;Resize=(412,232))
ಬೆಂಗಳೂರು : ‘ಏಕನಾಥ್ ಶಿಂಧೆ ಒಬ್ಬರೇ, ಪವಾರ್ ಕೂಡ ಒಬ್ಬರೇ ಅವರಂತೆ ಮತ್ತೊಬ್ಬರು ಹುಟ್ಟಿಕೊಳ್ಳಲು ಆಗುವುದಿಲ್ಲ. ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದಿಲ್ಲ. ಯಾವುದೇ ಕ್ರಾಂತಿಗೂ ಹೈಕಮಾಂಡ್ ಅವಕಾಶ ನೀಡುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಆ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಬಂಡಾಯದ ಪ್ರಯತ್ನ ಅಸಾಧ್ಯ ಎಂದು ಹೇಳಿರುವ ಅವರು, ‘ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದಿಲ್ಲ. ಆದರೂ ಬಿಜೆಪಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ರೊಟ್ಟಿ ಬಿದ್ದರೂ ತುಪ್ಪದಲ್ಲೇ ಬೀಳುತ್ತದೆ. ಹೀಗಾಗಿ ಬೇರೊಂದು ಪಕ್ಷಕ್ಕೆ ಲಾಭವಾಗಲ್ಲ’ ಎಂದು ಸೂಚ್ಯವಾಗಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಹಾರಾಷ್ಟ್ರ ಮಾದರಿ ರಾಜಕೀಯ ಬೆಳವಣಿಗೆ ನಡೆಯಲಿದೆ ಎಂದಿರುವ ಪ್ರತಿಪಕ್ಷಗಳಿಗೆ ಪ್ರತಿಕ್ರಿಯಿಸಿ, ‘ಶಿಂಧೆ ಹಾಗೂ ಪವಾರ್‌ರಂಥವರು ಮತ್ತೊಬ್ಬರು ಆಗುವುದಿಲ್ಲ. ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದಿಲ್ಲ. ಇನ್ನೊಂದು 20-30 ದಿನ ಇದೆ ಅಷ್ಟೇ. ಏನಾಗುತ್ತೆ ನೋಡೋಣ. ಯಾವುದೇ ಕ್ರಾಂತಿ ಆಗೋದಕ್ಕೆ ಹೈಕಮಾಂಡ್ ಬಿಡಬೇಕಲ್ವಾ? ಹೈಕಮಾಂಡ್ ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದರು.
ಅಹಿಂದ ನಾಯಕತ್ವ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ನಾನು 30 ವರ್ಷದಿಂದ ಅಹಿಂದದ ಭಾಗವಾಗಿದ್ದೇನೆ. ಜೆಡಿಎಸ್ ನಲ್ಲಿದ್ದಾಗಲೂ ಅಹಿಂದ ಭಾಗವೇ ಆಗಿದ್ದೆ. ಈಗಲೂ ಅಹಿಂದ ಭಾಗವೇ. ಪರಮೇಶ್ವರ್, ಮಹದೇವಪ್ಪ ಎಲ್ಲರೂ ಅದರ ಭಾಗವೇ ಆಗಿದ್ದು, 2028ರಲ್ಲಿ ಚುನಾವಣೆ ಆಗಬೇಕು. ಅಂದಿನ ಸ್ಥಿತಿಗತಿ ನೋಡಿಕೊಂಡು ನಾಯಕತ್ವ ನಿರ್ಧಾರ ಆಗಲಿದೆ ಎಂದು ಹೇಳಿದರು.
ಯತೀಂದ್ರ ಹೇಳಿಕೆ ಸಮರ್ಥಿಸಿದ ಸತೀಶ್, ಯತೀಂದ್ರ ಅವರು ಎಲ್ಲೂ ಮುಖ್ಯಮಂತ್ರಿ ಸ್ಥಾನವಾಗಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಮಾತನಾಡಿಲ್ಲ. ನಾವೇನೂ ಮುಖ್ಯಮಂತ್ರಿ ಸ್ಥಾನ ಕೇಳಿಲ್ಲ. ಯಾರು ಯತೀಂದ್ರ ಹೇಳಿಕೆ ವಿರೋಧಿಸುತ್ತಿದ್ದಾರೋ ಅವರು ತಪ್ಪು ತಿಳಿದುಕೊಂಡಿದ್ದಾರೆ ಎಂದರ್ಥ ಎಂದು ಹೇಳಿದರು.