;Resize=(412,232))
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಮಂಗಳೂರು ಮೂಲದ ಕಾಂಗ್ರೆಸ್ ಮುಖಂಡೆ ಹಾಗೂ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಅವರನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.
ಪೊಲೀಸರ ನೋಟಿಸ್‌ಗೂ ಮೊದಲೇ ತನಿಖಾಧಿಕಾರಿಗಳ ಮುಂದೆ ಹಾಜರಾದ ಕೃಪಾ ಆಳ್ವ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ತಮ್ಮ ಪಾತ್ರವೇನು? ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಲಾಗಿತ್ತು? ಪ್ರಕರಣದಲ್ಲಿ ಬೇರೆಯವರ ಪಾತ್ರವೇನು? ಎಲ್ಲಿ, ಯಾವ ವರ್ಷ ಆ ವಿಡಿಯೋವನ್ನು ಮಾಡಲಾಗಿತ್ತು? ಆ ವಿಡಿಯೋದಲ್ಲಿರುವ ಸಂತ್ರಸ್ತೆ ಯಾರು ಎಂಬಿತ್ಯಾದಿ ಹಲವು ಪ್ರಶ್ನೆಗಳನ್ನು ಕೃಪಾ ಆಳ್ವಾ ಅವರಿಗೆ ತನಿಖಾಧಿಕಾರಿಗಳು ಕೇಳಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಈ ವೇಳೆ ಕೃಪಾ ಆಳ್ವ ಅವರು, ಅದು ಸ್ಟಿಂಗ್ ಆಪರೇಷನ್ ಅಂತ ನನಗೆ ಗೊತ್ತಿಲ್ಲ. ಮಂಗಳೂರು ಮೂಲದ ರಾಕೇಶ್ ಶೆಟ್ಟಿ ಕೆಲವರ ರಹಸ್ಯ ಬಯಲು ಮಾಡಬೇಕಿದೆ ಎಂದು ನನ್ನ ಬಳಿ ಚರ್ಚಿಸಿದರು ಅಷ್ಟೇ. ಹಾಗೆಯೇ ಸಂತ್ರಸ್ತೆ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಹೋಟೆಲ್ ಸಮೀಪ ರಾಕೇಶ್ ಶೆಟ್ಟಿ ಭೇಟಿಯಾಗಿ ಚರ್ಚಿಸಿದರು. ವಿಡಿಯೋ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಕೃಪಾ ಹೇಳಿಕೆ ನೀಡಿದ್ದಾಗಿ ಮೂಲಗಳು ತಿಳಿಸಿವೆ.
ಸುಮಾರು ಎರಡು ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಮತ್ತೆ ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ, ಕೃಪಾ ಆಳ್ವಾಗೆ ಪೊಲೀಸರು ನೋಟಿಸ್ ನೀಡಿ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಜೆಡಿಎಸ್ ಸಾಮಾಜಿಕ ಜಾಲತಾಣದ ಮುಖಸ್ಥ ಚಂದನ್ ಹಾಗೂ ಮೋಹನ್‌ಗೌಡ ಶೋಧ ಕಾರ್ಯ ನಡೆಯುತ್ತಿದೆ. ಮೋಹನ್ ಗೌಡ ಅವರ ನಿವಾಸಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಅವರ ಮನೆಯಲ್ಲಿದ್ದ ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಇಬ್ಬರಿಗೂ ತಾವು ಬಳಸುವ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದೆ. ಅಲ್ಲದೆ, ಪ್ರಕರಣದಲ್ಲಿ ಎಸ್.ಶಿವಸ್ವಾಮಿ ಎಂಬುವರ ಹೆಸರು ಕೇಳಿ ಬಂದಿದ್ದು, ಅವರಿಗಾಗಿಯೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.