ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅನಂತ ಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿನ ಧೂಳಿಗೂ ಸಮನಲ್ಲ, ಅವರು ಹದ್ದು ಮೀರಿ ಮಾತನಾಡುತ್ತಿದ್ದಾರೆ. ಈ ರೀತಿಯ ಹೇಳಿಕೆಗೆ ಜನರೇ ಉತ್ತರ ಕೊಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತಿತರರು ಕಿಡಿಕಾರಿದ್ದಾರೆ.
ಇದೇ ವೇಳೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಪಕ್ಷದ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಅನಂತ್ ಕುಮಾರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು, ಅವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಿದ್ದಾರೆ. ಈ ನಡುವೆ, ಅನಂತಕುಮಾರ್ ಹೆಗಡೆ ವಿರುದ್ಧ ಕುಮಟಾ ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲಾಗಿದೆ.
ಅನಂತಕುಮಾರ ಹೆಗಡೆ ಹೇಳಿದ್ದೇನು?
ಹಿಂದೂ ಸಮಾಜವನ್ನು ಜಾತಿ, ಭಾಷೆ, ಪ್ರಾದೇಶಿಕತೆ ಆಧಾರದಲ್ಲಿ ಒಡೆಯುತ್ತಾ ಬರಲಾಗಿದೆ. ಮೂರ್ಖರಾಮಯ್ಯನಂಥವರು ಈಗಲೂ ಸಮಾಜವನ್ನು ಒಡೆಯುತ್ತಲೇ ಇದ್ದಾರೆ.
ಈ ಬಾರಿ ಅವರಿಗೆ ಯಾವ ರೀತಿಯ ಹೊಡೆತ ನೀಡಬೇಕೆಂದರೆ ಪುನರ್ ಜನ್ಮವೂ ಸಿಗಬಾರದು ಎಂದು ಹೇಳಿ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದರು.
ಏನೋ ಹೆಚ್ಚುಕಡಿಮೆ ಆಗಿದೆ: ಸಿದ್ದರಾಮಯ್ಯ ಕುರಿತ ಏಕವಚನದ ವಾಗ್ದಾಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಡಿ.ಕೆ.ಶಿವಕುಮಾರ್, ಅನಂತ್ ಕುಮಾರ್ ಹೆಗಡೆಗೆ ಏನೋ ಹೆಚ್ಚು ಕಡಿಮೆ ಆಗಿದೆ. ಅವರು ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ಈಗ ಬಂದು ಏನೋನೋ ಮಾತನಾಡುತ್ತಿದ್ದಾರೆ. ಅದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದರು.
ಇನ್ನು ಸಂಸದ ಅನಂತ್ ಕುಮಾರ್ ಹದ್ದುಮೀರಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಜಗದೀಶ್ ಶೆಟ್ಟರ್, ಇಷ್ಟುದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗ ಮುನ್ನೆಲೆಗೆ ಬಂದಿದ್ದಾರೆ.
ಸಾಂವಿಧಾನಿಕ ಹುದ್ದೆಯಲ್ಲಿದ್ದವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನರೇಂದ್ರ ಮೋದಿ ಅವರ ಬಗ್ಗೆ ಈ ರೀತಿ ಮಾತನಾಡಿದರೆ ಅವರು ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದರು.
ಕಾಲಿನ ಧೂಳಿಗೂ ಸಮನಲ್ಲ: ಸಿದ್ದರಾಮಯ್ಯನವರ ಕಾಲಿನ ಧೂಳಿಗೂ ಅನಂತ ಕುಮಾರ್ ಸಮನಲ್ಲ ಎಂದು ಕನ್ನಡ ಸಂಸ್ಕೃತಿ ಶಿವರಾಜ್ ತಂಗಡಗಿ ಹೇಳಿದರೆ, ಸಂಸದ ಕೂಡಲೇ ಮುಖ್ಯಮಂತ್ರಿಗಳ ಕ್ಷಮೆ ಯಾಚಿಸಬೇಕು ಎಂದು ಮತ್ತೊಬ್ಬ ಸಚಿವ ಆರ್.ಬಿ.ತಿಮ್ಮಾಪುರ ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಂತು, ‘ನಿನ್ನಂಥವರನ್ನು ಹೊರಗೆ ಓಡಾಡಲು ಬಿಟ್ಟಿರುವುದೇ ಸರಿಯಲ್ಲ. ಎಫ್‌ಐಆರ್ ಹಾಕಿ ಒಳಗೆ ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್, ಹೆಗಡೆಗೆ ಏನೋ ಆಗಿದೆ, ಅನಂತ್ ಹೆಗಡೆ ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ಈಗ ಬಂದು ಏನೇನೋ ಮಾತಾಡುತ್ತಿದ್ದಾರೆ. ಜನರೇ ಅವರಿಗೆ ಉತ್ತರ ಕೊಡುತ್ತಾರೆ.
ಇಷ್ಟು ದಿನ ನಾಪತ್ತೆಯಾಗಿದ್ದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಮೋದಿ ಬಗ್ಗೆ ಈ ರೀತಿ ಮಾತಾಡಿದರೆ ಅವರು ಸುಮ್ಮನಿರುತ್ತಾರೆಯೇ? ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.