ರಾಜ್ಯದಲ್ಲಿ ದೇಗುಲ ಹುಂಡಿಗಳಿಗೆ ಇನ್ನು ಹೈಟೆಕ್‌ ಭದ್ರತೆ !

Published : Jul 14, 2026, 07:02 AM IST
Hundi

ಸಾರಾಂಶ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿ ದೇವಾಲಯಗಳಲ್ಲಿ ಹುಂಡಿ ಕಳ್ಳತನದಂಥ ಕೃತ್ಯಗಳನ್ನು ತಡೆಯಲು ಎಲ್ಲಾ ದೇವಾಲಯಗಳ ಸೂಕ್ತ ಜಾಗಗಳಲ್ಲಿ ನಾಲ್ಕೂ ದಿಕ್ಕಿನಿಂದ ಕಾಣುವಂತೆ ಸಿಸಿ ಟಿವಿ ವೆಬ್‌ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

  ಬೆಂಗಳೂರು :  ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿ ದೇವಾಲಯಗಳಲ್ಲಿ ಹುಂಡಿ ಕಳ್ಳತನದಂಥ ಕೃತ್ಯಗಳನ್ನು ತಡೆಯಲು ಎಲ್ಲಾ ದೇವಾಲಯಗಳ ಸೂಕ್ತ ಜಾಗಗಳಲ್ಲಿ ನಾಲ್ಕೂ ದಿಕ್ಕಿನಿಂದ ಕಾಣುವಂತೆ ಸಿಸಿ ಟಿವಿ ವೆಬ್‌ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ದೇವಾಲಯ ಹುಂಡಿ, ಚಿನ್ನ ಬೆಳ್ಳಿ ವಸ್ತುಗಳು ಇತ್ಯಾದಿಗಳ ಭದ್ರತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಹೈಟೆಕ್‌ ಭದ್ರತೆ ಒದಗಿಸಲು 19 ಸೂಚನೆ ಒಳಗೊಂಡ ಮಾರ್ಗಸೂಚಿಯನ್ನು (ಎಸ್‌ಒಪಿ) ಪ್ರಕಟಿಸಿದೆ.

ಅಯೋಧ್ಯೆ ರಾಮಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಜತೆಗೆ ರಾಜ್ಯದ ದೇವಾಲಯಗಳಲ್ಲೂ ಕಳ್ಳರ ಕರಾಮತ್ತು ಪ್ರದರ್ಶನವಾಗಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ.

ಪ್ರಮುಖ ಅಂಶಗಳೇನು?:

ದೇವಾಲಯಗಳಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು ಅಳವಡಿಸಿ ಸೂಕ್ತ ಭದ್ರತೆ ಒದಗಿಸಬೇಕು. ಹುಂಡಿಗಳು ನಾಲ್ಕೂ ದಿಕ್ಕಿನಿಂದ ಕಾಣುವಂತೆ ಅಗತ್ಯವಾದ ಸಿಸಿ ಟಿವಿ ವೆಬ್ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿ, ಸರ್ವರ್‌ನಲ್ಲಿ ಸಂರಕ್ಷಿಸಬೇಕು. ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿನ ಮುಜರಾಯಿ ವಿಭಾಗದಲ್ಲಿ ಸದರಿ ಕ್ಯಾಮೆರಾಗಳನ್ನು ಮಾನಿಟರ್ ಮಾಡಬೇಕು.

ದೇವಾಲಯಗಳಲ್ಲಿ ಹಾಲಿ ಅಳವಡಿಸಿರುವ ಸಿಸಿ ಟಿವಿ, ಡಿವಿಆರ್‌ಗಳನ್ನು ಕಳ್ಳತನ, ನಿಷ್ಕ್ರಿಯ, ಧ್ವಂಸ ಮಾಡಲಾಗುತ್ತಿದೆ. ಜತೆಗೆ ಕರ್ಪೂರ ಹಚ್ಚಿ ಅದರಿಂದ ಬರುವ ಕಾರ್ಬನ್‌ನಿಂದ ಕ್ಯಾಮೆರಾ ಲೆನ್ಸ್ ಗ್ಲಾಸ್ ಕಾಣದಂತೆ ಮಾಡಿ ಕಳ್ಳತನ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟುವ ಹಿತದೃಷ್ಟಿಯಿಂದ ವೆಬ್‌ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಕೇಂದ್ರ ಕಚೇರಿಯಲ್ಲಿ ಮೇಲ್ವಿಚಾರಣೆ:

ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ ಅಳವಡಿಸಿ ವೆಬ್ ಕ್ಯಾಮೆರಾಗಳ ಮೂಲಕ ಎಲ್ಲಾ ದೇವಾಲಯಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳ ಮೇಲ್ವಿಚಾರಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಿಸಿ ಟಿವಿ ಕ್ಯಾಮರಾಗಳ ಸಂಪರ್ಕವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿ, ಪೋಲೀಸ್ ಅಧೀಕ್ಷಕರು ಮತ್ತು ಪೋಲೀಸ್ ಠಾಣೆಗಳ ಕಚೇರಿಗೆ ಸಂಪರ್ಕ ಕಲ್ಪಿಸಿ ಸಂಚಾರ ನಿಯಂತ್ರಣ ಕೊಠಡಿಯಲ್ಲಿರುವಂತೆ ಡ್ಯಾಶ್‌ಬೋರ್ಡ್‌ಗಳ ವ್ಯವಸ್ಥೆ ಕಲ್ಪಿಸಬೇಕು.

ಕ್ಯೂಆರ್ ಕೋಡ್‌ಗೆ ಉತ್ತೇಜನ:

ಜೇಬು ಕಳ್ಳತನ, ನಗದು ಕಳ್ಳತನ ಕಡಿಮೆ ಮಾಡಲು ದೇವಾಲಯಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡಲು ಕ್ಯೂಆರ್‌ ಅಳವಡಿಸಬೇಕು.

ಡಿಜಿಟಲ್ ದೇಣಿಗೆ ಮತ್ತು ನಗದು ರಹಿತ ಪಾವತಿಗಳನ್ನು ಸುಗಮಗೊಳಿಸಲು ಯುಪಿಐ, ಕ್ಯೂಆರ್‌ ಕೋಡ್‌ ಮತ್ತು ಇತರ ಡಿಜಿಟಲ್ ಪಾವತಿ ಸೌಲಭ್ಯ ಒದಗಿಸಬೇಕು. ಹುಂಡಿ ಇರುವ ಕಡೆ ಮಾತ್ರ ಕ್ಯೂಆರ್‌ ಕೋಡ್‌ ಅಳವಡಿಸಬೇಕು. ಕ್ಯೂಆರ್‌ ಕೋಡ್‌ ದುರ್ಬಳಕೆ ಬಗ್ಗೆ ನಿಗಾವಹಿಸಬೇಕು. ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಲೆಕ್ಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸಬೇಕು.

ಹುಂಡಿ ಎಣಿಕೆ ದಿನ ಪ್ರಕಟಿಸಬೇಕು:

ಹುಂಡಿ ಎಣಿಕೆಯಲ್ಲಿ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ ಹುಂಡಿ ಕೌಂಟಿಂಗ್ ದಿನ ನಿಗದಿಪಡಿಸಬೇಕು. ಹೆಚ್ಚು ದೇಣಿಗೆ, ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೆ ಒಂದು ದಿನ ಹಾಗೂ ಸಾಧಾರಣ ದೇಣಿಗೆ, ಕಾಣಿಕೆ ಬರುವ ದೇವಾಲಯಗಳಲ್ಲಿ ಎರಡು ವಾರಕ್ಕೆ ಒಂದು ದಿನ ಕಡ್ಡಾಯವಾಗಿ ಹುಂಡಿ ಎಣಿಕೆ ದಿನಾಂಕ ಮಾಡಬೇಕು. ದಿನಾಂಕವನ್ನು ಮೊದಲೇ ಕ್ಯಾಲೆಂಡರ್‌ನಲ್ಲಿ ನಿಗದಿಪಡಿಸಬೇಕು.

ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗಬಹುದಾದ ಚಿನ್ನ, ಬೆಳ್ಳಿ ಇತ್ಯಾದಿ ವಸ್ತುಗಳನ್ನು ಎಣಿಕೆ ದಿನದಂದೇ ಕಡ್ಡಾಯವಾಗಿ ಮೌಲ್ಯಮಾಪನ ಮಾಡಿಸಿ ಅಂದೇ ಸಂಬಂಧಪಟ್ಟ ಜಿಲ್ಲಾ ಅಥವಾ ಉಪ ಖಜಾನೆಯಲ್ಲಿ ಜಮೆ ಮಾಡಬೇಕು.

ಹುಂಡಿ ಎಣಿಕೆ ಸಮಯದಲ್ಲಿ ಹಾಜರಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಖಚಿತಪಡಿಸಿಕೊಳ್ಳಲು ಫೇಸ್ ರೆಕಗ್ನೈಸೇಷನ್‌ ಅಳವಡಿಸಬೇಕು. ಸಿಬ್ಬಂದಿ, ಅಧಿಕಾರಿಗಳು ಎಣಿಕೆಗೆ ಪ್ರವೇಶಿಸುವ ಸಂದರ್ಭದಲ್ಲಿ ಕ್ಯಾಶ್ ಇನ್ ಹ್ಯಾಂಡ್ ಘೋಷಿಸಬೇಕು.

ಸಂಪೂರ್ಣ ವಿಡಿಯೋ ಚಿತ್ರೀಕರಣ ಆಗಬೇಕು:

ಹುಂಡಿ ತೆರೆಯುವುದರಿಂದ ಹಿಡಿದು ಹುಂಡಿ ಎಣಿಕೆ ಮಾಡಿ ಬ್ಯಾಂಕಿನವರಿಗೆ ಹಸ್ತಾಂತರಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸಬೇಕು.

ಹುಂಡಿ ಎಣಿಕೆಗೆ ಸಾರ್ಜನಿಕರ ಬಳಕೆ ಬೇಡ:

ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆ ಪಡೆಯುವ ಬದಲು ಕಡ್ಡಾಯವಾಗಿ ಗೃಹ ರಕ್ಷಕದಳದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಸರ್ಕಾರಿ ನೌಕರರ ಸೇವೆ ಪಡೆಯುವುದು. ಖಾಸಗಿ ವ್ಯಕ್ತಿಗಳು ಅಥವಾ ಸಾರ್ವಜನಿಕರನ್ನು ಹುಂಡಿ ಎಣಿಕೆ ಕೆಲಸಕ್ಕೆ ಬಳಸಬಾರದು.

ಹುಂಡಿಗಳ ಎಣಿಕೆ ಸಮಯದಲ್ಲಿ ಮತ್ತು ಹುಂಡಿಗಳಲ್ಲಿ ಕಳ್ಳತನದ ಪ್ರಕರಣ ಕಂಡು ಬಂದಲ್ಲಿ ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಪರಿಶೀಲನಾ ಕ್ರಮ

ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್‌ನ ಏಕೀಕರಣ ಮಾಡಬೇಕು. ಸ್ಥಳೀಯ ಪೊಲೀಸರಿಂದ ನಿಯಮಿತ ಮೇಲ್ವಿಚಾರಣೆ ಆಗಬೇಕು. ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಅನುಷ್ಠಾನದ ಕುರಿತು ಪ್ರತಿ ತಿಂಗಳು ಅನುಸರಣಾ ವರದಿ ನೀಡಬೇಕು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

10,000 ಭಾರತ್‌ ಜೋಡೋ ಸಂಘ ಸ್ಥಾಪನೆಗೆ ಆದೇಶ
ಕನ್ನಡಿಗರನ್ನು ಉಳಿಸಿ ಬೆಳೆಸಿದರೆ ಕನ್ನಡ ಉಳಿಯುತ್ತದೆ : ಬರಗೂರು ರಾಮಚಂದ್ರಪ್ಪ