ದಿಲ್ಲಿಯತ್ತ ಕಿವಿಗೊಟ್ಟ ಕೈ ನಾಯಕರು

Published : Jul 14, 2026, 08:50 AM IST
DK Shivakumar

ಸಾರಾಂಶ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿದೇಶ ಪ್ರವಾಸದಿಂದ ವಾಪಸಾಗಿದ್ದು, ಯಾವುದೇ ಸಮಯದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ದೆಹಲಿಗೆ ಬುಲಾವ್ ಬರುವ ಸಾಧ್ಯತೆಯಿದೆ.

ಬೆಂಗಳೂರು :  ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿದೇಶ ಪ್ರವಾಸದಿಂದ ವಾಪಸಾಗಿದ್ದು, ಯಾವುದೇ ಸಮಯದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ದೆಹಲಿಗೆ ಬುಲಾವ್ ಬರುವ ಸಾಧ್ಯತೆಯಿದೆ.

ದೆಹಲಿ ನಾಯಕರ ಕರೆ ಬಂದ ತಕ್ಷಣ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯುಸಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ದೆಹಲಿಗೆ ತೆರಳಲಿದ್ದು, ಆದಷ್ಟು ಶೀಘ್ರ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ.

ಜೂನ್‌ ಅಂತಿಮ ಅಥವಾ ಜುಲೈ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ ಆಗಬೇಕಿದ್ದರೂ ರಾಹುಲ್‌ಗಾಂಧಿ ವಿದೇಶ ಪ್ರವಾಸದಿಂದ ವಿಳಂಬವಾಗಿತ್ತು. ಈಗ ರಾಹುಲ್‌ಗಾಂಧಿ ಅವರು ದೆಹಲಿಗೆ ವಾಪಸಾಗಿದ್ದು, ಸಂಪುಟ ವಿಸ್ತರಣೆ ಸಮಯ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸಚಿವ ಸ್ಥಾನಾಕಾಂಕ್ಷಿಗಳ ಚಟುವಟಿಕೆ ಗರಿಗೆದರಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸೋಮವಾರ ಲಾಬಿ ನಡೆಸಿದ್ದಾರೆ.

ಸಂಪುಟ ವಿಸ್ತರಣೆಗೆ ಪೂರಕವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ‘ಆ.6 ರಿಂದ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ಹೀಗಾಗಿ ನಮ್ಮ ನಾಯಕರು ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ಹೋಗಲು ದಿನಾಂಕ ನಿಗದಿ ಮಾಡಲಿದ್ದು, ನಂತರ ನಾನು ದೆಹಲಿಗೆ ಹೋಗುವೆ’ ಎಂದು ಸಂಪುಟ ವಿಸ್ತರಣೆ ಕುರಿತು ಸುಳಿವು ನೀಡಿದ್ದಾರೆ.

ಶೀಘ್ರ ಸಂಪುಟ ವಿಸ್ತರಣೆ:

ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಆದಷ್ಟು ಶೀಘ್ರ ಸಂಪುಟ ವಿಸ್ತರಣೆ ಆಗಲಿದೆ. ರಾಹುಲ್ ಗಾಂಧಿ ಅವರು ದೆಹಲಿಗೆ ಬಂದಿದ್ದಾರೆ. ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಹೀಗಾಗಿ ಬಹುತೇಕ ಶೀಘ್ರ ಸಂಪುಟ ವಿಸ್ತರಣೆ ಬಗ್ಗೆ ಪ್ರಮುಖ ತೀರ್ಮಾನ ಹೊರ ಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿ ಶಾಸಕರಾದ ಅಶೋಕ್ ಪಟ್ಟಣ್, ರಾಜೇಗೌಡ, ಶಿವಲಿಂಗೇಗೌಡ, ಹಂಪನಗೌಡ ಬಾದರ್ಲಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಲಾಬಿ ನಡೆಸಿದರು.

ಡಿ.ಕೆ.ಶಿವಕುಮಾರ್ ಅವರನ್ನು ಸಹ ಕೆಲ ಶಾಸಕರು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಕೆ ಮುಂದುವರೆಸಿದರು ಎಂದು ತಿಳಿದುಬಂದಿದೆ.

ಯಾರ್ಯಾರಿಗೆ ಅವಕಾಶ?:

ಚೆಲುವರಾಯಸ್ವಾಮಿ, ಶಿವರಾಜ್‌ ತಂಗಡಗಿ ಮೊದಲಾದವರ ಹೆಸರು ಪಟ್ಟಿ ಸೇರುವ ಸಾಧ್ಯತೆಯಿದೆ. ಎಚ್‌.ಕೆ.ಪಾಟೀಲ್ ಹಾಗೂ ದಿನೇಶ್‌ ಗುಂಡುರಾವ್‌ ಇವರಿಬ್ಬರ ಪೈಕಿ ಒಬ್ಬರನ್ನು ಸ್ಪೀಕರ್‌ ಮಾಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಹೈಕಮಾಂಡ್‌ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

3 ರಿಂದ 5 ಮಂದಿ ಮಾಜಿ ಸಚಿವರಿಗಷ್ಟೇ ಅವಕಾಶ?

ಮೇ 28 ರಂದು ವಿಸರ್ಜನೆಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಸಚಿವರ ಪೈಕಿ 3 ರಿಂದ 5 ಮಂದಿಗೆ ಮಾತ್ರ ಸಂಪುಟ ವಿಸ್ತರಣೆ ವೇಳೆ ಅವಕಾಶ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಸಚಿವರ ಪೈಕಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಜೂ.3 ರಂದು 12 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತ್ರ ಹೊಸದಾಗಿ ಆಯ್ಕೆಯಾಗಿದ್ದರು.

ಮಧು ಬಂಗಾರಪ್ಪ ಪರ ಶಿವಣ್ಣ ಲಾಭಿ!

ಸಂಪುಟದಲ್ಲಿ ಇದೀಗ 13 ಸ್ಥಾನ ಭರ್ತಿಯಾಗಿದ್ದು, ಉಳಿದಂತೆ 20ಕ್ಕೂ ಹೆಚ್ಚು ಸ್ಥಾನಗಳಿಗೆ ಶೀಘ್ರ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ 3-4ಕ್ಕಿಂತ ಹೆಚ್ಚು ಬಾರಿ ಶಾಸಕರಾಗಿದ್ದ ಮಾಜಿ ಸಚಿವರಿಗಷ್ಟೇ ಮತ್ತೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದರ ನಡುವೆಯೂ ಯುವ ನಾಯಕರಾದರೂ ಮಧುಬಂಗಾರಪ್ಪ ಮತ್ತೆ ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ. ಶಿವರಾಜ್‌ಕುಮಾರ್‌ ಅವರ ನೇರ ಪ್ರಭಾವದ ಕಾರಣದಿಂದ ಸಚಿವ ಸ್ಥಾನ ಖಚಿತವಾಗಿದೆ ಎನ್ನಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯದಲ್ಲಿ ದೇಗುಲ ಹುಂಡಿಗಳಿಗೆ ಇನ್ನು ಹೈಟೆಕ್‌ ಭದ್ರತೆ !
10,000 ಭಾರತ್‌ ಜೋಡೋ ಸಂಘ ಸ್ಥಾಪನೆಗೆ ಆದೇಶ