ಸಂತರ ದರ್ಶನದಿಂದ ಮನಸ್ಸಿಗೆ ಶಾಂತಿ: ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ

| Published : Jan 25 2025, 01:02 AM IST

ಸಂತರ ದರ್ಶನದಿಂದ ಮನಸ್ಸಿಗೆ ಶಾಂತಿ: ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ
Share this Article
  • FB
  • TW
  • Linkdin
  • Email

ಸಾರಾಂಶ

ಆಧ್ಯಾತ್ಮಿಕ ಹಾಗೂ ಶಾಂತಿ ನೆಲೆಸಿರುವ ಭೂಮಿ ಭಾರತವಾಗಿದೆ. ಜೈನಧರ್ಮದ ಲಕ್ಷಾಂತರ ಮುನಿಗಳ, ಸಂತರ ಅಹಿಂಸಾ ತತ್ವದ ಮಾರ್ಗದಿಂದ ಇದು ಸಾಧ್ಯವಾಗಿದೆ ಎಂದ ಅವರು, ದೇಶದಲ್ಲಿ ಮಾನವ ಕಲ್ಯಾಣವಾಗುವ ಸುಸಂದರ್ಭವಾಗಿದೆ.

ಹುಬ್ಬಳ್ಳಿ:

ಆಧ್ಯಾತ್ಮಿಕ, ಧಾರ್ಮಿಕ ವಿಚಾರದಿಂದ ಮನುಷ್ಯನ ಜೀವನ ಉಜ್ವಲವಾಗುತ್ತದೆ. ಜೀವನದಲ್ಲಿ ಸಾರ್ಥಕತೆಯನ್ನು ಕಂಡ ಸಾಧಕರ ದರ್ಶನ ಮಾಡುವುದು ಅಗತ್ಯ ಎಂದು ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ ಬಿರ್ಲಾ ಅಭಿಪ್ರಾಯಪಟ್ಟರು.

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಪಾಶ್ವನಾಥರ ಹಾಗೂ ನವಗ್ರಹ ತೀರ್ಥಂಕರರಿಗೆ ಸಾಂಕೇತಿಕವಾಗಿ ಅಭಿಷೇಕ ಮಾಡುವ ಮೂಲಕ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಸಾಧು ಸಂತರ ದರ್ಶನದಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ಹಿಂಸಾತ್ಮಕ ಕೃತ್ಯ ಬಿಡಬೇಕು. ಅಹಿಂಸಾ, ಸತ್ಯ, ತ್ಯಾಗ, ಸಮರ್ಪಣೆ ಗುಣಗಳ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಆಧ್ಯಾತ್ಮಿಕ ಹಾಗೂ ಶಾಂತಿ ನೆಲೆಸಿರುವ ಭೂಮಿ ಭಾರತವಾಗಿದೆ. ಜೈನಧರ್ಮದ ಲಕ್ಷಾಂತರ ಮುನಿಗಳ, ಸಂತರ ಅಹಿಂಸಾ ತತ್ವದ ಮಾರ್ಗದಿಂದ ಇದು ಸಾಧ್ಯವಾಗಿದೆ ಎಂದ ಅವರು, ದೇಶದಲ್ಲಿ ಮಾನವ ಕಲ್ಯಾಣವಾಗುವ ಸುಸಂದರ್ಭವಾಗಿದೆ. ಭಗವಾನ ಪಾರ್ಶ್ವನಾಥರು ಹಾಗೂ ಮಹಾವೀರ ತೀರ್ಥಂಕರರ ಅಹಿಂಸಾ ತತ್ವವು ಅನುಸರಿಸಿಕೊಂಡು ಬಂದಿರುವ ಜೈನ್‌ ಮುನಿಗಳು ಸಹ ಸನ್ಮಾರ್ಗದಲ್ಲಿ ನಡೆಯುವಂತೆ ಜನರಿಗೆ ಬೋಧಿಸುತ್ತಿದ್ದಾರೆ ಎಂದರು.

ವಿಶ್ವದಲ್ಲಿ ಯುದ್ಧ, ಸಂಘರ್ಷಗಳು ನಡೆಯುತ್ತಿದ್ದು, ಶಾಂತಿ ಸಂದೇಶದಿಂದ ಮಾತ್ರ ನಿಲ್ಲಿಸಲು ಸಾಧ್ಯ. ಶಾಂತಿ, ಸದ್ಭಾವ ವಿಶ್ವಕ್ಕೆ ಅವಶ್ಯಕತೆ ಇದೆ. ವೈಚಾರಿಕ ಸಂಘರ್ಷಗಳಿಂದ ಮುಕ್ತವಾಗಲು, ಮನಸ್ಸಿನ ಗೊಂದಲ, ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಂತರ ಮಾರ್ಗದರ್ಶನದಿಂದ ಕಂಡಕೊಳ್ಳಬಹುದು ಎಂದು ತಿಳಿಸಿದರು.ಪಾರ್ಶ್ವನಾಥರ ಹಾಗೂ ನವಗ್ರಹಗಳ ಮಹಾಮಸ್ತಕಾಭಿಷೇಕ ಹಾಗೂ ಸುಮೇರ ಪರ್ವತ ಸ್ಥಾಪನೆಯಾಗುವ ಮೂಲಕ ಇಡೀ ವಿಶ್ವಕ್ಕೆ ಶಾಂತಿ, ಆಧ್ಯಾತ್ಮಿಕ ಸಂದೇಶ ಸಾರಿದೆ ಎಂದರು.

ಆಚಾರ್ಯಶ್ರೀ ಕುಂತುಸಾಗರ ಮಹರಾಜರು, ರಾಷ್ಟ್ರಸಂತ ಗುಣಧರನಂದಿ ಮಹರಾಜರು, ಮನೋಜ ಜೈನ, ಸುರೇಂದ್ರ ಹೆಗ್ಗಡೆ, ರಾಕೇಶ ಕೆ. ಇದ್ದರು.

ಮಹಾಮಸ್ತಕಾಭಿಷೇಕಪಾರ್ಶ್ವನಾಥ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಚಂದನ, ಅಷ್ಟಗಂಧ ಅಭಿಷೇಕದ ಮೂಲಕ ಭಕ್ತಿ ಸಮರ್ಪಣೆ ಮಾಡಲಾಯಿತು. ಹತ್ತನೇ ದಿನವಾದ ಶುಕ್ರವಾರ ಅದ್ಧೂರಿಯಾಗಿ ಮಹಾಮಸ್ತಕಾಭಿಷೇಕ ನಡೆಸಲಾಗಿದೆ. ಮಂಗಳ ದ್ರವ್ಯದ ಜತೆಗೆ ಕೇಸರಿ, ಅಷ್ಟಗಂಧದ ಮೂಲಕ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗೆ ಕೇಸರಿ ಅಭಿಷೇಕ ಮಾಡಲಾಯಿತು. ಅಷ್ಟಗಂಧ, ಕೇಸರಿ, ಹಳದಿ, ಅರಶಿಣ, ಚಂದನ, ರಕ್ತಚಂದನ ಹೀಗೆ ಹಲವಾರು ಮಂಗಳ ದ್ರವ್ಯದ ಮೂಲಕ ಮಹಾಮಸ್ತಕಾಭಿಷೇಕ ಮಾಡಲಾಯಿತು. ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ಹಾಗೂ ಕುಂತುಸಾಗರ ಮುನಿ ಮಹಾರಾಜರ ಸಾನ್ನಿಧ್ಯ ವಹಿಸಿದ್ದರು.