ಕೃತಕ ಬುದ್ಧಿಮತ್ತೆಯೇ ವಿಶ್ವದ ಕದನಭೂಮಿ - ಎನ್ವಿಡಿಯಾ ಪ್ರಕರಣ ಎಚ್ಚರಿಕೆ ಗಂಟೆ

Published : Nov 14, 2026, 11:16 AM IST
Rajeev Chandrasekhar

ಸಾರಾಂಶ

ಈ ದಶಕದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಜಾಗತಿಕ ರಾಜಕೀಯದ ಯುದ್ಧಭೂಮಿಯಾಗಿದೆ. ಇಲ್ಲಿನ ಅಪಾಯಗಳು ತುಂಬಾ ದೊಡ್ಡದಿರುವುದರಿಂದ ನಾವು ಮುಗ್ಧರಾಗಿರಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಬಾಗಿಲು ಮುಚ್ಚುವುದಲ್ಲ; ಬದಲಾಗಿ, ನಾವು ನಂಬಬಹುದಾದ ಮತ್ತು ಪರಿಶೀಲಿಸಬಹುದಾದ ಪಾಲುದಾರರೊಂದಿಗೆ ಸೇರಿ, ಯಾರನ್ನು ಒಳಗೆ ಬಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು.

-ರಾಜೀವ್‌ ಚಂದ್ರಶೇಖರ್‌

ಕೇರಳ ಬಿಜೆಪಿ ಅಧ್ಯಕ್ಷರು, ಶಾಸಕರು

ಈ ದಶಕದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಜಾಗತಿಕ ರಾಜಕೀಯದ ಯುದ್ಧಭೂಮಿಯಾಗಿದೆ. ಇಲ್ಲಿನ ಅಪಾಯಗಳು ತುಂಬಾ ದೊಡ್ಡದಿರುವುದರಿಂದ ನಾವು ಮುಗ್ಧರಾಗಿರಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಬಾಗಿಲು ಮುಚ್ಚುವುದಲ್ಲ; ಬದಲಾಗಿ, ನಾವು ನಂಬಬಹುದಾದ ಮತ್ತು ಪರಿಶೀಲಿಸಬಹುದಾದ ಪಾಲುದಾರರೊಂದಿಗೆ ಸೇರಿ, ಯಾರನ್ನು ಒಳಗೆ ಬಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು.

ಕಳೆದ ಭಾನುವಾರ, ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಒಂದು ದೊಡ್ಡ ಬಾಂಬ್‌ ಸಿಡಿಸಿದರು. ಸಿಬ್ಬಂದಿಗೆ ಕಳಿಸಿದ ಇ- ಮೇಲ್‌ನಲ್ಲಿ, ಅವರು ಸಿಂಗಾಪುರ ಮೂಲದ ‘ಮೆಗಾಸ್ಪೀಡ್‌’ ಎಂಬ ಡೇಟಾ ಸೆಂಟರ್‌ ಕಂಪನಿಯ ಕಾರ್ಯನಿರ್ವಾಹಕಿ ಆಲಿಸ್‌ ಹುವಾಂಗ್‌ ಅವರೊಂದಿಗೆ ತಮಗಿದ್ದ ಸಂಬಂಧ ಒಪ್ಪಿಕೊಂಡರು. ನಿರ್ಬಂಧಿತ ಚಿಪ್‌ಗಳನ್ನು ಚೀನಾಕ್ಕೆ ಕಳುಹಿಸಲು ಈ ಕಂಪನಿ ಸಹಾಯ ಮಾಡುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಅನುಮಾನಿಸಿದ್ದಾರೆ. ‘ನಾನು ಮಾಡಿದ ತಪ್ಪಿಗೆ ಯಾವುದೇ ಸಮರ್ಥನೆಯಿಲ್ಲ’ ಎಂದು ಜೆನ್ಸನ್‌ ಬರೆದಿದ್ದಾರೆ. ಎನ್ವಿಡಿಯಾ ಚಿಪ್‌ಗಳು ಚೀನಾ ತಲುಪುವಂತೆ ಮಾಡಲು ಚೀನಾದ ರಕ್ಷಣಾ ಸಚಿವಾಲಯವು ಆಕೆಯನ್ನು ನೇಮಿಸಿಕೊಂಡಿತ್ತು ಎಂದು ಅಮೆರಿಕ ಸರ್ಕಾರ ಗುರುತಿಸಿರುವುದಾಗಿ ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.

ಎಐ ಎಂಬುದು ಕೇವಲ ಮಾರುಕಟ್ಟೆಯ ವಿಷಯವಲ್ಲ, ಅದೊಂದು ಶಾಶ್ವತ ಬದಲಾವಣೆ ಎಂದು ನಾನು ಈ ಸರಣಿಯಲ್ಲಿ ವಾದಿಸುತ್ತಾ ಬಂದಿದ್ದೇನೆ. ಇವುಗಳ ಮೇಲೆ ಎಷ್ಟು ವಿಷಯಗಳು ಅವಲಂಬಿತವಾಗಿವೆ ಎಂಬುದನ್ನು ಕಳೆದ ವಾರದ ಷೇರುಪೇಟೆ ಬೆಳವಣಿಗೆ ತೋರಿಸಿಕೊಟ್ಟಿದೆ; ಅಮೆರಿಕದ ಒಂದು ಚುನಾವಣೆಯ ಫಲಿತಾಂಶವು ಡಾಟಾ ಸೆಂಟರ್‌ಗಳ ಮೇಲಿನ ಬಿಗಿಯಾದ ಕ್ರಮಗಳಿಗೆ ಕಾರಣವಾಗಬಹುದು ಎಂಬ ಆತಂಕವು ಒಂದೇ ದಿನದಲ್ಲಿ ಎಐ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ 235ರಿಂದ 285 ಲಕ್ಷ ಕೋಟಿ ರು.ಗಳಷ್ಟು ಕುಸಿತಕ್ಕೆ ಕಾರಣವಾಗಿದೆ. ಸರ್ಕಾರಗಳು ಮೊದಲೇ ಗ್ರಹಿಸಿದ್ದ ಸತ್ಯಕ್ಕೆ ಹೂಡಿಕೆದಾರರು ಈಗ ಪ್ರತಿಕ್ರಿಯಿಸಿದ್ದಾರೆ. ಎಐ ಈಗ ಕೇವಲ ತಂತ್ರಜ್ಞಾನವಾಗಿ ಉಳಿದಿಲ್ಲ. ಇದು ಈ ಶತಮಾನದ ಕಾರ್ಯತಂತ್ರದ ಆಸ್ತಿಯಾಗಿದ್ದು, ಉತ್ಪಾದಕತೆ, ಮಿಲಿಟರಿ ಶಕ್ತಿ, ಮಾಹಿತಿ ಮತ್ತು ದೇಶದ ಸಾರ್ವಭೌಮತ್ವವನ್ನು ರೂಪಿಸುತ್ತಿದೆ.

ಎಐ ಈ ದಶಕದ ಭೌಗೋಳಿಕ ರಾಜಕೀಯದ ಯುದ್ಧಭೂಮಿಯಾಗಿದೆ ಮತ್ತು ಇಲ್ಲಿನ ಪೈಪೋಟಿ ಕಂಪ್ಯೂಟಿಂಗ್‌ ಶಕ್ತಿಯ ಮೇಲೆ ನಿಂತಿದೆ. ಎಚ್‌200 ಚಿಪ್‌ಗಳನ್ನು ನಿರ್ವಹಿಸಲು ಅಮೆರಿಕ ಅನುಮತಿ ನೀಡಿದ್ದ ಕೆಲವು ಚೀನೀ ಕಂಪನಿಗಳ ಕಚೇರಿಗಳು ಬಳಕೆಯಾಗದೆ ಖಾಲಿ ಬಿದ್ದಿರುವುದನ್ನು ನ್ಯೂಯಾರ್ಕ್‌ ಟೈಮ್ಸ್‌ ಪತ್ತೆ ಹಚ್ಚಿದೆ. ಈ ತಂತ್ರಜ್ಞಾನವನ್ನು ತಲುಪುವ ಪ್ರತಿಯೊಂದು ಮಾರ್ಗವೂ- ಅದು ಸಾಗಣೆಯಾಗಿರಲಿ, ಮಾಡೆಲ್‌ ಆಗಿರಲಿ, ಎಂಜಿನಿಯರ್‌ ಆಗಿರಲಿ ಅಥವಾ ಕಾರ್ಯನಿರ್ವಾಹಕರಾಗಿರಲಿ- ಈಗ ಗುರಿಯಾಗಿದೆ. ಇದು ಈ ವಾರದ ಅತ್ಯಂತ ಮಹತ್ವದ ಸುದ್ದಿಯ ಹಿನ್ನೆಲೆಯಾಗಿದೆ.

ಕಣ್ಣ ಮುಂದೆಯೇ ಇರುವ ಚೀನಾ ಕಾರ್ಯತಂತ್ರ:

ಈ ಸುದ್ದಿ ಹೊರಬಿದ್ದ ತಕ್ಷಣ, ‘ಹನಿಟ್ರ್ಯಾಪ್‌ ಮೂಲಕವೇ ತಂತ್ರಜ್ಞಾನವನ್ನು ಪಡೆಯಬಹುದಾದರೆ, ಆರ್‌&ಡಿಯಲ್ಲಿ ಏಕೆ ಹೂಡಿಕೆ ಮಾಡಬೇಕು?’ ಎಂದು ನಾನು ಪೋಸ್ಟ್‌ ಮಾಡಿದ್ದೆ. ಆ ವ್ಯಂಗ್ಯದ ಹಿಂದೆ ಒಂದು ಗಂಭೀರವಾದ ಪ್ರಶ್ನೆಯಿತ್ತು. 3 ದಶಕಗಳ ಕಾಲ ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ದೇಶಗಳು ತಮ್ಮ ಮುಕ್ತತೆಯು ಪರಸ್ಪರವಾಗಿರುತ್ತದೆ ಎಂದು ಭಾವಿಸಿದ್ದವು. ಚೀನಾ ಕೂಡ ತಮ್ಮ ನಿಯಮಗಳಿಗೆ ಹೊಂದಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಅವು ತಮ್ಮ ಮಾರುಕಟ್ಟೆಗಳು, ವಿಶ್ವವಿದ್ಯಾಲಯಗಳು, ಪ್ರಯೋಗಾಲಯಗಳು ಮತ್ತು ಪ್ರತಿಭಾ ಜಾಲಗಳನ್ನು ತೆರೆದಿಟ್ಟವು. ಆದರೆ ಚೀನಾ ತನಗೆ ಬೇಕಾದಷ್ಟನ್ನು ಮಾತ್ರ ಆಯ್ದುಕೊಂಡು ತೆರೆದುಕೊಂಡಿತು ಮತ್ತು ಪಶ್ಚಿಮದ ಮುಕ್ತತೆಯನ್ನು ನಿರಂತರವಾಗಿ ಬಳಸಿಕೊಂಡು ಲಾಭ ಪಡೆಯಿತು.

ವಿಧಾನ ದಾಖಲಾದ ಅಥವಾ ಆರೋಪಿಸಲಾದ ಪ್ರಕರಣ ಪ್ರಸ್ತುತ ಸ್ಥಿತಿ

ಸೈಬರ್ ಒಳನುಸುಳುವಿಕ ನಾರ್ಟೆಲ್ (2009 ರವರೆಗೆ): ಕಾರ್ಯನಿರ್ವಾಹಕರ ಪಾಸ್‌ವರ್ಡ್‌ಗಳ ಕಳ್ಳತನ, ಶಾಂಘೈಗೆ ದತ್ತಾಂಶ ರವಾನೆ; ಐ-ಸೂನ್ ಸೋರಿಕೆ (2024): ಚೀನಾದ ಗುಪ್ತಚರ, ಪೊಲೀಸ್ ಮತ್ತು ಮಿಲಿಟರಿಗೆ ಗುತ್ತಿಗೆದಾರ; ಶ್ಯಾಡೋ ನೆಟ್‌ವರ್ಕ್ (2010): ಭಾರತ ಸರ್ಕಾರದ ದಾಖಲೆಗಳ ಕಳ್ಳತನ ಬೀಜಿಂಗ್ ನಿರಾಕರಿಸಿದೆ; ಹುವಾವೇ ನಿರಾಕರಿಸಿದೆ (ನಾರ್ಟೆಲ್ ಪ್ರಕರಣ)

ಬೌದ್ಧಿಕ ಆಸ್ತಿ (ಐಪಿ) ಕಳ್ಳತನ ಸಿಸ್ಕೋ ವಿರುದ್ಧ ಹುವಾವೇ (2003–04): ಹುವಾವೇ ರೂಟರ್‌ಗಳಲ್ಲಿ ಸಿಸ್ಕೋ ಕೋಡ್ ನಕಲು ಮಾಡಿರುವುದು ಪತ್ತೆ ರಾಜಿ ಸಂಧಾನವಾಗಿದೆ; ಷರತ್ತುಗಳು ಗೌಪ್ಯವಾಗಿವೆ

ಲಂಚ ಬೆಲ್ಜಿಯಂ ತನಿಖೆ: ಲಾಬಿಯ ಹೆಸರಿನಲ್ಲಿ ಹುವಾವೇಗೆ ಲಾಭ ಮಾಡಿಕೊಡಲು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರಿಗೆ ಹಣ ನೀಡಿದ ಆರೋಪ ತನಿಖೆ ನಡೆಯುತ್ತಿದೆ; ಒಬ್ಬ ಸದಸ್ಯರ ರಕ್ಷಣೆ ಹಿಂಪಡೆಯಲಾಗಿದೆ

ಬಲೆಗೆ ಬೀಳಿಸುವುದು ಹನಿಟ್ರ್ಯಾಪ್‌ಗಳು, ನಕಲಿ ಹೂಡಿಕೆದಾರರು, ಅಮೆರಿಕದ ಸ್ಟಾರ್ಟ್‌ಅಪ್ ಸ್ಪರ್ಧೆಗಳು (ಅಮೆರಿಕ ಅಧಿಕಾರಿಗಳ ಹೇಳಿಕೆ); ಎನ್ವಿಡಿಯಾ ಪ್ರಕರಣ ಸಂಬಂಧ ದೃಢಪಟ್ಟಿದೆ; ಗೂಢಚರ್ಯೆ ವಿವಾದದಲ್ಲಿದೆ

ಎಐ ಮಾಡೆಲ್ ನಕಲು ಅಲಿಬಾಬಾ-ಸಂಬಂಧಿತ ಅಭಿಯಾನ: 3,500 ನಕಲಿ ಖಾತೆಗಳು, ಅಮೆರಿಕದ ಮಾಡೆಲ್‌ನೊಂದಿಗೆ 151 ಮಿಲಿಯನ್ ಸಂಭಾಷಣೆಗಳು ಆ್ಯಂಥ್ರೊಪಿಕ್ ವರದಿ ಮಾಡಿದೆ

2003 ರಲ್ಲಿ ಸಿಸ್ಕೋ ಕಂಪನಿಯು ಹುವಾಯ್‌ ವಿರುದ್ಧ ಮೊಕದ್ದಮೆ ಹೂಡಿತು. ಹುವಾಯ್‌ ರೂಟರ್ ಸಾಫ್ಟ್‌ವೇರ್‌ನಲ್ಲಿ ತನ್ನ ಸೋರ್ಸ್ ಕೋಡ್ ಇದೆ, ಅದರಲ್ಲಿರುವ ದೋಷಗಳೂ (ಬಗ್ಸ್‌) ಒಂದೇ ರೀತಿ ಇವೆ ಎಂದು ಸಿಸ್ಕೋ ಆರೋಪಿಸಿತು. ತನ್ನ ಕೆಲವು ಕೋಡ್‌ಗಳು ಹೊರಗಿನ ಮತ್ತು ಅನಧಿಕೃತ ಮೂಲದಿಂದ ಬಂದಿವೆ ಎಂದು ಹುವಾಯ್‌ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡಿತು. ಸಿಸ್ಕೋ ಕೋಡ್ ಅನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಹುವಾಯ್‌ ಉತ್ಪನ್ನಕ್ಕೆ ನಕಲು ಮಾಡಲಾಗಿದೆ ಎಂದು ನ್ಯಾಯಾಲಯ ನೇಮಿಸಿದ ತಜ್ಞರು 2004ರಲ್ಲಿ ತೀರ್ಮಾನಿಸಿದರು. ಈ ಪ್ರಕರಣವು ಗೌಪ್ಯ ಷರತ್ತುಗಳೊಂದಿಗೆ ರಾಜಿಯಾಯಿತು, ಆ ಕೋಡ್ ಅನ್ನು ತೆಗೆದುಹಾಕಲಾಯಿತು ಮತ್ತು ಸಾರ್ವಜನಿಕ ದಾಖಲೆಯಲ್ಲಿ ಯಾವುದೇ ಔಪಚಾರಿಕ ತಪ್ಪೊಪ್ಪಿಗೆ ದಾಖಲಾಗಲಿಲ್ಲ. ಆದರೆ ದಾಖಲೆಗಳೇ ಸತ್ಯವನ್ನು ಹೇಳುತ್ತವೆ.

ನಾರ್ಟೆಲ್ ಇನ್ನೊಂದು ಎಚ್ಚರಿಕೆಯ ಗಂಟೆಯಾಗಿತ್ತು. ಕನಿಷ್ಠ 2000ನೇ ಇಸವಿಯಿಂದ ಸಿಇಒ ಸೇರಿದಂತೆ 7 ಕಾರ್ಯನಿರ್ವಾಹಕರ ಕದ್ದ ಪಾಸ್‌ವರ್ಡ್‌ಗಳನ್ನು ಬಳಸಿ ಹ್ಯಾಕರ್‌ಗಳು ಅದರ ನೆಟ್‌ವರ್ಕ್‌ನಲ್ಲಿ ಸುತ್ತಾಡುತ್ತಿದ್ದರು ಮತ್ತು ದತ್ತಾಂಶವು ಚೀನಾಕ್ಕೆ ಹರಿಯುತ್ತಿತ್ತು ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದರು. ಹುವಾಯ್‌ ಬೆಳೆದಂತೆ 2009ರಲ್ಲಿ ನಾರ್ಟೆಲ್ ದಿವಾಳಿಯಾಯಿತು. ತನಿಖಾಧಿಕಾರಿಗಳು ಇದಕ್ಕೆ ಹುವಾವೇಗಿಂತ ಹೆಚ್ಚಾಗಿ ಚೀನಾ ಸರ್ಕಾರವನ್ನು ದೂಷಿಸಿದರು. ಎಂದಿನಂತೆ ಬೀಜಿಂಗ್ ಮತ್ತು ಹುವಾಯ್‌ ತಮ್ಮ ಪಾತ್ರವನ್ನು ನಿರಾಕರಿಸಿದವು.

ಇವುಗಳಲ್ಲಿ ಹಲವು ಆರೋಪಗಳಾಗಿವೆ ಮತ್ತು ಬೀಜಿಂಗ್ ಅವುಗಳನ್ನು ನಿರಾಕರಿಸುತ್ತದೆ, ಆದರೆ ದಶಕಗಳಿಂದ ನಡೆದುಕೊಂಡು ಬಂದಿರುವ ಈ ಮಾದರಿ ಮತ್ತು ವಿಧಾನಗಳು ಇಲ್ಲಿ ಮುಖ್ಯವಾಗುತ್ತವೆ. ಪ್ರತಿಸ್ಪರ್ಧಿಗಳು, ವಿಶೇಷವಾಗಿ ಚೀನಾ, ಹೂಡಿಕೆದಾರರು, ಸಂಶೋಧಕರು ಮತ್ತು ಪ್ರೇಮಿಗಳ ಸೋಗಿನಲ್ಲಿ ಜನರನ್ನು ಬಳಸಿಕೊಂಡು ‘ಸಾಮಾಜಿಕ ಗೂಢಚರ್ಯೆ’ ನಡೆಸುತ್ತಿದೆ ಎಂದು ಅಮೆರಿಕದ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ‘ಟೈಮ್ಸ್ ಆಫ್ ಲಂಡನ್’ಗೆ ತಿಳಿಸಿದ್ದಾರೆ. ಎಐ ಯುಗದಲ್ಲಿ ಈ ತೆರೆದ ಬಾಗಿಲು ಎಂದರೆ ಒಂದು ಎಪಿಐ ಕೀ, ಲಿಂಕ್ಡ್‌ಇನ್ ವಿನಂತಿ ಅಥವಾ ಔತಣಕೂಟದ ಆಹ್ವಾನವಾಗಿದೆ.

ಆಟ ಹಳೆಯದು, ಅಪಾಯ ದೊಡ್ಡದು:

ಈ ಕಾರ್ಯತಂತ್ರವು ಕೇವಲ ಸಾಫ್ಟ್‌ವೇರ್ ಮತ್ತು ಚಿಪ್‌ಗಳಿಗೆ ಸೀಮಿತವಾಗಿಲ್ಲ. ಚೀನಾ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ದೇಶಗಳು ನಿಯಮಗಳ ಪ್ರಕಾರ ತಮಗೆ ಸಿಗದಂತಹ ಅತ್ಯಂತ ಅಪಾಯಕಾರಿ ಸಾಮರ್ಥ್ಯಗಳನ್ನು ಯಾವುದೇ ಮಾರ್ಗವನ್ನಾದರೂ ಬಳಸಿ ಪಡೆದುಕೊಂಡು ನಿರ್ಮಿಸಿಕೊಂಡಿವೆ. ಅವುಗಳ ದಾರಿಗಳು ಬೇರೆ ಬೇರೆಯಾಗಿದ್ದವು, ಆದರೆ ತತ್ವ ಒಂದೇ ಆಗಿತ್ತು.

ಪಾಕಿಸ್ತಾನದ ಪರಮಾಣು ಬಾಂಬ್ ತಯಾರಿಕೆ ಶುರುವಾಗಿದ್ದೇ ಕಳ್ಳತನದಿಂದ: 1975ರಲ್ಲಿ ಎ.ಕ್ಯೂ.ಖಾನ್ ನೆದರ್‌ಲೆಂಡ್ಸ್‌ನ ಯುರೆಂಕೊ ಸಂಸ್ಥೆಯ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಂದ ಯುರೇನಿಯಂ ಸಂಸ್ಕರಣಾ ಯಂತ್ರದ ವಿನ್ಯಾಸಗಳನ್ನು ಕದ್ದು ಪರಾರಿಯಾದರು. ಶಸ್ತ್ರಾಸ್ತ್ರ ನಿಯಂತ್ರಣ ವಿಶ್ಲೇಷಣೆಗಳ ಪ್ರಕಾರ, ಚೀನಾ ಪಾಕಿಸ್ತಾನಕ್ಕೆ ಪರಮಾಣು ಶಸ್ತ್ರಾಸ್ತ್ರದ ವಿನ್ಯಾಸ ಮತ್ತು ತರಬೇತಿಯನ್ನು ನೀಡಿತು. ನಂತರ ಖಾನ್ ನಕಲಿ ಕಂಪನಿಗಳ ಜಾಲವನ್ನು ನಡೆಸಿ ಇರಾನ್, ಲಿಬಿಯಾ ಮತ್ತು ಉತ್ತರ ಕೊರಿಯಾಕ್ಕೆ ಈ ತಂತ್ರಜ್ಞಾನವನ್ನು ಮಾರಾಟ ಮಾಡಿದರು.

ಚೀನಾದ ಸ್ವಂತ ದಾಖಲೆಗಳು ವಾಷಿಂಗ್ಟನ್‌ನ ಕಡತಗಳಲ್ಲಿವೆ: ಗೂಢಚರ್ಯೆಯ ಮೂಲಕ ಚೀನಾ ಅಮೆರಿಕದ ಡಬ್ಲ್ಯು88 ಸಿಡಿತಲೆಯ ರಹಸ್ಯ ಮಾಹಿತಿಯನ್ನು ಪಡೆದುಕೊಂಡಿದೆ ಎಂದು 1999ರ ಕಾಕ್ಸ್ ಸಮಿತಿ ತೀರ್ಮಾನಿಸಿತು (ಇದನ್ನು ಚೀನಾ ತಿರಸ್ಕರಿಸಿತು) ಮತ್ತು ರಾಕೆಟ್ ವೈಫಲ್ಯಗಳನ್ನು ಸರಿಪಡಿಸಲು ಚೀನಾಕ್ಕೆ ಸಹಾಯ ಮಾಡುವ ಮೂಲಕ ಲೋರಲ್ ಮತ್ತು ಹ್ಯೂಸ್ ಕಂಪನಿಗಳು ರಫ್ತು ನಿಯಂತ್ರಣಗಳನ್ನು ಉಲ್ಲಂಘಿಸಿವೆ ಎಂದು ಅದು ಹೇಳಿತು. ಭಾರತದಲ್ಲಿರುವ ನಮಗೆ ಇದು ಕೇವಲ ಪುಸ್ತಕದ ವಿಷಯವಲ್ಲ. ಇದು ನಿಜವಾದ ಅಪಾಯಗಳನ್ನು ಸೃಷ್ಟಿಸಿದೆ, ಏಕೆಂದರೆ ಈ ಮೂವರಲ್ಲಿ ಇಬ್ಬರು ನಮ್ಮ ನೆರೆಯವರಾಗಿದ್ದಾರೆ.

2018ರಲ್ಲಿ ನಾನು ಮುಂದಿಟ್ಟ ಆಲೋಚನೆ:

ತಂತ್ರಜ್ಞಾನದ ಭವಿಷ್ಯವನ್ನು ವಿಶ್ವಾಸಾರ್ಹ ಪಾಲುದಾರರ ಒಕ್ಕೂಟಗಳು ರೂಪಿಸಬೇಕು ಮತ್ತು ನಿಯಂತ್ರಿಸಬೇಕು ಎಂದು ನಾನು 2018ರಲ್ಲಿ ವಾದಿಸಿದ್ದೆ. ಅಂದರೆ, ಸಮಾನ ಮೌಲ್ಯಗಳನ್ನು ಹಂಚಿಕೊಳ್ಳುವ, ಕಾನೂನನ್ನು ಗೌರವಿಸುವ, ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಮತ್ತು ಕಳ್ಳತನಕ್ಕಿಂತ ನಿಜವಾದ ಆವಿಷ್ಕಾರದಲ್ಲಿ ನಂಬಿಕೆಯಿಡುವ ದೇಶಗಳ ಒಕ್ಕೂಟ. ಆ ವ್ಯವಸ್ಥೆಯನ್ನು ಈಗಷ್ಟೇ ನಿರ್ಮಿಸಲಾಗುತ್ತಿದೆ—ಅದೂ ಬಹಳ ತಡವಾಗಿ. ಡಿಸೆಂಬರ್ 2025ರಲ್ಲಿ ಪ್ರಾರಂಭವಾದ ಪ್ಯಾಕ್ಸ್ ಸಿಲಿಕಾ, ಚಿಪ್, ಎಐ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯನ್ನು ಸುರಕ್ಷಿತಗೊಳಿಸಲು ವಿಶ್ವಾಸಾರ್ಹ ದೇಶಗಳನ್ನು ಒಟ್ಟುಗೂಡಿಸುತ್ತದೆ. ಫೆಬ್ರವರಿಯಲ್ಲಿ ಜಪಾನ್, ದಕ್ಷಿಣ ಕೊರಿಯಾ, ಯುಕೆ, ಸಿಂಗಪುರ ಮತ್ತು ಇತರ ದೇಶಗಳೊಂದಿಗೆ ಭಾರತವೂ ಈ ಘೋಷಣೆಗೆ ಸಹಿ ಹಾಕಿದೆ. ಇದು ತೀರಾ ಕಡಿಮೆಯಾಯಿತೇ? ಬಹಳ ತಡವಾಯಿತೇ?

ಆದರೆ ಇಷ್ಟೇ ಸಾಕೇ? ಏಕೆಂದರೆ ಹುವಾಂಗ್ ಪ್ರಕರಣದಲ್ಲಿ ಆರೋಪಿಸಲಾದ ಮಾರ್ಗವು ಸ್ವತಃ ಸದಸ್ಯ ರಾಷ್ಟ್ರವಾಗಿರುವ ಸಿಂಗಪುರದ ಕಂಪನಿಯ ಮೂಲಕವೇ ಹಾದುಹೋಗಿದೆ ಎಂಬುದು ನಮಗೆ ತಿಳಿದಿದೆ. ನಂಬಿಕೆಯನ್ನು ಕೇವಲ ಘೋಷಿಸಿದರೆ ಸಾಲದು, ಅದನ್ನು ಪರಿಶೀಲಿಸಬೇಕು. ಒಂದು ‘ವಿಶ್ವಾಸಾರ್ಹ ಒಕ್ಕೂಟ’ಕ್ಕೆ ಇವುಗಳ ಅಗತ್ಯವೂ ಇದೆ:

ಹಂಚಿಕೆಯ ಪ್ರತಿ-ಗೂಢಚರ್ಯೆ: ಕಾರ್ಯನಿರ್ವಾಹಕರು, ಸಂಶೋಧಕರು ಮತ್ತು ಅಧಿಕಾರಿಗಳಿಗೆ ಶತ್ರುಗಳ ತಂತ್ರಗಳ ಬಗ್ಗೆ ಅರಿವು ಮೂಡಿಸುವುದು, ನಕಲಿ ಖರೀದಿ ಕಂಪನಿಗಳನ್ನು ಗುರುತಿಸುವುದು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು.

ಕಂಪ್ಯೂಟಿಂಗ್ ಶಕ್ತಿಯ ಮಾಲೀಕತ್ವದಲ್ಲಿ ಪಾರದರ್ಶಕತೆ: ಡೇಟಾ-ಸೆಂಟರ್ ನಿರ್ವಾಹಕರು, ಮರು ಮಾರಾಟಗಾರರು ಮತ್ತು ಚಿಪ್ ಖರೀದಿದಾರರ ನಿಜವಾದ ಮಾಲೀಕರು ಯಾರು ಎಂಬುದು ಒಕ್ಕೂಟದ ಪ್ರತಿಯೊಂದು ದೇಶದ ನಿಯಂತ್ರಕರಿಗೆ ಸ್ಪಷ್ಟವಾಗಿ ತಿಳಿದಿರಬೇಕು.

ಪರಸ್ಪರತೆ: ನಮಗೆ ಮುಕ್ತವಾಗಿರುವವರಿಗೆ ನಾವೂ ಮುಕ್ತವಾಗಿರುವುದು, ಇಲ್ಲದವರ ಮೇಲೆ ಕಠಿಣ ನಿಗಾ ಇಡುವುದು.

ಕಠಿಣ ಪರಿಣಾಮಗಳು: ಕೇವಲ ವ್ಯಾಪಾರದ ಖರ್ಚು ಎಂದು ಭಾವಿಸಿ ಕಟ್ಟುವ ಸಣ್ಣ ದಂಡಗಳ ಬದಲು, ತಪ್ಪು ಮಾಡಲು ಭಯಪಡುವಂತಹ ಕಠಿಣ ಶಿಕ್ಷೆಗಳನ್ನು ವಿಧಿಸುವುದು.

ಮುಕ್ತವಾಗಿರಿ, ಆದರೆ ಮುಗ್ಧರಾಗಬೇಡಿ:

ಇದಾವುದೂ ಬಾಗಿಲು ಮುಚ್ಚಬೇಕು ಎಂದು ವಾದಿಸುವುದಿಲ್ಲ. ಮುಕ್ತ ಸಮಾಜಗಳು ಮುಕ್ತವಾಗಿರುವುದರಿಂದಲೇ ಬಲಿಷ್ಠವಾಗಿವೆ: ಅವು ಅತ್ಯುತ್ತಮ ಪ್ರತಿಭೆ ಮತ್ತು ಆಲೋಚನೆಗಳನ್ನು ಆಕರ್ಷಿಸುತ್ತವೆ ಮತ್ತು ಹೊಸ ಆವಿಷ್ಕಾರಗಳ ಮೂಲಕ ಗೆಲ್ಲುತ್ತವೆ. ಚೀನಾದ ಎಲ್ಲಾ ತಂತ್ರಜ್ಞಾನವೂ ಕದ್ದಿದ್ದೇ ಎಂದು ನಾನು ವಾದಿಸುತ್ತಿಲ್ಲ. ಆದರೆ ಇತರರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಗಳಿಸಿದ ಅದರ ತಾಂತ್ರಿಕ ವಿಶ್ವಾಸಾರ್ಹತೆಯು ಆ ನಂಬಿಕೆಗೆ ಬಗೆದ ದ್ರೋಹವಾಗಿದೆ. ನಾವು ಪರಿಶೀಲಿಸಬಹುದಾದ ಪಾಲುದಾರರಿಗೆ ಬಾಗಿಲು ತೆರೆಯುವುದು ಮತ್ತು ಉಳಿದವರಿಗೆ ಬೀಗ ಹಾಕುವುದೇ ಇದಕ್ಕೆ ಸರಿಯಾದ ಉತ್ತರ.

ಹುವಾಂಗ್ ಕಥೆಯನ್ನು ಕೇವಲ ಒಂದು ಹಗರಣವಾಗಿ ನೋಡಲಾಗುತ್ತದೆ ಮತ್ತು ಹಗರಣಗಳು ಕೇವಲ ಗದ್ದಲವಷ್ಟೇ. ಆದರೆ ಅದರ ಹಿಂದಿರುವ ವ್ಯವಸ್ಥಿತ ಮಾದರಿಯೇ ನಿಜವಾದ ಸಂಕೇತವಾಗಿದೆ. ತಾನು ನಿರ್ಮಿಸುತ್ತಿರುವುದನ್ನು ರಕ್ಷಿಸಿಕೊಳ್ಳಬೇಕೇ ಅಥವಾ ಅದು ಕಳ್ಳತನವಾಗಲು ಬಿಡಬೇಕೇ ಎಂಬುದನ್ನು ಜಗತ್ತು ಈಗ ನಿರ್ಧರಿಸಬೇಕಿದೆ.

ತಂತ್ರಜ್ಞಾನವನ್ನು ಕದಿಯಬಹುದು, ಆದರೆ ಹಾಗಾಗಲು ಬಿಡಬಾರದು. ಅದರ ವಿಶ್ವಾಸಾರ್ಹತೆಯನ್ನು ಸಂಪಾದಿಸಬೇಕು, ಮತ್ತು ವಿಶ್ವಾಸಾರ್ಹ ಪಾಲುದಾರರು ಮಾತ್ರ ಒಟ್ಟಾಗಿ ಅದನ್ನು ಸಂಪಾದಿಸಲು ಸಾಧ್ಯ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೋದಿ ನನ್ನ ಫೋನ್‌ ಟ್ಯಾಪ್‌ ಮಾಡಿದ್ದಾರೆ : ರಾಗಾ ಆರೋಪ
ರಾಜ್ಯದ ಹಲವು ಬೇಡಿಕೆ ಆಲಿಸಿ: ಡಿಕೆ ಹಕ್ಕೊತ್ತಾಯ