ಡ್ರಗ್ಸ್‌ ಆಪಾದಿತನಿಗೆ ನಿಗಮ, ಮಂಡಳೀಲಿ ಸ್ಥಾನ: ವಿವಾದ

Published : Nov 13, 2026, 09:28 AM IST
Congress

ಸಾರಾಂಶ

ನಿಗಮ-ಮಂಡಳಿಗಳು ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಬುಧವಾರ ಹೊರಡಿಸಲಾಗಿರುವ ಆದೇಶದಲ್ಲಿ ಡ್ರಗ್ಸ್‌ ಕೇಸ್‌ನ ಓರ್ವ ಆರೋಪಿ ಹಾಗೂ ಆರೆಸ್ಸೆಸ್‌ ಜತೆ ನಂಟು ಹೊಂದಿದ್ದ ಮತ್ತು ಈಗಲೂ ಹೊಂದಿರುವ ಇಬ್ಬರಿಗೆ ಸ್ಥಾನ

ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಗೆ ಬರುವ ನಿಗಮ-ಮಂಡಳಿಗಳು ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಬುಧವಾರ ಹೊರಡಿಸಲಾಗಿರುವ ಆದೇಶದಲ್ಲಿ ಡ್ರಗ್ಸ್‌ ಕೇಸ್‌ನ ಓರ್ವ ಆರೋಪಿ ಹಾಗೂ ಆರೆಸ್ಸೆಸ್‌ ಜತೆ ನಂಟು ಹೊಂದಿದ್ದ ಮತ್ತು ಈಗಲೂ ಹೊಂದಿರುವ ಇಬ್ಬರಿಗೆ ಸ್ಥಾನ ದೊರಕಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್‌ ನ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ಕೆಕೆಆರ್‌ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ) ನಿರ್ದೇಶಕರ ಮಂಡಳಿಯಲ್ಲಿ ಲಿಂಗರಾಜ್‌ ಕಣ್ಣಿಗೆ ಸ್ಥಾನ ನೀಡಲಾಗಿದೆ. ಇವರು ಡ್ರಗ್ಸ್‌ ಸಾಗಾಟ ಪ್ರಕರಣದಲ್ಲಿ 2025ರಲ್ಲಿ ಮುಂಬೈನಲ್ಲಿ ಬಂಧನಕ್ಕೊಳಗಾಗಿದ್ದರು.

ಜೊತೆಗೆ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನೇಮಕಗೊಂಡಿರುವ ಸುಶೀಲ ಕುಮಾರ ಪತ್ತಾರ ಹಾಗೂ ಕರ್ನಾಟಕ ಸಿಲ್ಕ್ ಬೋರ್ಡ್‌ಗೆ ಸದಸ್ಯರಾಗಿ ನೇಮಕಗೊಂಡಿರುವ ಲೀಲಾಧರ ಠಾಕೂರ್ ಅವರು ಆರ್‌ಎಸ್‌ಎಸ್‌ನ ಕಾರ್ಯಕರ್ತರು.

ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿದ್ದ ಕಣ್ಣಿ:

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ ಲಿಂಗರಾಜ್ ಕಣ್ಣಿ ನೇಮಕವಾಗಿರೋದು ‘ಕೈ’ ಪಾಳೆಯದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲಿಂಗರಾಜ ಕಣ್ಣಿ ಅವರ ವಿರುದ್ಧ ಡ್ರಗ್ಸ್‌ ಪೂರೈಕೆ ಮಾಡಿದ ಆರೋಪವಿದೆ. 27 ಸಾವಿರ ರೂ. ಮೌಲ್ಯದ ನಿಷೇಧಿತ 120 ಬಾಟಲ್‌ ಕೋಡಿನ್ ಫಾಸ್ಫೇಟ್ ಸಿರಪ್ ನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಲಿಂಗರಾಜ್ ಕಣ್ಣಿಯವರು 2025ರ ಜೂನ್‌ 22 ರಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಅವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಮತ್ತು ಕಾಸ್ಮೆಟಿಕ್‌ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬೆಳವಣಿಗೆ ಕಳೆದ ವರ್ಷ ಕಲಬುರಗಿಯಲ್ಲಿ ತೀವ್ರ ರಾಜಕೀಯ ಸಂಚಲನ ಹುಟ್ಟುಹಾಕಿತ್ತು. ಬಳಿಕ, ಲಿಂಗರಾಜ ಕಣ್ಣಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದೀಗ ಅವರಿಗೆ ಕೆಕೆಆರ್‌ಟಿಸಿ ನಿರ್ದೇಶಕ ಹುದ್ದೆ ನೀಡಲಾಗಿದೆ.

2 ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಮಣೆ:

ಇದೇ ವೇಳೆ, ಇಬ್ಬರು ಆರ್‌ಎಸ್‌ಎಸ್‌ ಕಾರ್ಯಕರ್ತರಿಗೂ ನಿಗಮ-ಮಂಡಳಿಗಳಲ್ಲಿ ಹುದ್ದೆ ದೊರೆತಿದ್ದು, ಕೈ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿಯವರ ಆಪ್ತ, ಬೆಳಗಾವಿ ಜಿಲ್ಲೆ ಅಥಣಿ ಮೂಲದ ವಕೀಲ, ಸುಶೀಲ ಕುಮಾರ ಪತ್ತಾರ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇವರು ಮೂಲತಃ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದು, ಬಿಜೆಪಿಯಲ್ಲಿದ್ದರು. ಸವದಿ ಜೊತೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ಈ ಮಧ್ಯೆ, ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತ ಹಾಗೂ ಹಿಂದೊಮ್ಮೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಚಿತ್ರದುರ್ಗ ಮೂಲದ ನ್ಯಾಯವಾದಿ, ಲೀಲಾಧರ ಠಾಕೂರ್ ಅವರನ್ನು ಕರ್ನಾಟಕ ಸಿಲ್ಕ್ ಬೋರ್ಡ್‌ಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರ ಮಾವ, ಚಿತ್ರನಟ ದೊಡ್ಡಣ್ಣ ಅವರಿಗೆ ಹತ್ತಿರವಾಗಿದ್ದ ಲೀಲಾಧರ ಠಾಕೂರ್, ಕಾಂಗ್ರೆಸ್ ಬೆಂಬಲಿಸಿದ್ದರು. ಪಪ್ಪಿ ಗೆದ್ದ ನಂತರ ಅವರ ಆಪ್ತ ವಲಯದಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದರು. ಇಷ್ಟಾದರೂ ಲೀಲಾಧರ ಠಾಕೂರ್ ಅವರು ಆರ್‌ಎಸ್‌ಎಸ್ ಸಂಪರ್ಕ ಕಡಿದುಕೊಂಡಿರಲಿಲ್ಲ.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಪ್ರಕಾಶ್ ರಾಮಾನಾಯ್ಕ್, ಪಕ್ಷದಲ್ಲಿ ದುಡಿದವರಿಗೆ ಸ್ಥಾನಮಾನ ನೀಡಿಲ್ಲ. ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದವರಿಗೆ ಹುದ್ದೆ ನೀಡಿದ್ದು, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಕೂಡಲೇ ಆದೇಶ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯದ 4 ಕಡೆಗಳಲ್ಲಿ ಎಸ್‌ಸಿ, ಎಸ್ಟಿ ಸಮಾವೇಶ: ಸಿಎಂ ಡಿಕೆ
ಜಿಬಿಎ ಎಲೆಕ್ಷನ್‌ ಮುಂದೂಡಿಕೆಗೆ ಸುಪ್ರೀಂಗೆ ರಾಜ್ಯ ಅರ್ಜಿ