;Resize=(412,232))
ಬೆಂಗಳೂರು : ಮೆಟ್ರೋ ಯೋಜನೆಯಲ್ಲಿ ಆರ್ಥಿಕ ಹೊರೆ ಹೆಚ್ಚಾಗಿದ್ದು, ರಾಜ್ಯದ ಭಾರ ಕಡಿಮೆ ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ಅವರಲ್ಲಿ ಮನವಿ ಮಾಡಿದರು.
ಶುಕ್ರವಾರ ನಗರದಲ್ಲಿ ಮೆಟ್ರೋ ಉದ್ಘಾಟನೆ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ ಪ್ರಧಾನಿ ಮೋದಿ ಅವರಿಗೂ ಮನವಿ ಪತ್ರ ಸಲ್ಲಿಸಿದರು.
ದೆಹಲಿಯಂತೆ ಬೆಂಗಳೂರಿಗೂ ಆದ್ಯತೆ ನೀಡಿ, ಮೆಟ್ರೋವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ 50:50 ಅನುಪಾತದ ಯೋಜನೆ ಎಂದು ಹೇಳಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಆರ್ಥಿಕ ಹೊರೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಾಗಿದೆ. ಭೂಸ್ವಾಧೀನ ವೆಚ್ಚ, ವಿದೇಶಿ ಸಾಲ ಮರು ಪಾವತಿ, ಕೇಂದ್ರ ಹಾಗೂ ರಾಜ್ಯ ತೆರಿಗೆ ಸೇರಿ ಎಲ್ಲವೂ ರಾಜ್ಯ ಸರ್ಕಾರದ ಮೇಲೆಯೇ ಬಿದ್ದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಜೊತೆಗೆ ಮೆಟ್ರೋ ಯೋಜನೆಯ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನಾಗಿ ಹಂಚಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿದರು.
500 ಕಿ.ಮೀ ನಷ್ಟು ಮೆಟ್ರೋ ಸಂಪರ್ಕ ಹೊಂದುವ ಗುರಿ ಇದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಮೆಟ್ರೋ ಕೂಡ ಒಂದು ಪ್ರಮುಖ ಭಾಗವಾಗಿದೆ. ಕಳೆದ ಎರಡು ವರ್ಷಗಳಿಂದ ಮೆಟ್ರೋ ಯೋಜನಾ ಅನುಮತಿ ಬಾಕಿ ಉಳಿದಿದ್ದು, ಕೆಂಪು ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.
ಮೆಟ್ರೋಗಾಗಿ ಒಂದು ತಾಂತ್ರಿಕ ಸಂಸ್ಥೆ ಅಗತ್ಯವಿದ್ದು, ಇದರಿಂದ ಭಾರತದ ಎಲ್ಲಾ ಮೆಟ್ರೋ ನಗರಗಳಿಗೂ ನೆರವಾಗಲಿದೆ. ಮೆಟ್ರೋ ಯೋಜನೆಗಳನ್ನು ಈ ತಾಂತ್ರಿಕ ಸಮಿತಿ ಶಿಫಾರಸ್ಸಿನ ಅನುಸಾರ ಅನುಮತಿ ನೀಡಬಹುದು. ಇದರಿಂದ ಯೋಜನೆಗೆ ಅನುಮತಿಗೆ ವೇಗ ಸಿಗಲಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 85 ಲಕ್ಷ ಹೆಕ್ಟೇರ್ ನಷ್ಟು ಬೆಳೆ ನಷ್ಟವಾಗಿದೆ. 62 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕ 22 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ರೈತರಿಗೆ ತ್ವರಿತ ಸಹಾಯ ನೀಡಲು ಪರಿಹಾರ ಮೊತ್ತವನ್ನು ಬೇಗ ಬಿಡುಗಡೆ ಮಾಡಿ ರಾಜ್ಯಕ್ಕೆ ಸಹಕಾರ ನೀಡಬೇಕೆಂದು ಕೋರಿದರು.
ಕಬ್ಬು ಬೆಳೆಗಾರರ ಸಮಸ್ಯೆ ಕೂಡ ಹೆಚ್ಚಾಗಿದ್ದು ರೈತರು ಪ್ರತಿ ಟನ್ ಕಬ್ಬಿಗೆ 5500 ರೂ. ಬೇಡಿಕೆ ಇಡುತ್ತಿದ್ದಾರೆ. 2019ರಿಂದ ದೇಶದಲ್ಲಿ ಸಕ್ಕರೆ ಎಂಎಸ್ ಪಿ (ಕನಿಷ್ಠ ಮಾರಾಟ ದರ) 31 ರು.ನಲ್ಲೇ ಉಳಿದಿದೆ. ಇನ್ನು ಎಥೆನಾಲ್ ಅನುದಾನವನ್ನು ರಾಜ್ಯಕ್ಕೆ ನೀಡಬೇಕೆಂದು ಕೋರಿದರು.
ದೇಶದಲ್ಲಿ ನವೋದ್ಯಮ ನೀತಿ ತಂದ ಮೊದಲ ರಾಜ್ಯ ಕರ್ನಾಟಕ. ಕರ್ನಾಟಕದಿಂದ ಅನೇಕ ಉದ್ಯಮಿಗಳು ಬೆಳೆದಿದ್ದಾರೆ. ಬೆಂಗಳೂರು ಜಗತ್ತಿನ ಎರಡನೇ ಎಐ ಪ್ರತಿಭೆಗಳ ತವರೂರಾಗಿದೆ. ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ 1.50 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದು, ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, 13,940 ವೈದ್ಯರು ಪ್ರತಿ ವರ್ಷ ತಯಾರಾಗುತ್ತಿದ್ದಾರೆ. ಉದ್ಯಮಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಶೇ.18 ಇದ್ದರೂ ರಾಜ್ಯದಲ್ಲಿ ಶೇ.37 ಇದೆ. ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲಿವೆ. ಭಾರತದ ಚಿಪ್ ವಿನ್ಯಾಸದಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿದೆ. ಇನ್ನು ಏಷ್ಯಾದಲ್ಲಿ ಬೀಜಿಂಗ್ ನಂತರ ಎರಡನೇ ಅತಿ ದೊಡ್ಡ ಎಐ ಕ್ಲಸ್ಟರ್ ಆಗಿದೆ. ಬೆಂಗಳೂರು ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸುತ್ತಿದೆ ಎಂದು ವಿವರಿಸಿದರು.
ಮಾನವ ಸಂಪನ್ಮೂಲದಲ್ಲೂ ರಾಜ್ಯ ಅಗ್ರಸ್ಥಾನದಲ್ಲಿದ್ದು, ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ. ರಾಜ್ಯಕ್ಕೆ ಕೇಂದ್ರ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನಂತರ ಮನವಿ ಪತ್ರ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಕೋರಿದರು.
ಏನೇನು ಬೇಡಿಕೆ?
- ಮೆಟ್ರೋ ಯೋಜನೆಯಲ್ಲಿ ರಾಜ್ಯದ ಮೇಲೆ ಹೆಚ್ಚಾಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಿ
- ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ, ರಾಜ್ಯ ಸರ್ಕಾರ ಸಮನಾಗಿ ಹಂಚಿಕೊಳ್ಳಬೇಕು
- ಮೆಟ್ರೋ ಯೋಜನೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು
- ಕೆಂಪು ಮಾರ್ಗದ ಕಾಮಗಾರಿ ಅನುಮತಿಗಾಗಿ ಸಂಬಂಧಿಸಿದ ಇಲಾಖೆಗೆ ಮಾರ್ಗದರ್ಶನ ನೀಡಿ
- ಮೆಟ್ರೋ ರೈಲು ಯೋಜನೆಗಳಿಗೆ ವೇಗ ನೀಡಲು ಪ್ರತ್ಯೇಕ ತಾಂತ್ರಿಯ ಸಂಸ್ಥೆಯನ್ನು ಸ್ಥಾಪಿಸಿ
- ರಾಜ್ಯದಲ್ಲಿ ಬರದಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದ ಪರಿಹಾರ ಶೀಘ್ರ ಬಿಡುಗಡೆ ಮಾಡಿ
- ಸಕ್ಕರೆ ಎಂಎಸ್ಪಿ ₹31ರಲ್ಲೇ ಸ್ಥಿರವಾಗಿದ್ದು, ಹೆಚ್ಚಳ ಮಾಡಿ, ರಾಜ್ಯಕ್ಕೆ ಎಥೆನಾಲ್ ಅನುದಾನ ನೀಡಿ
- ಮೇಕೆದಾಟು ಸ್ಕೀಂಗೆ ಸಹಕರಿಸಿ. ಪ.ಘಟ್ಟಕ್ಕೆ ಮಾರಕವಾಗುವ ಕಸ್ತೂರಿ ರಂಗನ್ ವರದಿ ಹಿಂಪಡೆಯಿರಿ
- 1,000 ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸಿಎಸ್‌ಆರ್ ನೆರವು ಕೊಡಿ. ಪ್ರಧಾನಿ ಮುಂದೆ ಮನವಿ