;Resize=(412,232))
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ತಮ್ಮ ವಾಗ್ದಾಳಿ ಮತ್ತಷ್ಟು ತೀವ್ರಗೊಳಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಪ್ರಧಾನಿ ಮೋದಿ ನನ್ನ ಮೊಬೈಲ್ ಟ್ಯಾಪ್ ಮಾಡಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ಒಂದು ವೇಳೆ ಅವರು ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬಂದರೆ, ಅದರ ಬಳಿಕ ಅವರ ರಾಜಕೀಯ ಜೀವನವೇ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಮ್ಮಿಕೊಂಡಿದ್ದ ‘ಆಸ್ಕ್ ಮಿ’ ಸಂವಾದ ಕಾರ್ಯಕ್ರಮದಲ್ಲಿ ‘ಬಿಜೆಪಿ ನಿರಾಕರಣೆ ಹೊರತಾಗಿಯೂ ನೀವೇಕೆ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಪಟ್ಟು ಹಿಡಿದಿದ್ದೀರಿ’ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರ ನೀಡಿದ ರಾಹುಲ್, ‘ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ.
ಕೃಷಿ ಮಸೂದೆ, ಮತಚೋರಿ, ಎಸ್‌ಐಆರ್, ಚೀನಾ, ಎಪ್‌ಸ್ಟೀನ್ ಸೇರಿದಂತೆ ಯಾವುದೇ ವಿಷಯಗಳನ್ನು ಮಾತನಾಡಲು ಬಿಡಲಿಲ್ಲ. ನನ್ನ ಮೈಕ್ರೋಫೋನ್ ಅನ್ನು ಆಫ್ ಮಾಡಲಾಗುತ್ತದೆ. ಹೀಗಾಗಿ ನಾನು ಮೋದಿ ಅವರೊಂದಿಗೆ ಮುಖಾಮುಖಿ ಚರ್ಚೆ ಬಯಸಿದ್ದೇನೆ. ಅಲ್ಲಿ ಟೇಬಲ್‌ನ ಒಂದು ಬದಿಯಲ್ಲಿ ನಾನು ಕುಳಿತಿರುತ್ತೇನೆ, ಮತ್ತೊಂದು ಬದಿಯಲ್ಲಿ ಮೋದಿ ಕುಳಿತಿರಲಿ. ಅಲ್ಲಿ ಅವರು ನನ್ನ ಮೇಲೆ ಆರೋಪ ಮಾಡಲಿ, ನಾನು ಅವರ ಮೇಲೆ ಪ್ರತ್ಯಾರೋಪ ಮಾಡುತ್ತೇನೆ. ಇದಕ್ಕೆ ಜಡ್ಜ್ ಆಗಿ ಬೇಕಿದ್ದರೆ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ನೇಮಿಸಲಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಒಂದಂದೂ ಖಚಿತ. ಇಂಥದ್ದೊಂದು ಚರ್ಚೆ ಮುಕ್ತಾಯದ ಬಳಿಕ ಮೋದಿ ಪ್ರಧಾನಿಯಾಗಿ ಮುಂದುವರೆಯುವುದಿಲ್ಲ’ ಎಂದು ಸವಾಲು ಹಾಕಿದರು.
ಇದೇ ವೇಳೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ಮೋದಿ ನನ್ನ ಮೊಬೈಲ್ ಟ್ಯಾಪ್ ಮಾಡಿಸಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳು ನನ್ನ ಬಳಿ ಇವೆ. ನಮ್ಮಿಬ್ಬರ ನಡುವೆ ಮುಖಾಮುಖಿ ಚರ್ಚೆ ಆದರೆ ಯಾರು ವಿದೇಶಿ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ, ಯಾರು ದೇಶದ್ರೋಹಿಗಳು ಎಂಬುದು ಸಾಬೀತಾಗುತ್ತದೆ. ನನ್ನ ಮೊಬೈಲ್‌ನಲ್ಲಿ ಇದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳಿವೆ’ ಎಂದು ಹೇಳಿದ್ದಾರೆ.
ಜೊತೆಗೆ, ‘ನೀವು ಅವರ ಮುಖವನ್ನು ಗಮನಿಸಿದ್ದೀರಿ. ಅಲ್ಲೊಂದು ರೀತಿಯಲ್ಲಿ ಭಯ ಕಾಣಿಸುತ್ತಿದೆ. ಏಕೆಂದರೆ ನನಗೆ ಏನು ಗೊತ್ತಿದೆ ಎಂಬುದು ಅವರಿಗೂ ಗೊತ್ತಾಗಿದೆ. ಹೀಗಾಗಿಯೇ ಅವರು ಇತ್ತೀಚೆಗೆ ನನ್ನ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ, ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿಲ್ಲ, ಅವರು ಅತ್ಯಂತ ಜಾಗರೂಕವಾಗಿದ್ದಾರೆ, ಅದಕ್ಕೆಲ್ಲಾ ಒಂದು ಕಾರಣವಿದೆ’ ಎಂದು ರಾಹುಲ್ ಹೇಳಿದ್ದಾರೆ.
ನೀವು ಅವರ ಮುಖ ಗಮನಿಸಿದ್ದೀರಿ. ಅವರಲ್ಲಿ ಭಯ ಕಾಣಿಸುತ್ತಿದೆ. ಇತ್ತೀಚೆಗೆ ನನ್ನನ್ನು ಅವರು ತುಂಬಾ ಟೀಕಿಸುತ್ತಿಲ್ಲ. ಅತ್ಯಂತ ಜಾಗರೂಕವಾಗಿದ್ದಾರೆ, ಅದಕ್ಕೆಲ್ಲಾ ಒಂದು ಕಾರಣವಿದೆ.
- ರಾಹುಲ್ ಗಾಂಧಿ, ಲೋಕಸಭೆ ವಿಪಕ್ಷ ನಾಯಕ