ಬೆಂಗಳೂರು : ಚುನಾವಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಾಳೆಯದಲ್ಲಿ ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 9 ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂಬ ವಿಶ್ವಾಸ ಪಕ್ಷದ ನಾಯಕರಲ್ಲಿ ಕಂಡು ಬರುತ್ತಿದೆ.
ಉಳಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷ ಗೆಲುವಿನ ತುದಿಯಲ್ಲಿದ್ದರೆ, ಇನ್ನೆರಡು ಕ್ಷೇತ್ರಗಳಲ್ಲಿ 50-50 ಅವಕಾಶವಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಫಲ ನೀಡಿದರೆ 16ರಿಂದ 17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯೂ ಇದೆ ಎಂಬ ಮಾತು ಕಾಂಗ್ರೆಸ್ಸಿಗರಿಂದ ಕೇಳಿಬರುತ್ತಿದೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಎದುರು ರಾಜ್ಯದ ಗ್ಯಾರಂಟಿ ಯೋಜನೆಗಳು ನಿರೀಕ್ಷೆಗಿಂತ ಕಡಿಮೆ ಕೆಲಸ ಮಾಡಿದರೂ 10-12 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ.
ಒಟ್ಟಾರೆ ಮೊದಲ ಹಂತದ (ದಕ್ಷಿಣ ಕರ್ನಾಟಕ) ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ (ಉತ್ತರ ಕರ್ನಾಟಕ) ಹೆಚ್ಚಿನ ಸ್ಥಾನ ಲಭ್ಯವಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಗ್ಯಾರಂಟಿಗಳ ಪರಿಣಾಮ ತೀವ್ರ ಪ್ರಮಾಣದಲ್ಲಿ ಕೆಲಸ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ತೀವ್ರ ಪರಿಣಾಮ ಬೀರಿದೆ. ಜತೆಗೆ ಕಾಂಗ್ರೆಸ್ ಶ್ರೇಯಸ್ ಪಟೇಲ್ ಮೂಲಕ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹೀಗಾಗಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ.
ಇನ್ನು ಚಿತ್ರದುರ್ಗ ಕಾಂಗ್ರೆಸ್‌ನ ಮತಗಳು ಹೆಚ್ಚಾಗಿರುವ ಜತೆಗೆ ಗ್ಯಾರಂಟಿ ಜತೆಯಾಗಿ ಸುಲಭವಾಗಿ ಗೆಲ್ಲುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಚಾಮರಾಜನಗರದಲ್ಲೂ ಇದೇ ಸ್ಥಿತಿಯಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಗೆಲುವಿನ ತುದಿಯಲ್ಲಿ ನಿಂತಿದೆ. ಅಂತಿಮ ಕ್ಷಣದಲ್ಲಿ ಏನಾದರೂ ಆಗಬಹುದು ಎಂಹ ಹಂತದಲ್ಲಿ ಫಲಿತಾಂಶ ನಿಂತಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್. ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸಿದ್ದರೂ ಡಿ.ಕೆ.ಸುರೇಶ್ ತಳಮಟ್ಟದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಜತೆಗೆ ಜನರಿಗೆ ಸಿಗುವ ನಾಯಕ ಎಂಬ ಹೆಸರಿದೆ. ಜೆಡಿಎಸ್‌ಗೆ ತಳಮಟ್ಟದಲ್ಲಿ ಸಂಘಟನೆಯಿದ್ದರೂ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿದೆ.
ಮಂಡ್ಯ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಯಾವುದಕ್ಕೂ ಕೊರತೆಯಿಲ್ಲದಂತೆ ಚುನಾವಣೆ ಮಾಡಿದ್ದಾರೆ. ಜೆಡಿಎಸ್‌ನಿಂದ ಎಚ್.ಡಿ.ಕುಮಾರಸ್ವಾಮಿ ಅವರು ನಿಂತಿದ್ದರೂ ಕೊನೆ ಕ್ಷಣದವರೆಗೆ ಎಲ್ಲಾ ರೀತಿಯಲ್ಲೂ ಗೆಲ್ಲುವ ಸಲುವಾಗಿ ಕೃಷಿ ಮಾಡಿದ್ದಾರೆ. ಕುಮಾರಸ್ವಾಮಿಯಿಂದ ಒಕ್ಕಲಿಗರು ಶೇ.60 ರಿಂದ 70 ರಷ್ಟು ಜೆಡಿಎಸ್‌ಗೆ ಮತ ಹಾಕಿದರೂ ಹಿಂದುಳಿದ ವರ್ಗ, ಲಿಂಗಾಯತ ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದು.
ಇನ್ನು ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಮೀರಿ ಕೆಲಸ ಮಾಡಿ ಕಾಂಗ್ರೆಸ್ಸನ್ನು ಗೆಲುವಿನ ಸನಿಹ ತಂದಿದ್ದಾರೆ. ಇನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಗಟ್ಟಿ ಪೈಪೋಟಿ ನೀಡಿದೆ ಎಂದ ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕದಲ್ಲಿ ಉತ್ತಮ ಸ್ಥಾನ ಗಳಿಕೆ:
ಇನ್ನು ಉತ್ತರ ಕರ್ನಾಟಕದಲ್ಲಿ ಕಲಬುರಗಿ, ಬೀದರ್, ಚಿಕ್ಕೋಡಿ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಮತ್ತು ರಾಯಚೂರಿನಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಶಿವಮೊಗ್ಗ, ವಿಜಯಪುರ ಕ್ಷೇತ್ರಗಳಲ್ಲಿ ಹಿನ್ನಡೆಯಾಗುವ ಅನುಮಾನವೂ ಕಾಂಗ್ರೆಸ್ ಪಾಳೆಯದಲ್ಲಿದೆ.