;Resize=(412,232))
ನವದೆಹಲಿ: ಬಹಚರ್ಚಿತ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯುವ ಸರ್ಕಾರದ ಪ್ರಯತ್ನ ವಿಫಲವಾಗಿತ್ತು. ಆ.13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಸಂಸತ್ತಿನ ಮುಂಗಾರು ಅಧಿವೇಶನ ಇನ್ನೂ ಅಧಿಕೃತವಾಗಿ ಅಂತ್ಯಗೊಳ್ಳದ ಹಿನ್ನೆಲೆಯಲ್ಲಿ ಈ ವಿಶ್ಲೇಷಣೆ ಮುನ್ನೆಲೆಗೆ ಬಂದಿದೆ.
ಏಪ್ರಿಲ್ ಮತ್ತು ಮೇನಲ್ಲಿ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ, ಇಂಡಿಯಾ ಕೂಟದ ಭಾಗವಾಗಿದ್ದ ಟಿಎಂಸಿ ಮತ್ತು ಡಿಎಂಕೆ ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಅಧಿಕಾರ ಕಳೆದುಕೊಂಡವು. ಸಾಲದ್ದಕ್ಕೆ, ಮಮತಾ ಬ್ಯಾನರ್ಜಿ ಅವರ ಟಿಎಂಸಿ 2 ಹೋಳಾಗಿ, 22 ಸಂಸದರು ಬಿಜೆಪಿಗೆ ಸೇರ್ಪಡೆಯಾಗಿದರು. ಇದರಿಂದ ಸಂಖ್ಯೆ ಹಾಗೂ ಪ್ರಭಾವದ ವಿಷಯದಲ್ಲಿ ಇಂಡಿಯಾ ಕೂಟದ ಬಲ ತಗ್ಗಿದೆ. ಹೀಗಿರುವಾಗ ಮಸೂದೆ ಅಂಗೀಕಾರಕ್ಕೆ ಸೂಕ್ತ ವಾತಾವರಣ ತಯಾರಾಗಿದ್ದು, ಇದನ್ನು ಬಳಸಿಕೊಳ್ಳಲು ಎನ್‌ಡಿಎ ಮುಂದಾಗಿದೆ.
ಜನಸಂಖ್ಯೆಯಲ್ಲಿನ ಬದಲಾವಣೆಗಳ ಆಧಾರದ ಮೇಲೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುರೂಪಿಸಲು ಅಗತ್ಯವಾದ ಈ ಮಸೂದೆಯನ್ನು ಏಪ್ರಿಲ್‌ನಲ್ಲಿ ಕೆಳಮನೆಯಲ್ಲಿ ಮಂಡಿಸಲಾಗಿತ್ತಾದರೂ, ಇದು ಜಾರಿಗೆ ಬಂದಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ತಗ್ಗುತ್ತದೆ ಎಂಬ ಆತಂಕವಿದ್ದ ಕಾರಣ ವಿಪಕ್ಷಗಳು ಅದನ್ನು ಅಂಗೀಕರಿಸುವುದರಿಂದ ಹಿಂದೆ ಸರಿದಿದ್ದವು. ಪರಿಣಾಮ 2/3 ಬಹುಮತ ಪಡೆಯುವಲ್ಲಿ ಅದು ವಿಫಲವಾಗಿತ್ತು.
ಇದರ ಜತೆಗೇ, ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿರಿಸಲು ಅವಕಾಶ ಕಲ್ಪಿಸುವ ನಾರಿ ಶಕ್ತಿ ವಂದನ ಕಾಯ್ದೆ, 2023ರನ್ನೂ ಮಂಡಿಸಲಾಗಿತ್ತು. ಇದರ ಅನುಷ್ಠಾನವು ಮುಂದಿನ ಜನಗಣತಿಯ ನಂತರ ನಡೆಯುವ ಕ್ಷೇತ್ರ ಮರುವಿಂಗಡಣೆಯ ಪೂರ್ಣಗೊಳ್ಳುವಿಕೆಯೊಂದಿಗೆ ಜೋಡಿಸಲ್ಪಟ್ಟಿತ್ತು. ಆದರೆ ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಇದು ಕೂಡ ಅಂಗೀಕಾರ ಆಗಿರಲಿಲ್ಲ.