;Resize=(412,232))
ಬೆಂಗಳೂರು : ‘ನಿಗಮ-ಮಂಡಳಿ, ಪ್ರಾಧಿಕಾರಗಳ ನಿರ್ದೇಶಕರು ಹಾಗೂ ಸದಸ್ಯರ ನೇಮಕಾತಿ ಆದೇಶದಲ್ಲಿ ಒಂದೆರಡು ಅಚಾತುರ್ಯ ನಡೆದಿವೆ. ಆರ್‌ಎಸ್‌ಎಸ್ ನಂಟು ಹೊಂದಿರುವವರಿದ್ದರೆ, ತಾವಾಗಿಯೇ ರಾಜೀನಾಮೆ ನೀಡಬೇಕು. ಇಲ್ಲವಾದರೆ ಸರ್ಕಾರ ಅವರನ್ನು ತೆಗೆದುಹಾಕಬೇಕಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ನಂಟಿರುವವರ ನೇಮಕದ ವಿಚಾರ ಕೇಳಿ ಬಂದಿದೆ. ನೇಮಕ ಪಟ್ಟಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಅಥವಾ ಆರೆಸ್ಸೆಸ್ ನಂಟು ಇರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅಂತಹವರು ಒಂದು ವೇಳೆ ಇದ್ದರೆ, ತಾವಾಗಿಯೇ ರಾಜೀನಾಮೆ ನೀಡಬೇಕು. ಇಲ್ಲವಾದರೆ, ಸರ್ಕಾರ ಅಂತಹವರ ಹೆಸರನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.
‘ಈ ಸಂಬಂಧ ಈಗಾಗಲೇ ಕೆಲವರಿಗೆ ನಿರ್ದೇಶನ ಕೊಟ್ಟಿದ್ದೇವೆ. 400ಕ್ಕೂ ಹೆಚ್ಚು ಕಾರ್ಯಕರ್ತರ ನೇಮಕ ಮಾಡಿದ್ದೇವೆ. ಅದರಲ್ಲಿ ಒಂದೆರಡು ಅಚಾತುರ್ಯ ಆಗಿದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಇನ್ನೂ ಎರಡು ಪಟ್ಟಿ ಬರುತ್ತದೆ ಅದರಲ್ಲಿ ಎಲ್ಲರಿಗೂ ಅವಕಾಶ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದರು.
3 ದಿನದ ಹಿಂದೆ ನಿಗಮಗಳ ಸದಸ್ಯರ ನೇಮಕ ನಡೆದಾಗ ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಚಿತ್ರದುರ್ಗದಲ್ಲಿ ಆರೆಸ್ಸೆಸ್ ನಂಟು ಇದ್ದ ಇಬ್ಬರಿಗೆ ಸ್ಥಾನ ನೀಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ನ.13ರಂದು ಕನ್ನಡಪ್ರಭ ವರದಿ ಮಾಡಿತ್ತು.