-ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

ರಾಜಕೀಯ ಕಾರಣಗಳನ್ನು ಮೀರಿ ಯೋಚಿಸಿದರೆ ಭಾರತ ದೇಶ ಮತ್ತು ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ನಡೆದ ವಿದ್ಯಾಮಾನಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಳವಾದ ನಂಬಿಕೆ ಇಟ್ಟವರಿಗೆ ದಿಗ್ಭ್ರಮೆ ಹುಟ್ಟಿಸುತ್ತದೆ. ಕರ್ನಾಟಕ ವಿಧಾನಸೌಧದ ಅವಳಿ ಸದನದಲ್ಲಿ ನಡೆದ ಘಟನೆಗಳೊಂದಿಗೆ ದೇಶದ ಸಾರ್ವಭೌಮತ್ವದ ಸಂಕೇತವಾದ ಲೋಕಸಭೆಯಲ್ಲಿ ನಡೆದ ಮತ್ತು ಮುಂದೆ ನಡೆಯಬಹುದಾದ ವಿದ್ಯಮಾನಗಳು ಎಲ್ಲೋ ಒಂದು ಕಡೆ ಪ್ರಜಾಪ್ರಭುತ್ವದ ಅಡಿಪಾಯದ ಒಂದೊಂದು ಕಲ್ಲುಗಳು ಜಾರುತ್ತಿರುವ ಅಥವಾ ಜಾರಿಸುತ್ತಿರುವ ಭಯ ಉಂಟು ಮಾಡುತ್ತಿದೆ. ಪಾರ್ಲಿಮೆಂಟಿನಲ್ಲಿ ಫೆಬ್ರವರಿ 1ನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ಮೂಲಕ ಆರಂಭವಾದ ಚಳಿಗಾಲದ ಅಧಿವೇಶನದ ನಂತರ ಇಂದಿನವರೆಗೆ ಒಂದು ದಿನವೂ ಪೂರ್ಣ ಅಧಿವೇಶನ ನಡೆದಿಲ್ಲ ಅಥವಾ ವಿಪಕ್ಷಗಳು ನಡೆಯಲು ಬಿಟ್ಟಿಲ್ಲ.

ಪುಸ್ತಕ ನೆಪದಲ್ಲಿ ಸಮಯ ವ್ಯರ್ಥ:

ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದಲ್ಲಿ ಮಾತನಾಡಲು ಎದ್ದು ನಿಂತ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು, ನಿಷೇಧಿತ ಪುಸ್ತಕವೊಂದನ್ನು ಸದನಕ್ಕೆ ತೋರಿಸುತ್ತಾ ಇದರ ಬಗ್ಗೆ ಚರ್ಚಿಸಲು ಅವಕಾಶ ಕೋರಿದ್ದರು ಅಥವಾ ಚರ್ಚಿಸಲು ಆರಂಭಿಸಿದ್ದರು. ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಎದ್ದು ನಿಂತು, ‘ಸದನದಲ್ಲಿ ನಿಷೇಧಿತ ಪುಸ್ತಕವನ್ನು ಅಥವಾ ಪ್ರಕಟಣೆಗೊಳ್ಳದ ಪುಸ್ತಕವನ್ನು ಪ್ರದರ್ಶಿಸಿ ಉಲ್ಲೇಖಿಸುವಂತಿಲ್ಲ’ ಎಂದು ಹೇಳಿದ್ದು, ಸದನ ಕೇಳಿತ್ತು. ಇಲ್ಲಿಂದ ಪ್ರಾರಂಭವಾದ ಸರಕಾರ ಮತ್ತು ಪ್ರತಿಪಕ್ಷದ ವಾದ ವಿವಾದಗಳು ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳ ಪೂರ್ಣ ಸಮಯವನ್ನು ನುಂಗಿ ಹಾಕಿದವು ಮಾತ್ರವಲ್ಲ, ಮತ್ತೆ ಈ ಲೇಖನ ಬರೆಯುವವರೆಗೆ ಮುಂದುವರಿದು ಅಥವಾ ಹೊರ ಪ್ರಪಂಚಕ್ಕೆ ಗೊತ್ತಿರುವಂತೆ, ಪ್ರಧಾನಿ ನರೇಂದ್ರ ಮೋದಿಯವರ ಇಡೀ ಕ್ಯಾಬಿನೆಟ್ ಜೊತೆ 543 ಲೋಕಸಭಾ ಸದಸ್ಯರ ಸಮಯ ವ್ಯರ್ಥವಾದದ್ದು ಹಾಗೂ ದಿನವೊಂದಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ನಿರರ್ತಕವಾದದ್ದು ಯಾರ ಗೌರವವನ್ನೂ ಹೆಚ್ಚಿಸಲಿಲ್ಲ.


ವಿರೋಧ ಪಕ್ಷದ ತಮ್ಮ ನಾಯಕ ರಾಹುಲ್‌ ಗಾಂಧಿಯವರ ಸಹಮತ ಇದ್ದಿತ್ತೋ, ಇಲ್ಲವೋ... ಸದನಕ್ಕಿಳಿದು ಸ್ಪೀಕರ್ ಮುಖಕ್ಕೆ ಕಾಗದದ ಚೂರುಗಳನ್ನು ಎಸೆದು ವಿಜಯೋತ್ಸವ ಆಚರಿಸಿದ್ದು ಬಹುತೇಕ ಪ್ರಜಾಪ್ರಭುತ್ವದ ಹೆಸರಲ್ಲಿ ನಡೆದ ಸ್ವೇಚ್ಚಚಾರಿತನ. ಇದು ಜನತಂತ್ರ ವ್ಯವಸ್ಥೆಯ ಗೌರವ ಹೆಚ್ಚಿಸುವುದಿಲ್ಲವೆಂದು ಇಂತಹ ಘಟನೆ ಸಾರಿ ಸಾರಿ ಸಮಾಜಕ್ಕೆ ಹೇಳುತ್ತಿವೆ.ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಗೆದ್ದ ಸಂದರ್ಭ, ಪಾಕಿಸ್ತಾನಕ್ಕೆ ಜೈ ಎಂದಿದ್ದರಿಂದ ಆರಂಭವಾಗಿ ಮೊನ್ನೆ ನಡೆದ ಅಧಿವೇಶನದಲ್ಲಿ ಮಾತನಾಡಲು ಬಂದ ರಾಜ್ಯಪಾಲರನ್ನು ಅಡ್ಡಗಟ್ಟಿದ ಪ್ರಕರಣದವರೆಗೆ ರಾಜ್ಯ ಸರ್ಕಾರ ಎತ್ತಸಾಗುತ್ತಿದೆ? ಎಂಬುದೇ ಅರ್ಥ ಮಾಡಿಕೊಳ್ಳುವುದು ಕಷ್ಟ.

ವಿಧಾನಸಭೆಯಲ್ಲಿ ಕಾಂಗ್ರೆಸ್ಸಿಗನ ಹಿರಿಯ ಸದಸ್ಯ ಶಿವಲಿಂಗೇಗೌಡರು ಪ್ರತಿಪಕ್ಷಗಳಿಗೆ ಬಳಸಿದ ಶಬ್ಧ, ವಿಧಾನ ಪರಿಷತ್ತಿನಲ್ಲಿ ನಸೀರ್ ಅಹ್ಮದ್, ಪ್ರಧಾನಿ ಮೋದಿಯವರ ಬಗ್ಗೆ ಆಡಿದ ವಾಕ್ಯ. ಈ ಘಟನೆಯ ಬಗ್ಗೆ ಅವಳಿ ಸದನಗಳ ಸ್ಪೀಕರ್ ಮತ್ತು ಸಭಾಪತಿಯವರ ಅಸಾಹಯಕತೆ ಹೇಗಿತ್ತೆಂದರೆ, ಮದವೇರಿದ ಆನೆಗಳಿಗೆ ಅಂಕುಶವಿಲ್ಲದ ಅನಾಮಿಕ ಮಾವುತನ ಪಾಡಾಯ್ತು.

ರಮೇಶ್‌ ಮಾತು ಸರ್ವಕಾಲಿಕ:

ಬಹುತೇಕ ಸಕ್ರೀಯ ರಾಜಕಾರಣದಲ್ಲಿ ಉಭಯ ಸದನಗಳ ವ್ಯವಸ್ಥೆ ಹಲ್ಲಿಲ್ಲದ ಹಾವಿನಂತಾಗಿತ್ತು. ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಮಾತನಾಡುತ್ತಾ, ‘ರಾಜ್ಯದ ಮೂಲೆ ಮೂಲೆಯಲ್ಲಿ ವಾಸಿಸುವ ಪೇಟೆ- ಪಟ್ಟಣಗಳನ್ನು ಸರಿಯಾಗಿ ಕಾಣದ, ತುತ್ತು ಊಟಕ್ಕೂ ಕಷ್ಟ ಪಡುವ, ಶಿಕ್ಷಣ ವಂಚಿತ ಕಡು ಬಡವರಿಗೆ ವಾಸಿಸಲೊಂದು ಮನೆ, ಕುಡಿಯುವ ನೀರು, ತುತ್ತು ಅನ್ನದ ಸಂಕಷ್ಟ ಹೇಳಿಕೊಳ್ಳಲು ವಿಧಾನಸೌಧಕ್ಕೆ ನಿತ್ಯ ಅಲೆದಾಡಲು ಸಾಧ್ಯವಿಲ್ಲ. ಅಂತವರ ಧ್ವನಿಯಾಗಿ, ಕರ್ನಾಟಕ ರಾಜ್ಯದ 224 ಕ್ಷೇತ್ರಗಳಲ್ಲಿ ಅವರ ಪ್ರತಿನಿಧಿಗಳಾಗಿ ನೀವೆಲ್ಲಾ ಪ್ರವೇಶಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ವಿಧಾನಸೌಧದಲ್ಲಿ ನಿಮ್ಮ ಕೆಲಸ ಕಾರ್ಯಗಳು ಬದುಕಲು ಬಡಿದಾಡುವ ಜನರ ಪರವಾಗಿರಬೇಕು’ ಎಂದಿದ್ದರು.

ರಾಜ್ಯದ ಆದರ್ಶ ರಾಜಕಾರಣಿ ಡಾ। ಆಚಾರ್ಯರು ಎಂದೋ ಹೇಳಿದ್ದ ನೆನಪು. ಕರ್ನಾಟಕದ ವಿಧಾನಸಭೆ, ಪರಿಷತ್ತಿನ ಅವಳಿ ಸದನಗಳ ಸದಸ್ಯರ ತರಬೇತಿ ಕಾರ್ಯಕ್ರಮಕ್ಕೆ ಈ ನಾಡಿನ ಹಿರಿಯ ರಾಜಕಾರಣಿ ಜಗನ್ನಾಥ ರಾವ್ ಜೋಶಿಯವರನ್ನು ಆಹ್ವಾನಿಸಲಾಗಿತ್ತಂತೆ. ಶಾಸಕರನ್ನುದ್ದೇಶಿಸಿ ಜಗನ್ನಾಥ ರಾಯರು ‘ಎಲಾ ಮಕ್ಕಳ್ರಾ’ ಎಂದು ಕರೆಯುವುದರ ಮೂಲಕ ಇಡೀ ಸಭೆಯನ್ನೊಮ್ಮೆ ಸ್ತಂಭನಗೊಳಿಸಿದ್ದರು. ಮಾತು ಮುಂದುವರಿಸಿ, ‘ಈ ರಾಜ್ಯದಲ್ಲಿ ನಿಮಗಿಂತ ಯೋಗ್ಯರು, ನಿಮಗಿಂತ ಪ್ರಾಮಾಣಿಕರು, ನಿಮಗಿಂತ ವಿದ್ಯಾವಂತರು, ನಿಮಗಿಂತ ಬುದ್ಧಿವಂತರು, ರಾಷ್ಟ್ರಭಕ್ತರು ಕೋಟ್ಯಂತರ ಜನ ಹೊರಗಿದ್ದಾರೆ. ಉಳಿದವರಿಗಿಂತ ನಿಮ್ಮ ಹಣೆಬರಹದ ರೇಖೆಗಳು ಚೆನ್ನಾಗಿರುವುದರಿಂದ ನೀವು ಈ ಸದನದೊಳಗೆ ಬಂದಿದ್ದೀರಿ. ನಿಮಗಿಂತ ಸಾವಿರ ಪಾಲು ಶಾಸಕರಾಗಬಲ್ಲ ಸಾಮರ್ಥ್ಯ ಉಳ್ಳವರು ಹೊರಗಿದ್ದಾರೆ ಎಂದು ತಿಳಿದುಕೊಂಡು ಸದನದ ಒಳಗೆ ಕೆಲಸ ಮಾಡಿ’ ಎಂದು ನೂತನ ಶಾಸಕರಿಗೆ ತಿಳಿಯ ಹೇಳಿದ್ದರಂತೆ. ದುರಾದೃಷ್ಣಕ್ಕೆ ಅರ್ಥ ಮಾಡಿಕೊಳ್ಳಬೇಕಿದ್ದವರು ನಡೆದದ್ದೇ ದಾರಿ ಅಂದುಕೊಂಡಿದ್ದೇವೆ.

ಪ್ರತಿಪಕ್ಷಗಳ ಕುತಂತ್ರ:

ಎಲ್ಲಕ್ಕಿಂತ ಹೆಚ್ಚಾಗಿ ಮೊನ್ನೆ ಗುರುವಾರ ಅಂದರೆ ಪಾರ್ಲಿಮೆಂಟ್ ಪ್ರಾರಂಭವಾದ 5ನೇ ದಿನ ಸ್ಪೀಕರ್ ಓಂ ಬಿರ್ಲಾ ತನ್ನ ಪೀಠದಲ್ಲಿ ಕುಳಿತು ಹೇಳಿದ್ದು, ದಿಗ್ಭ್ರಮೆ ಹುಟ್ಟಿಸಿದೆ. ‘ಘನವೆತ್ತ ರಾಷ್ಟ್ರಪತಿಯವರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಬರುವ ಪ್ರಧಾನಿಗೆ ಅವಮಾನ ಮಾಡಿ ಅದನ್ನೇ ವಿದೇಶದಲ್ಲಿ ಸುದ್ದಿಯಾಗಿಸಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಲು ಪ್ರತಿಪಕ್ಷಗಳು ಸಂಚು ಹೂಡಿದ್ದು, ನನಗೆ ಗಮನಕ್ಕೆ ಬಂದಿತ್ತು. ಹಾಗಾಗಬಾರದೆಂದು ನಾನು ಪ್ರಧಾನಿಯವರಲ್ಲಿ ಇಂದು ಸದನದಲ್ಲಿ ಭಾಗವಹಿಸುವುದು ಬೇಡ ಎಂದು ಮನವಿ ಮಾಡಿದ್ದೆ. ಪ್ರಧಾನ ಮಂತ್ರಿಗಳು ಕೆಲ ಸದಸ್ಯರ ಕೆಟ್ಟ ನಡವಳಿಕೆ ಗಮನಿಸಿ, ನನ್ನ ಮನವಿಯನ್ನು ಸ್ವೀಕರಿಸಿದರು. ಇಂತಹ ಘಟನೆಗಳಿಗೆ ಪ್ರತಿಪಕ್ಷ ಇಳಿಯಬಾರದು. ಇದು ಭಾರತದ ಸಾರ್ವಭೌಮತೆಯ ಗೌರವವನ್ನು ಹೆಚ್ಚಿಸುವುದಿಲ್ಲ’ ಎಂದು ನೋವಿನಿಂದ ನುಡಿದಿದ್ದರು.

ಇದೇ ಸದನದಲ್ಲಿ ಪ್ರೋಕ್ರಾನ್ ಅಣುಸ್ಫೋಟದ ವೇಳೆ ಅಂದಿನ ಪ್ರಧಾನಿ ಅಟಲ್ ಜೀ ಯವರತ್ತ ಮುಖಮಾಡಿ ಲಾಲೂ ಪ್ರಸಾದ್ ಯಾದವ್, ‘ಅಟಲ್‌ಜಿ ಬುದ್ಧಿ ಇಲ್ಲದ ಹುಡುಗರು ಸಣ್ಣ ಸಣ್ಣ ಬಾಂಬ್ ಸಿಡಿಸಿದಾಗ ಹಿಡಿದು ಜೈಲಿಗೆ ಹಾಕುವ ನೀವು ಇಷ್ಟು ದೊಡ್ಡ ಅಣುಬಾಂಬ್ ಹಾಕಿ ಏನು ಆಗದಂತೆ ಕುಂತಿದ್ದಿರಲ್ಲಾ’ ಎಂದು ಅಮಾಯಕನಂತೆ ಛೇಡಿಸಿ ಪ್ರಶಂಸಿಸಿದ್ದರು. ಪ್ರತಿಪಕ್ಷದಲ್ಲಿ ನಿಂತು ಲೀಲಾಜಾಲವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಾಜಪೇಯಿಯವರನ್ನು ಮುಕ್ತ ಕಂಠದಿಂದ ಹೊಗಳಿದ ನೆಹರು, ‘ಮುಂದೊಂದು ದಿನ ನೀವು ಈ ದೇಶದ ಪ್ರಧಾನಿಯಾಗುತ್ತೀರಿ’ ಎಂದು ಪ್ರಶಂಸೆ ಮಾಡಿದ್ದನ್ನು ಗಮನಿಸಿದ್ದೆ. ಬಾಂಗ್ಲಾ ವಿಮೋಚನೆ ಮಾಡಿದಾಗ ಇಂದಿರಾ ಗಾಂಧಿಯವರನ್ನು ಅಟಲ್ ಅವರು ಪಕ್ಷಬೇಧ ಮರೆತು ಪ್ರಶಂಸಿಸಿದ್ದರು ಎಂದು ಕೇಳಿ ತಿಳಿದಿದ್ದೆ.

ಸಂವಿಧಾನದ ಆಶಯಕ್ಕೆ ಮಸಿ:

ಡೆಮಾಕ್ರೆಸಿಯಲ್ಲಿ ವಾದ ವಿವಾದಗಳಾಗಬೇಕು, ಟೀಕೆ ಟಿಪ್ಪಣಿಗಳು ಇರಬೇಕು. ಆರೋಪ ಪ್ರತ್ಯಾರೋಪ ಸಹಜ. ಆದರೆ, ದೇಶದ ಮತ್ತು ಸಮಾಜದ ಹಿತ ಬಂದಾಗ ಎಲ್ಲರೂ ಒಟ್ಟಾಗಿರಬೇಕೆಂದು ಸಂವಿಧಾನದ ಆಶಯ. ಅದನ್ನೇ ಸಂವಿಧಾನದ ಸೃಷ್ಟಿಕರ್ತ ಬಾಬಾ ಸಾಹೇಬ್ ಅಂಬೇಡ್ಕರ್ ಉಲ್ಲೇಖಿಸಿ, ‘ಸಂವಿಧಾನದ ಶ್ರೇಷ್ಠತೆ ಇರುವುದು ಅದರ ಅನುಷ್ಠಾನ ಮಾಡುವ ಜನಪ್ರತಿನಿಧಿಗಳ ಮನೋಸ್ಥಿತಿಯನ್ನು ಅವಲಂಬಿಸಿದೆ’ ಎಂದಿದ್ದರು.

ಸ್ವತಂತ್ರ ಭಾರತದ ಶತಮಾನೋತ್ಸವ 2047ಕ್ಕೆ ವಿಕಸಿತ ಭಾರತ ಆಗಬೇಕಾದರೆ ಜನಪ್ರತಿನಿಧಿಗಳು, ತಮಗಿಂತ ತಮ್ಮ ಜಾತಿ ಧರ್ಮಕ್ಕಿಂತ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ದುಡಿಯಬೇಕಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವವರು, ಪಾರ್ಲಿಮೆಂಟಿನಲ್ಲಿ ಪ್ರಧಾನಿಗೆ ಮುತ್ತಿಗೆ ಹಾಕುವವರ ಮನಸ್ಥಿತಿ ಗಮನಿಸಿದರೆ ಗಾಂಧಿ ಹೇಳಿದ ರಾಮರಾಜ್ಯದ ಕನಸು ನನಸಾಗುವುದು ಎಂದೋ...?