ನು ಮೂಲೆಗೆ ಸರಿಸಿ, ಮತ್ತೆ ಮರು ಗಣತಿಗೆ ಸರ್ಕಾರ ಮುಂದಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಿಂದ ಹನ್ನೊಂದು ಜನರ ಜೀವ ಹೋಗಿದೆ. ಈ ವೇಳೆ ಹಿಂದುಳಿದ ವರ್ಗಗಳ ಹಿತ ಬಲಿಕೊಡಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಕಾಂತರಾಜು ವರದಿ ಆಯೋಗ ಮತ್ತು ಜಯಪ್ರಕಾಶ್‌ ಹೆಗ್ಡೆ ವರದಿ ತಿರಸ್ಕರಿಸಿ, ಮರು ಸಮೀಕ್ಷೆಗೆ ಮುಂದಾಗಿದೆ ಎಂದು ದೂರಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಬೇಕಾದ ನಿರ್ಣಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಗೆ ಪ್ರಕಟಿಸಿದರು. ರಾಜ್ಯ ಸರ್ಕಾರದ ಆಡಳಿತವನ್ನು ಕಾಂಗ್ರೆಸ್ ಹೈಕಮಾಂಡ್‌ ನಡೆಸುತ್ತಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ ಎಂದರು.

ಸುದ್ದಿವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮರ್ಯಾದೆ ಹರಾಜಾಗಿದೆ. ಸರ್ಕಾರವನ್ನು ಉಳಿಸಲು ಹೈಕಮಾಂಡ್‌ ವಿಷಯಾಂತರ ಮಾಡುವ ನಿಟ್ಟಿನಲ್ಲಿ ವರದಿ ಕೈಬಿಟ್ಟಿದ್ದಾರೆ. ಇದು ಕಾಂತರಾಜ್ ವರದಿಯೋ?, ಜಯಪ್ರಕಾಶ್ ಹೆಗ್ಡೆ ವರದಿಯೋ?, ಇದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯೋ?, ಜಾತಿಗಣತಿಯೋ? ಎಂದು ಹತ್ತು ವರ್ಷವಾದರು ಸಿದ್ದರಾಮಯ್ಯ ಸರ್ಕಾರಕ್ಕೆ ಈ ಗೊಂದಲ ಬಗೆಹರಿಸಲು ಆಗಿರಲಿಲ್ಲ. 165 ಕೋಟಿ ರು. ಸಾರ್ವಜನಿಕರ ತೆರಿಗೆ ಹಣದಿಂದ ವ್ಯಯಿಸಿ, ಹತ್ತು ವರ್ಷ ಕಾಲಹರಣ ಮಾಡಿ ಈಗ ವರದಿ ತಿರಸ್ಕರಿಸುತ್ತಿರುವುದು ಮುಖ್ಯಮಂತ್ರಿಯ ಬೇಜಾವಾಬ್ದಾರಿ ಅಲ್ಲವೇ ಎಂದು ಯದುವೀರ್‌ ಅವರು ಹರಿಹಾಯ್ದರು.

ಸರ್ಕಾರದ ಖಜಾನೆಗೆ ಆದ 165 ಕೋಟಿ ರು. ನಷ್ಟವನ್ನು ಯಾರು ಭರಿಸುತ್ತಾರೆ?, 2024 ಫೆಬ್ರವರಿಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರಿಂದ ಸಿದ್ದರಾಮಯ್ಯ ಈ ಅವೈಜ್ಞಾನಿಕ ವರದಿ ಸ್ವೀಕರಿಸಿದರು. ಅದನ್ನು ಸಂಪುಟದಲ್ಲಿ ಮಂಡಿಸಲು ಸಿದ್ದರಾಮಯ್ಯ ಅವರಿಗೆ 14 ತಿಂಗಳು ಬೇಕಾಯ್ತು. ಅಂತಹ ಸಿದ್ದರಾಮಯ್ಯ ಈಗ ಮೂರೇ ತಿಂಗಳಲ್ಲಿ ಮತ್ತೊಂದು ಜಾತಿಗಣತಿ ನೆಡಸಿ ವರದಿ ಸಿದ್ಧಪಡಿಸುತ್ತೇವೆ ಎಂದು ಅಮಾಯಕ ಹಿಂದುಳಿದ ಜಾತಿಗಳನ್ನು ಯಾಮಾರಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರಗಳಿಗೆ ಈ ರೀತಿ ಜಾತಿಗಣತಿ ನಡೆಸುವ ಅಧಿಕಾರ ಸಂವಿಧಾನಾತ್ಮಕವಾಗಿ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರ ಈ ಜಾತಿಗಣತಿ ನಾಟಕ ಮಾಡುವುದನ್ನು ಈ ಕೂಡಲೇ ನಿಲ್ಲಿಸಲಿ. ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ ಅದರ ಕಡೆ ಹೆಚ್ಚಿನ ಗಮನಹರಿಸಲಿ ಎಂದು ಕಿವಿಮಾತು ಹೇಳಿದರು.

ಈಗಾಗಲೇ ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿಗಣತಿ ನಡೆಸುವ ನಿರ್ಧಾರವನ್ನೂ ಪ್ರಕಟಿಸಿದೆ. ಸಿದ್ಧತೆಯನ್ನು ಆರಂಭಿಸಿದೆ. ಹೀಗಿರುವಾಗ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಜಾತಿಗಣತಿ ನಡೆಸುವ ಅಧಿಕಾರವೂ ಇಲ್ಲ, ನೈತಿಕತೆಯೂ ಇಲ್ಲ, ಅಗತ್ಯವೂ ಇಲ್ಲ. ಮತ್ತೆ ಜನರ ತೆರಿಗೆ ಹಣವನ್ನು ವ್ಯರ್ತ ಮಾಡದೆ ಅಭಿವೃದ್ಧಿಗೆ ಬಳಸಲಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಬೇಜವಾಬ್ದಾರಿತನದಿಂದ 165 ಕೋಟಿ ರು. ಖಜಾನೆಗೆ ನಷ್ಟ ಮಾಡಿದ್ದಕ್ಕೆ ಯಾರು ಹೊಣೆ ? ಈ ಪ್ರಶ್ನೆಗೆ ಮೊದಲು ಉತ್ತರಿಸಿ ಎಂದರು.

ಕಾವೇರಿ ಆರತಿಗೆ ರೈತರು ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಮೊದಲಿನಿಂದಲೂ ವಿರೋಧಿಸುತ್ತಿದ್ದೇನೆ. ಮೊದಲು ಕೆ.ಆರ್‌.ಎಸ್‌. ಅಣೆಕಟ್ಟು ಮತ್ತು ಬೃಂದಾವನ ರಕ್ಷಣೆ ಮಾಡಿ. ಸಾಕಷ್ಟು ಪ್ರವಾಸಿಗರು ಈಗಾಗಲೇ ಬರುತ್ತಿದ್ದಾರೆ. ಕಾವೇರಿ ಆರತಿಗೆ ಬಳಸುವ ಹಣವನ್ನು ಕಾಲುವೆ ಹುಳು ತೆಗೆದು ರೈತರ ಭೂಮಿ, ಕೆರೆಗೆ ನೀರು ಹರಿಸಲು ಬಳಸಿ ಎಂದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಮತನಾಡಿ, ಯಾವುದೇ ಪೂರ್ವ ತಯಾರಿ ಇಲ್ಲದೆ ರಾಜಕೀಯ ತೆವಲಿಗಾಗಿ. ತಮ್ಮ ಪ್ರಚಾರಕ್ಕಾಗಿ ನಡೆಸಿದ ಆರ್‌.ಸಿ.ಬಿ ವಿಜಯೋತ್ಸದಲ್ಲಿ 11 ಜನ ಅಮಾಯಕರ ಪ್ರಾಣತೆಗೆದ ಕೊಲೆಗಡುಕ ಸರ್ಕಾರ ಇದು, ಜಾತಿಗಣತಿ ಗೊಂದಲ ಸೃಷ್ಟಿಸಿ ರಾಜ್ಯದ ಜನರ ಗಮನ ಬೇರೆಡೆಗೆ ಸೆಳೆಯುವ ದುಷ್ಟ ಪ್ರಯತ್ನಕ್ಕೆ ಯಾರೂ ಕವೆಡೆಕಾಸಿನ ಕಿಮ್ಮತ್ತು ಕೊಡಬೇಕಾಗಿಲ್ಲ ಎಂದರು.

ಈಗ ಶಾಲೆ ಆರಂಭವಾಗಿದೆ. ಮತ್ತೆ 90 ದಿನಗಳಲ್ಲಿ ಜಾತಿಗಣತಿ ನಡೆಸಲು ಸಾಧ್ಯವೇ?, ಅಹಿಂದ ನಾಯಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರು ಮತ್ತೆ ಅಹಿಂದ ಜನರಿಗೆ ಮೋಸಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕ್ರಮವಾಗಲಿ:

ಆರ್.ಸಿ.ಬಿ ವಿಜಯೋತ್ಸವದಲ್ಲಿ ಬಲಿಯಾದ 11 ಜನ ಅಮಾಯಕರ ಸಾವಿಗೆ ನ್ಯಾಯ ದೊರಕಬೇಕು. ಈ ಪ್ರಕರಣಕ್ಕೆ ಯಾರು ಕಾರಣರೋ ಅವರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣನ್ನು ಮರೆಮಾಚಲು ಮಾಡುವ ಹುನ್ನಾರಕ್ಕೆ ಜನರೆ ಉತ್ತರಿಸುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್‌ ಮಹೇಶ್‌, ಗಿರೀಧರ್‌, ಮಾಧ್ಯಮ ಸಂಚಾಲಕ ಮಹೇಶ್‌ರಾಜ್‌ ಅರಸ್‌ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು