;Resize=(412,232))
ನವದೆಹಲಿ: ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಉದ್ಯಮ ಆರಂಭಕ್ಕೆ ಎರಡು ಸಂಸ್ಥೆಗಳು ಮುಂದಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ವಾಸ್ತವವಾಗಿ ಬೆಂಗಳೂರಿಗೆ ಬರಬೇಕೆಂದಿದ್ದರೂ ಸೆಮಿಕಂಡಕ್ಟರ್ ಉದ್ಯಮಗಳು ಕೇಂದ್ರ ಸರ್ಕಾರದಿಂದಾಗಿ ಅಸ್ಸಾಂ ಹಾಗೂ ಗುಜರಾತ್‌ಗೆ ಹೋಗುತ್ತಿವೆ. ಆ ರಾಜ್ಯಗಳಲ್ಲಿ ಅಂಥದ್ದೇನಿದೆ? ಅಲ್ಲಿ ಪ್ರತಿಭೆ ಇದೆಯೇ?’ ಎಂದು ವ್ಯಂಗ್ಯವಾಡಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಪ್ರಿಯಾಂಕ್ ಖರ್ಗೆ ನೀಡಿದ ಈ ಹೇಳಿಕೆ ವಿವಾದಕ್ಕೆ ಕಾಣವಾಗಿದೆ. ಅಸ್ಸಾಂ ಕುರಿತ ಈ ಹೇಳಿಕೆಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾರ ಮತ್ತು ಅಸ್ಸಾಂ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ತಾವು ಹೇಳಿದ್ದು ಹಾಗಲ್ಲ ಎಂದು ಪ್ರಿಯಾಂಕ್ ಸ್ಪಷ್ಟನೆ ನೀಡಿದ್ದರೂ ಅಸ್ಸಾಂ ಸಿಎಂ ಮೇಳೆ ಹರಿಹಾಯ್ದಿದ್ದಾರೆ.
ಅದರ ಬೆನ್ನಲ್ಲೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಚಿವ ಪ್ರಿಯಾಂಕ್ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿರುವ ಖರ್ಗೆ, ‘ನನ್ನ ಹೇಳಿಕೆ ಸ್ಪಷ್ಟವಾಗಿತ್ತು. ಕರ್ನಾಟಕದಲ್ಲಿ ಸ್ಥಾಪಿತ ಪರಿಸರ ಹಾಗೂ ಪ್ರತಿಭೆಯಿರುವ ಕಾರಣ ಸೆಮಿಕಂಡಕ್ಟರ್ ಕಂಪನಿಗಳು ಇಲ್ಲಿಗೆ ಬರಲು ಆಸಕ್ತಿ ತೋರಿಸಿದ್ದರೂ ಅವುಗಳನ್ನು ಗುಜರಾತ್ ಮತ್ತು ಅಸ್ಸಾಂಗೆ ಒತ್ತಾಯಪೂರ್ವಕವಾಗಿ ಕಳಿಸಲಾಗಿದೆ. 10 ವರ್ಷ ಬಿಜೆಪಿ ಆಡಳಿತದಲ್ಲಿರುವ ಅಸ್ಸಾಂ, ಅಭಿವೃದ್ಧಿ ಸೂಚ್ಯಂಕಗಳಾದ ಆರೋಗ್ಯ, ಶಿಕ್ಷಣ, ಆರ್ಥಿಕ ಬೆಳವಣಿಗೆಯಲ್ಲಿ ಕೊನೆಯ 5 ರಾಜ್ಯಗಳಲ್ಲಿ ಸ್ಥಾನ ಪಡೆದಿದೆ. ಇಷ್ಟು ವರ್ಷದಲ್ಲಿ ಅಲ್ಲಿನ ಸಿಎಂ ಹಿಮಂತ ಬಿಶ್ವ ಶರ್ಮಾ ಬೆಳೆಸಿಕೊಂಡದ್ದು ತಮ್ಮ ಸಂಪತ್ತನ್ನು ಮಾತ್ರ. ಅತ್ತ ಯುವಕರಿಗೆ ಉದ್ಯೋಗಾವಕಾಶವೇ ಇಲ್ಲ’ ಎಂದು ಹರಿಹಾಯ್ದಿದ್ದಾರೆ.
ಜತೆಗೆ, ‘ನನ್ನ ಹೇಳಿಕೆಯನ್ನು ತಿರುಚಿ ತಮ್ಮ ವೈಫಲ್ಯ ಮುಚ್ಚಿಹಾಕಲು ಯತ್ನಿಸುವ ಬದಲು, ಯುವಕರಿಗಾಗಿ ತಾವೇನು ಮಾಡಿದ್ದೇವೆ? ಅವರೇಕೆ ಅಸ್ಸಾಂ ತೊರೆಯುತ್ತಿದ್ದಾರೆ? ಎಂದು ಬಿಸ್ವ ತಮಗೆ ತಾವೇ ಕೇಳಿಕೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಗುರಿ ಜನರಲ್ಲಿ ಕೌಶಲ್ಯ, ಉದ್ಯೋಗ ಮತ್ತು ಸರ್ಕಾರದ ಪ್ರತಿ ನಂಬಿಕೆಯನ್ನು ಬೆಳೆಸುವುದಾಗಿರುತ್ತದೆ. ರಾಜ್ಯದ ಎಲ್ಲರೂ ಪ್ರತಿಭಾವಂತರಾಗಿ, ಯುವಕರು ಭ್ರಷ್ಟ ಆಡಳಿತ ಮತ್ತು ವಿಭಜಕ ರಾಜಕೀಯದಿಂದ ಮುಕ್ತವಾಗಿರುವಂತಹ ವಾತಾವರಣ ನಿರ್ಮಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.