- ರಾಗಾ ಮಾತಿಗೆ ತಡೆ, 8 ಸಂಸದರ ಅಮಾನತು ಹಿನ್ನೆಲೆ
-ನಿರ್ಣಯ ಮಂಡನೆಗೆ ವಿಪಕ್ಷ ಸಂಸದರ ಸಹಿ ಸಂಗ್ರಹಪಿಟಿಐ ನವದೆಹಲಿ
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಸಭಾಪತಿ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳು ತಯಾರಿ ನಡೆಸಿವೆ.ಸಂವಿಧಾನದ 94-ಸಿ ವಿಧಿಯ ಅಡಿಯಲ್ಲಿ (ಸ್ಪೀಕರ್‌ಗಳ ಪದಚ್ಯುತಿಗೆ ಇರುವ ನಿಯಮ) ಈ ಸಂಬಂಧ ನೋಟಿಸ್ ಜಾರಿ ಮಾಡಿದ್ದು, ಸಂಸದರ ಸಹಿ ಸಂಗ್ರಹಿಸಲಾಗುತ್ತಿದೆ. ಇದು ಶೀಘ್ರ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎನ್ನಲಾಗಿದೆ.
ಅಷ್ಟಾಗ್ಯೂ ವಿಪಕ್ಷಗಳಿಗೆ ಬಿರ್ಲಾ ಪದಚ್ಯುತಿ ಮಾಡುವಷ್ಟು ಸಂಖ್ಯಾಬಲವಿಲ್ಲ. ಆದರೂ ಸಾಂಕೇತಿಕವಾಗಿ ನಿರ್ಣಯ ಮಂಡಿಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಕಾರಣವೇನು?:
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ರಾಹುಲ್ ಅವರು, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕಗಳಲ್ಲಿನ ಸಾಲುಗಳನ್ನು ಉಲ್ಲೇಖಿಸಿ, ‘ಭಾರತದ ಭಾಗಗಳನ್ನು ಚೀನಾಗೆ ಬಿಟ್ಟುಕೊಡಲಾಗಿದೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಗದ್ದಲವುಂಟಾಗಿ ಕಲಾಪಕ್ಕೆ ಅಡ್ಡಿಯಾದಾಗ, ರಾಹುಲ್‌ರನ್ನು ಬಿರ್ಲಾ ತಡೆದಿದ್ದರು. ಜತೆಗೆ, ವಿಪಕ್ಷದ 8 ಸಂಸದರ ಅಮಾನತು ಮಾಡಲಾಗಿತ್ತು.ಇದೇ ವೇಳೆ, ಕಾಂಗ್ರೆಸ್ ಸಂಸದೆಯರ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಧಾರರಹಿತ ಆರೋಪಗಳನ್ನು ಮಾಡಿದ್ದು, ಅವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ವಿಪಕ್ಷಗಳಿಗೆ ಕೋಪ ತರಿಸಿದೆ. ಹೀಗಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯದ ಹೆಜ್ಜೆ ಇಟ್ಟಿವೆ.
100 ಸದಸ್ಯರ ಸಹಿ ಸಂಗ್ರಹ:ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಈ ಬಗೆಗಿನ ಸಭೆ ನಡೆದಿದ್ದು, ಟಿಎಂಸಿ, ಡಿಎಂಕೆ, ಎಸ್‌ಪಿ, ಆರ್‌ಜೆಡಿ, ಶಿವಸೇನೆ(ಉದ್ಧವ್ ಬಣ), ಎನ್‌ಸಿಪಿ(ಶರದ್ ಬಣ), ಆರ್‌ಎಸ್‌ಪಿ ಪಕ್ಷಗಳು ಭಾಗವಹಿಸಿದ್ದವು. ಅಲ್ಲಿ ಅವಿಶ್ವಾಸ ನಿರ್ಣಯದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಲೋಕಸಭೆಯ 100 ಸೇರಿದಂತೆ ವಿಪಕ್ಷ ಸಂಸದರ ಸಹಿಯನ್ನು ಸಂಗ್ರಹಿಸಲಾಗುತ್ತಿದೆ. ಸೋಮವಾರ ಇದು ಕೆಳಮನೆಯಲ್ಲಿ ಮಂಡನೆಯಾಗಬೇಕಿತ್ತಾದರೂ, ಮುಂದೂಡಿಕೆಯ ಕಾರಣ ಸಾಧ್ಯವಾಗಿಲ್ಲ.
ಈ ಮೊದಲು 4 ಬಾರಿ ಸಭಾಧಕ್ಷರ ವಿರುದ್ಧ ಅವಿಶ್ವಾಸ ನೋಟಿಸ್ ನೀಡಲಾಗಿತ್ತು.==
ಲೋಕಸಭೆ ಕಲಾಪ ಮತ್ತೆ ಭಂಗ- ರಾಹುಲ್ ಭಾಷಣಕ್ಕೆ ಸ್ಪೀಕರ್ ಅನುಮತಿ ನಕಾರ ಹಿನ್ನೆಲೆ
- ಖರ್ಗೆ ಮಾತಿಗೂ ಅವಕಾಶವಿಲ್ಲ: ರಾಜ್ಯಸಭೆಯಲ್ಲಿ ಕೈ ಸಭಾತ್ಯಾಗ
ಪಿಟಿಐ ನವದೆಹಲಿನಿವೃತ್ತ ಸೇನಾ ಮುಖ್ಯಸ್ಥ ಜ। ನರವಣೆ ಅವರು ಗಲ್ವಾನ್ ಸಂಘರ್ಷದ ಬಗ್ಗೆ ಬರೆದ ಪುಸ್ತಕದ ಬಗ್ಗೆ ಮಾತನಾಡಲು ಅವಕಾಶ ನೀಡಬೇಕೆಂಬ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಅವರ ಬೇಡಿಕೆಯನ್ನು ಸ್ಪೀಕರ್ ತಳ್ಳಿಹಾಕಿದ ಕಾರಣ ಸೋಮವಾರ ಲೋಕಸಭೆಯಲ್ಲಿ ವಿಪಕ್ಷಗಳು ಕೋಲಾಹಲ ಎಬ್ಬಿಸಿದವು. ಹೀಗಾಗಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.ಎರಡು ಬಾರಿ ಮುಂದೂಡಿಕೆಯಾದ ನಂತರ ಮಧ್ಯಾಹ್ನ 2 ಗಂಟೆಗೆ ಸದನ ಸಭೆ ಸೇರಿದಾಗ, ಸಭಾಪತಿ ಸ್ಥಾನದಲ್ಲಿದ್ದ ಸಂಧ್ಯಾ ರಾಯ್, ಬಜೆಟ್ ಮೇಲಿನ ಚರ್ಚೆ ಪ್ರಾರಂಭಿಸಲು ಕಾಂಗ್ರೆಸ್ ಸದಸ್ಯ ಶಶಿ ತರೂರ್ ಅವರಿಗೆ ಕೇಳಿಕೊಂಡರು. ಆದರೆ ತರೂರ್ ಮೊದಲು ರಾಹುಲ್ ಮಾತನಾಡಲಿ ಎಂದರು. ಆಗ ಸ್ಪೀಕರ್ ಅವರು, ‘ರಾಹುಲ್ ಕೇವಲ ಬಜೆಟ್ ಮೇಲೆ ಮಾತನಾಡಬೇಕು’ ಎಂದು ಷರತ್ತು ವಿಧಿಸಿದರು. ಆದರೆ ಇದಕ್ಕೆ ರಾಹುಲ್, ‘ಓಂ ಬಿರ್ಲಾ ಬಿರ್ಲಾ ನರವಣೆ ಪುಸ್ತಕದ ಬಗ್ಗೆ ಮಾತನಾಡಲು ಅವಕಾಶ ನೀಡುವುದಾಗಿ ಒಪ್ಪಿದ್ದರು’ ಎಂದರು. ಆದರೆ ಇದಕ್ಕೆ ಪೀಠದಲ್ಲಿದ್ದ ಸಂಧ್ಯಾ ಒಪ್ಪದ ಕಾರಣ ಕೋಲಾಹಲ ಉಂಟಾಗಿ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಸಭಾತ್ಯಾಗ:ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್‌ಗೆ ಲೋಕಸಭೆಯಲ್ಲಿ ಏಕೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿ ಚರ್ಚೆಗೆ ಆಗ್ರಹಿಸಿದರು. ಇದಕ್ಕೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವಕಾಶ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.==
ಸಚಿವ ಗೋಯಲ್ ವಿರುದ್ಧ ವಿಪಕ್ಷಗಳ ಹಕ್ಕುಚ್ಯುತಿ ನೋಟಿಸ್- ಟ್ರೇಡ್ ಡೀಲ್ ಬಗ್ಗೆ ಸಂಸತ್ ಬದಲು ಮಾಧ್ಯಮಕ್ಕೆ ಹೇಳಿಕೆ ಏಕೆ?
ನವದೆಹಲಿ: ಸಂಸತ್ ಅಧಿವೇಶನ ಸಂದರ್ಭದಲ್ಲಿ ಮೊದಲು ಸಂಸತ್ತಿನ ಬದಲು ಭಾರತ- ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ವಿರುದ್ಧ ವಿಪಕ್ಷಗಳು ಹಕ್ಕುಚ್ಯುತಿ ಮಂಡಿಸಲು ಮುಂದಾಗಿವೆ.
ಡಿಎಂಕೆ ಸಂಸದ ತಿರುಚಿ ಶಿವ ರಾಜ್ಯಸಭೆಯಲ್ಲಿ ಗೋಯಲ್ ವಿರುದ್ಧ ಹಕ್ಕುಚ್ಯುತಿ ಮಂಡನೆ ನೋಟಿಸ್ ಸಲ್ಲಿಸಿದ್ದಾರೆ. ‘ಸಂಸತ್ತಿನ ಅಧಿವೇಶನ ವೇಳೆ ಸರ್ಕಾರದ ಒಪ್ಪಂದದ ಬಗ್ಗೆ ಮಾಧ್ಯಮಗಳಿಗೆ ಗೋಯಲ್ ಮಾಹಿತಿ ನೀಡಿದ್ದಾರೆ. ಇದು ಸದನದ ನಿಯಮಗಳ ಉಲ್ಲಂಘನೆ. ಹಾಗಾಗಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ನೋಟಿಸ್ ನೀಡಿದ್ದೇನೆ. ನನಗೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲವಿದೆ’ ಎಂದಿದ್ದಾರೆ.ಆದರೆ ‘ಗೋಯಲ್ ಈಗಾಗಲೇ ಸದನದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ಇದರ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ರಾಜ್ಯಸಭಾ ಸ್ಪೀಕರ್ ಸಿ.ಪಿ. ರಾಧಾಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ.==
ನರವಣೆ ಕೃತಿಗೆ ಹೆದರಿ ಸದನಕ್ಕೆ ಬರದ ಮೋದಿ: ರಾಗಾ-ಮೋದಿಗೆ ಜೀವಬೆದರಿಕೆ ಇದ್ದರೆ ಎಫ್‌ಐಆರ್ ದಾಖಲಿಸಲಿ
ಪಿಟಿಐ ನವದೆಹಲಿ
‘ಸೇನೆಯ ಮಾಜಿ ಮುಖ್ಯಸ್ಥ ಜ। ಎಂ.ಎಂ. ನರವಣೆ ಅವರ ಪುಸ್ತಕಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸಲು ಲೋಕಸಭೆಗೆ ಬರಲಿಲ್ಲ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದ್ದಾರೆ. ಜತೆಗೆ, ಪ್ರಧಾನಿ ಜೀವಕ್ಕೆ ಬೆದರಿಕೆ ಇದೆ ಎಂದಾದರೆ ಎಫ್‌ಐಆರ್ ದಾಖಲಿಸುವಂತೆಯೂ ಸವಾಲೆಸೆದಿದ್ದಾರೆ.‘ಪ್ರಧಾನಿ ಸದನಕ್ಕೆ ಬರಲಿಲ್ಲ. ನಾವು ಏನು ಹೇಳುತ್ತೇವೆಯೋ ಅದಕ್ಕೆ ಅವರು ಹೆದರುತ್ತಿದ್ದರು, ಮೊದಲ ಹೆಜ್ಜೆಯಾಗಿ ನರವಣೆಯವರ ಪುಸ್ತಕವನ್ನು ಅವರಿಗೆ ನೀಡುತ್ತೇವೆಂದು ಅವರು ಭಯ ಪಡುತ್ತಿದ್ದರು. ಬಜೆಟ್ ಕುರಿತು ಚರ್ಚೆ ನಡೆಸುವ ಬಗ್ಗೆಯೂ ಸರ್ಕಾರ ಚಿಂತೆ ಮಾಡುತ್ತಿದೆ. ಏಕೆಂದರೆ ಅಮೆರಿಕದ ಒಪ್ಪಂದದ ವಿಷಯ, ಅದನ್ನು ಮಾಡಿದ ರೀತಿ ಮತ್ತು ನಮ್ಮ ರೈತರ ಮೇಲೆ ಅದರ ಪರಿಣಾಮವನ್ನು ಚರ್ಚಿಸಲಾಗುತ್ತದೆ. ಸರ್ಕಾರಕ್ಕೆ ಅದು ಇಷ್ಟವಿಲ್ಲ’ ಎಂದು ಟೀಕಿಸಿದ್ದಾರೆ.ಎಫ್‌ಐಆರ್ ಹಾಕಿ:‘ಕಾಂಗ್ರೆಸ್ ಸದಸ್ಯರು ಪ್ರಧಾನಿಗೆ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರದ ಬಗ್ಗೆ ನಮಗೆ ತುಂಬಾ ಬೇಸರವಾಗಿದೆ. ಪ್ರಧಾನಿಯವರು ಸದನಕ್ಕೆ ಬರಲು ಹೆದರಿದ್ದು ಸದಸ್ಯರ ಕಾರಣದಿಂದಾಗಿ ಅಲ್ಲ, ಬದಲಾಗಿ ನಾನು ಹೇಳುತ್ತಿದ್ದ ವಿಷಯಗಳಿಂದಾಗಿ ಎಂಬುದು ಸ್ಪಷ್ಟ. ಯಾರಾದರೂ ಮೋದಿಯವರ ಮೇಲೆ ದಾಳಿ ಮಾಡುತ್ತೇನೆ ಎಂದಿದ್ದರೆ, ದಯವಿಟ್ಟು ಎಫ್‌ಐಆರ್ ದಾಖಲಿಸಿ, ಆತನನ್ನು ಬಂಧಿಸಿ’ ಎಂದು ಆಗ್ರಹಿಸಿದರು.==
ನರವಣೆ ಅಪ್ರಕಟಿತ ಪುಸ್ತಕ ಆನ್‌ಲೈನ್‌ನಲ್ಲಿ ಹರಿದಾಟ: ಎಫ್‌ಐಆರ್ ದಾಖಲುನವದೆಹಲಿ: ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದ್ದ, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕದ ಪ್ರತಿ ಆನ್‌ಲೈನ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಡಾಡುತ್ತಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.ನರವಣೆಯವರು ತಮ್ಮ ಸೇನಾಜೀವನವನ್ನು ದಾಖಲಿಸಿರುವ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಪಿಟಿಎಫ್, ಮುದ್ರಣ-ಪೂರ್ವ ಕಾಪಿ ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಈವರೆಗೆ ಪರವಾನಗಿ ಸಿಕ್ಕಿಲ್ಲ. ಹರಿದಾಡುತ್ತಿರುವ ಪ್ರತಿಯನ್ನು ಎಂ/ಎಸ್ ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಲಿ. ತಯಾರಿಸಿದ್ದು, ಕೆಲ ವೇದಿಕೆಗಳಲ್ಲಿ ಆ ಪುಸ್ತಕ ಖರೀದಿಗೆ ಲಭ್ಯವಿದೆ ಎಂಬಂತೆ ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪುಸ್ತಕದ ಸೋರಿಕೆ ಅಥವಾ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ.
==ವಿಪಕ್ಷ ಎದುರಿಸಲಾಗದೇ ಮೋದಿ ಗೈರು: ಮಹಿಳಾ ಕೈ ಸಂಸದರು
- ಪ್ರಧಾನಿ ಗೈರು ನಮ್ಮ ಬೆದರಿಕೆಯಿಂದಲ್ಲ- ನಿಷ್ಪಕ್ಷವಾಗಿ ಸದನ ನಡೆಸಿ: ಸ್ಪೀಕರ್‌ಗೆ ಪತ್ರ
ಪಿಟಿಐ ನವದೆಹಲಿ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸೋಮವಾರ ಪ್ರಿಯಾಂಕಾ ಗಾಂಧಿ ಸೇರಿ 6 ಕಾಂಗ್ರೆಸ್ ಮಹಿಳಾ ಸಂಸದರು ಪತ್ರ ಬರೆದಿದ್ದು, ‘ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಗೈರುಹಾಜರಾಗಿರುವುದು ತಮ್ಮ (ಮಹಿಳಾ ಸಂಸದರ) ಬೆದರಿಕೆಯಿಂದಲ್ಲ. ಬದಲಾಗಿ, ಅವರಿಗೆ ವಿಪಕ್ಷಗಳನ್ನು ಎದುರಿಸುವ ಧೈರ್ಯ ಇಲ್ಲ. ಹೀಗಾಗಿ ಅವರು ಸದನಕ್ಕೆ ಬಂದಿಲ್ಲ’ ಎಂದಿದ್ದಾರೆ.3 ಪುಟಗಳ ಪತ್ರ ಬರೆದಿರುವ ಅವರು, ‘ನೀವು (ಬಿರ್ಲಾ) ಬಿಜೆಪಿಯಿಂದ ನಿರಂತರ ಒತ್ತಡದಲ್ಲಿದ್ದೀರಿ. ಆದರೆ ಇದರಿಂದ ಹೊರಬಂದು ಕೆಳಮನೆಯ ನಿಷ್ಪಕ್ಷಪಾತ ರಕ್ಷಕನಾಗಿ ಕಾರ್ಯನಿರ್ವಹಿಸಿ. ಈ ಪ್ರಯತ್ನದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಮತ್ತು ನಿಮ್ಮನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತೇವೆ’ ಎಂದು ಸಂಸದರಾದ ಎಸ್. ಜ್ಯೋತಿಮಣಿ, ಪ್ರಿಯಾಂಕಾ ಗಾಂಧಿ, ಜ್ಯೋತ್ಸ್ನಾ ಚರಣದಾಸ್ ಮಹಾಂತ್, ಆರ್. ಸುಧಾ, ವರ್ಷಾ ಗಾಯಕ್ವಾಡ್ ಸೇರಿ 6 ಮಂದಿ ಕೋರಿದ್ದಾರೆ.‘ಮೋದಿ ಅವರ ಜನವಿರೋಧಿ ಸರ್ಕಾರದ ವಿರುದ್ಧ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಅಲ್ಲದೆ, ಅವರ ಹೊಣೆಗಾರಿಕೆ ಬಯಸುತ್ತಿದ್ದೇವೆ. ಹೀಗಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.‘ಅವರಿಗೆ (ಪ್ರಧಾನಿ) ವಿರೋಧ ಪಕ್ಷವನ್ನು ಎದುರಿಸುವ ಧೈರ್ಯವಿರಲಿಲ್ಲ. ನಾವು ಕಾಂಗ್ರೆಸ್ ಸಂಸದೆಯರು. ನಮ್ಮದು ಪ್ರೀತಿ, ಶಾಂತಿ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆ ಪ್ರತಿಪಾದಿಸುವ ಪಕ್ಷ. ನಾವು ಹಿಂಸೆ ಮತ್ತು ಬೆದರಿಕೆಯಲ್ಲಿ ನಂಬಿಕೆ ಇಡುವುದಿಲ್ಲ. ನಾವು ಧೈರ್ಯಶಾಲಿ ಮಹಿಳಾ ಚುನಾಯಿತ ಪ್ರತಿನಿಧಿಗಳು. ಬೆದರಿಕೆಯಿಂದ ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.