ಮೇಕೆದಾಟಿಗಾಗಿ ರಾಜ್ಯ-ತಮಿಳ್ನಾಡು ಕಾಂಗ್ರೆಸ್‌ ವಾಗ್ಯುದ್ಧ

Published : Nov 15, 2026, 07:13 AM IST
Mekedatu Dam Project

ಸಾರಾಂಶ

ಮೇಕೆದಾಟು ಅಣೆಕಟ್ಟಿಗೆ ಅನುಮತಿ ನೀಡುವಂತೆ ಪ್ರಧಾನಿ ಮೋದಿ ಬಳಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ನೇರ ಪ್ರಸ್ತಾಪ ಮಾಡಿದ್ದಕ್ಕೆ ತಮಿಳುನಾಡು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮಾಣಿಕ್ಯಂ ಟ್ಯಾಗೋರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಡ್ಯಾಂ ಪರ ಡಿಕೆಶಿ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ತ.ನಾಡು ಕೈ ಅಧ್ಯಕ್ಷ

ಚೆನ್ನೈ: ಮೇಕೆದಾಟು ಅಣೆಕಟ್ಟಿಗೆ ಅನುಮತಿ ನೀಡುವಂತೆ ಪ್ರಧಾನಿ ಮೋದಿ ಬಳಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ನೇರ ಪ್ರಸ್ತಾಪ ಮಾಡಿದ್ದಕ್ಕೆ ತಮಿಳುನಾಡು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮಾಣಿಕ್ಯಂ ಟ್ಯಾಗೋರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡಿಕೆಶಿ ಅವರ ನಡೆ, ಸುಪ್ರೀಂಕೋರ್ಟ್‌ ಆದೇಶ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ನಡೆಯಾಗಿದೆ. ಯೋಜನೆ ತಡೆದು ತಮಿಳುನಾಡು ಹಿತ ಕಾಪಾಡಲು ಯಾವುದೇ ಹೋರಾಟಕ್ಕಾದರೂ ತಾವು ಸಿದ್ಧ ಎಂದು ಟ್ಯಾಗೋರ್‌ ಘೋಷಿಸಿದ್ದಾರೆ.

ಮತ್ತೊಂದೆಡೆ ಕಾವೇರಿ ನಮ್ಮ ಹಕ್ಕು. ನಾವೇನು ಈ ವಿಷಯದಲ್ಲಿ ಕರ್ನಾಟಕ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ ಎಂದು ಕಾಂಗ್ರೆಸ್‌ ಸಂಸದೆ ಜ್ಯೋತಿಮಣಿ ಕರ್ನಾಟಕದ ವಿರುದ್ಧ ಹರಿಹಾಯ್ದಿದ್ದಾರೆ. ಹೀಗಾಗಿ ಅಣೆಕಟ್ಟು ವಿಷಯ ಇದೀಗ ನೇರವಾಗಿ ಎರಡು ರಾಜ್ಯಗಳ ನಡುವಿನ ಕಾಂಗ್ರೆಸ್‌ ನಾಯಕರ ಸಮರವಾಗಿ ಪರಿಗಣಿಸಿದೆ.

ಟ್ಯಾಗೋರ್ ಆಕ್ಷೇಪ ಏಕೆ?:

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲೇ ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ ನೀಡುವಂತೆ ಡಿ.ಕೆ.ಶಿವಕುಮಾರ್‌ ಕೇಂದ್ರಕ್ಕೆ ಮನವಿ ಮಾಡಿದ್ದರು. ಇದಕ್ಕೆ ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಮಾಣಿಕ್ಯಂ ಠಾಗೋರ್‌ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೇಕೆದಾಟು ಯೋಜನೆಯು ಕಾವೇರಿ ನದಿಮುಖಜ ಭೂಮಿಯನ್ನು ಮರುಭೂಮಿ ಮಾಡಲಿದೆ ಎಂದು ಆರೋಪಿಸಿರುವ ಅವರು, ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಎಚ್ಚರಿಕೆಯಿಂದಿರಬೇಕು ಮತ್ತು ಈ ಯೋಜನೆ ಜಾರಿ ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ತೀವ್ರಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಮೇಕೆದಾಟು ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮತ್ತು ಕೇಂದ್ರವು ಈ ಯೋಜನೆಗೆ ಅನುಮತಿ ನೀಡಲೇಬೇಕು ಎಂದು ಮೈಸೂರಲ್ಲಿ ಪ್ರಧಾನಿ ಮೋದಿ ಉಪಸ್ಥಿತಿಯಲ್ಲೇ ಡಿ.ಕೆ.ಶಿವಕುಮಾರ್‌ ಹೇಳಿರುವುದು ಖಂಡನಾರ್ಹ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಠಾಗೋರ್‌ ಪೋಸ್ಟ್‌ ಮಾಡಿದ್ದಾರೆ.

ಕರ್ನಾಟಕ ಸಿಎಂ ಮೇಕೆದಾಟು ವಿಚಾರವಾಗಿ ಮೊಂಡುವಾದ ಹಿಡಿದಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್‌ ಹಾಗೂ ಕಾವೇರಿ ನೀರು ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶ ಉಲ್ಲಂಘಿಸುತ್ತಿದ್ದಾರೆ. ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ತಮಿಳುನಾಡು ರೈತರ ಜೀವನೋಪಾಯ ನಾಶಮಾಡುವಂಥದ್ದಾಗಿದೆ. ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕವು ತಮಿಳುನಾಡಿನ ನೀರಿನ ಹಕ್ಕಿನ ಮೇಲೆ ಪರಿಣಾಮ ಬೀರುವ ಈ ಯೋಜನೆಯನ್ನು ಸ್ವತಂತ್ರವಾಗಿ ಕೈಗೆತ್ತಿಕೊಳ್ಳುವಂತಿಲ್ಲ. ಕಾವೇರಿ ನದಿ ಜಲಾನಯನ ಪ್ರದೇಶದ ಕೆಳಹಂತದ ರಾಜ್ಯಗಳ ಸಮ್ಮತಿ ಇಲ್ಲದೆ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆಗೆ ಅನುಮತಿ ನೀಡುವುದು ಅಕ್ರಮ ಎಂದು ಆರೋಪಿಸಿರುವ ಅವರು, ಡ್ಯಾಂ ನಿರ್ಮಾಣಕ್ಕೆ ಒಂದೇ ಒಂದು ಕಲ್ಲು ಇಡದಂತೆ ಕರ್ನಾಟಕವನ್ನು ತಡೆಯುವುದು ಕೇಂದ್ರದ ಜವಾಬ್ದಾರಿ ಆಗಿದೆ ಎಂದಿದ್ದಾರೆ.

ನಾವು ಯಾವುದೇ ಕಾರಣಕ್ಕೂ ಈ ಯೋಜನೆಗೆ ಅವಕಾಶ ನೀಡುವುದಿಲ್ಲ, ನಮ್ಮ ರಾಜ್ಯದ ಹಕ್ಕುಗಳನ್ನು ರಕ್ಷಿಸಲು ತಮಿ‍ಳುನಾಡು ಕಾಂಗ್ರೆಸ್‌ ಯಾವುದೇ ಹಂತಕ್ಕೆ ಹೋಗಲೂ ಸಿದ್ಧ ಎಂದು ತಿಳಿಸಿದ್ದಾರೆ.

ಟಿವಿಕೆ, ಡಿಎಂಕೆಯೂ ಕಿಡಿ:

ಶಿವಕುಮಾರ್‌ ಹೇಳಿಕೆಗೆ ಟಿವಿಕೆ ಹಾಗೂ ಡಿಎಂಕೆ ಪಕ್ಷ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರತಿ ಚುನಾವಣೆಗೂ ಮುನ್ನ ಕರ್ನಾಟಕ ಸಿಎಂ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎಂದು ಟಿಎಂಕೆ ಮುಖಂಡ, ತಮಿಳುನಾಡು ಕಾನೂನು ಸಚಿವ ಸಿಟಿಆರ್‌ ನಿರ್ಮಲ್‌ ಕುಮಾರ್‌ ಆರೋಪಿಸಿದ್ದಾರೆ.

ತಮಿಳುನಾಡು ಸರ್ಕಾರ ಹಾಗೂ ಸಿಎಂ ವಿಜಯ್‌ ಅ‍ವರು ಈ ಯೋಜನೆಗೆ ಅನುಮತಿ ನೀಡಲು ಬಿಡಲ್ಲ. ನಾವು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದೇವೆ. ಅರಣ್ಯ ಹಾಗೂ ಪರಿಸರ ಅನುಮತಿ ಇಲ್ಲದೆ ಅ‍ವರು ಮೇಕೆದಾಟು ಡ್ಯಾಂ ನಿರ್ಮಾಣಕ್ಕಾಗಿ ಒಂದೇ ಒಂದು ಕಲ್ಲು ಕೂಡ ಇಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ನಡುವೆ ಸರ್ವ ಪಕ್ಷ ಸಭೆ ಕರೆಯುವಂತೆ ತಮಿಳುನಾಡು ಸರ್ಕಾರವನ್ನು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ಆಗ್ರಹಿಸಿದ್ದಾರೆ.

ಮೇಕೆದಾಟು ನಮ್ಮ ಹಕ್ಕು, ತ.ನಾಡಿಗೂ ನೀರು ಕೊಡುತ್ತೇವೆ: ಡಿಕೆಶಿ ತಿರುಗೇಟು 

ಬೆಂಗಳೂರು : ‘ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು. ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಯೋಜನೆ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ. ತಮಿಳುನಾಡಿನವರು ವಿರೋಧ ವ್ಯಕ್ತಪಡಿಸುವ ಬದಲು ನಿಯೋಗದೊಂದಿಗೆ ಬರಲಿ. ಯೋಜನೆಯಿಂದ ಅವರಿಗೆ ಆಗುವ ಅನುಕೂಲ ವಿವರಿಸುತ್ತೇನೆ. ರಾಜ್ಯದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಯಾವುದೇ ಹಂತದಲ್ಲೂ ಹಿಂದೆ ಸರಿಯುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೇಕೆದಾಟು ಯೋಜನೆ ಕುರಿತ ತಮ್ಮ ಹೇಳಿಕೆಯನ್ನು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಯಂ ಟ್ಯಾಗೋರ್ ಹಾಗೂ ತಮಿಳುನಾಡಿನ ಇತರ ನಾಯಕರು ವಿರೋಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದರು.

ಯಾರಾದರೂ ವಿರೋಧ ವ್ಯಕ್ತಪಡಿಸಲಿ. ಇದು ನಮ್ಮ ಹಕ್ಕು ಎಂಬುದನ್ನು ತಮಿಳುನಾಡಿನವರೂ ಅರ್ಥಮಾಡಿಕೊಳ್ಳಬೇಕು. ಅವರು ಬೇಕಾದರೆ ತಮ್ಮ ನಿಯೋಗದೊಂದಿಗೆ ಬರಲಿ. ಅಣೆಕಟ್ಟು ನಿರ್ಮಾಣದ ಜಾಗಕ್ಕೆ ಕರೆದುಕೊಂಡು ಹೋಗಿ, ಯೋಜನೆ ಬಗ್ಗೆ ವಿವರಿಸಲು ಸಿದ್ಧನಿದ್ದೇನೆ. ಅಲ್ಲಿ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ವಿರೋಧಿಸುತ್ತಾರೆ, ಡಿಎಂಕೆ ವಿರೋಧಿಸದಿದ್ದರೆ ಎಐಎಡಿಎಂಕೆ ವಿರೋಧಿಸುತ್ತಾರೆ. ಆದರೆ ಇದು ರಾಜಕೀಯ ವಿಚಾರವಲ್ಲ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ತಮಿಳುನಾಡು 177 ಟಿಎಂಸಿ ನೀರನ್ನು ಪಡೆಯುವುದು ಅವರ ಹಕ್ಕು. ಅದನ್ನು ನಾವು ಪಾಲಿಸುತ್ತೇವೆ. ನಮ್ಮ ಹಕ್ಕುಗಳನ್ನು ರಕ್ಷಿಸುವ ಜತೆಗೆ ಅವರ ಹಕ್ಕುಗಳನ್ನೂ ಗೌರವಿಸುತ್ತೇವೆ. ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಜಾಗ ನೀಡಬೇಕು ಎಂದು ತಿಳಿಸಿದ್ದು, ಅದರ ಹೊರತಾಗಿ ಇದು ನಮ್ಮ ಜಾಗದಲ್ಲಿ ನಿರ್ಮಾಣವಾಗುವ ನಮ್ಮ ಯೋಜನೆಯಾಗಿದೆ ಎಂದು ಶಿವಕುಮಾರ್‌ ವಿವರಿಸಿದರು.

ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕೆಲಸ ನಡೆಯುತ್ತಿದೆ. ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ ಇರಬೇಕು:

ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆ ಕುರಿತು ಮಾತನಾಡಿದ ಶಿವಕುಮಾರ್, ‘ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ಪಡೆಯೋಣ. ಕಸ್ತೂರಿರಂಗನ್ ವರದಿ ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಆರೆಸ್ಸೆಸ್‌ ನಂಟಿದ್ರೆ ನಿಗಮ ಹುದ್ದೆ ಬಿಡಿ: ಬಿಕೆ ತಾಕೀತು
ನಿಗಮಗಳಿಗೆ ಶೀಘ್ರ ಅಧ್ಯಕ್ಷ ಭಾಗ್ಯ- ಇನ್ನು 1-2 ದಿನದಲ್ಲಿ ನಿಗಮ-ಮಂಡಳಿಗಳ ನೇಮಕ