ಕನ್ನಡಿಗರನ್ನು ಉಳಿಸಿ ಬೆಳೆಸಿದರೆ ಕನ್ನಡ ಉಳಿಯುತ್ತದೆ : ಬರಗೂರು ರಾಮಚಂದ್ರಪ್ಪ

KannadaprabhaNewsNetwork |  
Published : Jul 14, 2026, 04:00 AM IST
Sa Ra Govindu

ಸಾರಾಂಶ

ಕನ್ನಡ ಉಳಿದು, ಬೆಳೆಯಬೇಕಾದರೆ ಕನ್ನಡಿಗರನ್ನು ಮೊದಲು ಉಳಿಸಿ, ಬೆಳೆಸಬೇಕು. ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ ನೀಡಿದರೆ ಕನ್ನಡ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

  ಬೆಂಗಳೂರು :  ಕನ್ನಡ ಉಳಿದು, ಬೆಳೆಯಬೇಕಾದರೆ ಕನ್ನಡಿಗರನ್ನು ಮೊದಲು ಉಳಿಸಿ, ಬೆಳೆಸಬೇಕು. ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ ನೀಡಿದರೆ ಕನ್ನಡ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಗಾಂಧಿಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾ.ರಾ.ಗೋವಿಂದು ಕನ್ನಡ ಪ್ರತಿಷ್ಠಾನದ ಉದ್ಘಾಟನೆ ಮತ್ತು ಸಾ.ರಾ.ಗೋವಿಂದು ಕನ್ನಡಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಿಗರನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಅವರಿಗೆ ಉತ್ತಮ ಉದ್ಯೋಗ, ಶಿಕ್ಷಣ ನೀಡಿದರೆ ಕನ್ನಡ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ. ಸಾ.ರಾ.ಗೋವಿಂದು ಅವರು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಮೂಲಕ ಕನ್ನಡಿಗರಿಗೆ ಉದ್ಯೋಗ ದೊರಕಿಸುವಂತಹ ಹಲವು ಹೋರಾಟವನ್ನು ಮಾಡಿದ್ದಾರೆ. ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವುದಕ್ಕಾಗಿ ಬಹುದೊಡ್ಡ ಹೋರಾಟ ಮಾಡಿದರು. ಸಾ.ರಾ. ಗೋವಿಂದು ಅವರ ಕನ್ನಡಪರ ಪ್ರೀತಿ ಬಹಳಷ್ಟು ಸಂದರ್ಭದಲ್ಲಿ ಅನಾವರಣಗೊಂಡಿದೆ ಎಂದರು.

 ಕನ್ನಡ ಚಿತ್ರರಂಗ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಾಮರ್ಶಿಸಿಕೊಳ್ಳಬೇಕು

ಸದ್ಯ ಕನ್ನಡ ಚಿತ್ರರಂಗ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಾಮರ್ಶಿಸಿಕೊಳ್ಳಬೇಕು. ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪ್ರೇಕ್ಷಕ ಏನು ಬಯಸುತ್ತಾನೆ ಅದನ್ನು ನೀಡಬೇಕು. ಡಾ. ರಾಜ್‌ಕುಮಾರ್‌ ಯುಗವು ದೊಡ್ಡ ಪರಂಪರೆಯನ್ನು ಹೊಂದಿತ್ತು, ಸದಭಿರುಚಿಗೆ ಹೆಸರಾಗಿತ್ತು. ಆದರೀಗ ಅದು ಹಾಳಾಗಿದೆ. ಚಲನಚಿತ್ರದಲ್ಲಿ ನೈತಿಕತೆಯಿಲ್ಲ ಎಂದಾದರೆ ಸಮಾಜದಲ್ಲೂ ನೈತಿಕತೆಯಿಲ್ಲ ಎಂಬ ಅರ್ಥವಾಗುತ್ತದೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಡಾ. ಹಂಸಲೇಖ ಮಾತನಾಡಿ, ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಕನ್ನಡಕ್ಕೂ ದುಸ್ಥಿತಿ ಬಂದಿದೆ. ರಾಜಕಾರಣಿಗಳು ಕನ್ನಡದ ಬಗ್ಗೆ ಮಾತನಾಡಿದರೆ ಸುಮ್ಮನಿರಯ್ಯ ಎಂದು ಗದರುತ್ತಾರೆ. ಕನ್ನಡವನ್ನು ನಮ್ಮ ಹಕ್ಕಿನ ಭಾಷೆಯನ್ನಾಗಿ ಮಾಡಲು ಮಾರ್ಗದರ್ಶನದ ಅಗತ್ಯವಿದೆ. ಕನ್ನಡಕ್ಕೆ ಹಿಂದಿ ಭಾಷೆ ಗ್ರಹಣ ಹಿಡಿಸುತ್ತಿದ್ದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಕಾಲದಿಂದ ಈಗಿನವರೆಗೆ ಎಲ್ಲರೂ ಹಿಂದಿ ಹೇರಿಕೆಯನ್ನು ಮಾಡುತ್ತಿದ್ದಾರೆ. ಕನ್ನಡ ಮಾತೃ ಭಾಷೆ, ಶಿಕ್ಷಣ ಭಾಷೆ, ಆಡಳಿತ ಭಾಷೆಯಾಗಿ ಗಟ್ಟಿಯಾಗಬೇಕಿದೆ. ಅಹಿಂದ ವರ್ಗಕ್ಕೆ ಕನ್ನಡದ ಹಕ್ಕಿನ ಬಗ್ಗೆ, ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ ಮುಂದಿನ ಭಾರಿ ಅಹಿಂದ ವರ್ಗದ ಸಾಧಕರಿಗೆ ಕನ್ನಡಶ್ರೀ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ದ್ವಿಭಾಷಾ ನೀತಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು

ಕನ್ನಡಪರ ಹೋರಾಟಗಾರ, ಚಲನಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡಿ, ರಾಜ್ಯದಲ್ಲಿ ಹಿಂದಿ ಹೇರಿಕೆ ತಡೆಯಲು ದ್ವಿಭಾಷಾ ನೀತಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ತಮಿಳುನಾಡು ಸೇರಿದಂತೆ ಇತರ ರಾಜ್ಯಗಳು ಹಿಂದಿ ಹೇರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಆ ಮನಸ್ಥಿತಿ ಇಲ್ಲಿಯೂ ನಿರ್ಮಾಣವಾಗಬೇಕು. ರಾಜ್ಯದ ಯಾವುದೇ ರಾಜಕೀಯ ಪಕ್ಷಗಳಿಂದಲೂ ಕನ್ನಡ ಮತ್ತು ಕನ್ನಡಿಗರ ಉದ್ಧಾರವಾಗುವುದಿಲ್ಲ. ಕನ್ನಡಿಗರಿಗೆ ನಮ್ಮಲ್ಲಿಯೇ ಉದ್ಯೋಗ ಸಿಗುವುದಿಲ್ಲ. ಮತಕ್ಕಾಗಿ ಪರಭಾಷಿಕರನ್ನು ಓಲೈಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದೆ ಎಂ.ಎನ್‌.ಲಕ್ಷ್ಮೀದೇವಿ ಅವರಿಗೆ ಸಾ.ರಾ. ಗೋವಿಂದು ಕನ್ನಡಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ತಜ್ಞ ಡಾ. ವೂಡೇ ಪಿ.ಕೃಷ್ಣ, ಸಾ.ರಾ.ಗೋವಿಂದು ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಸಿ.ಕೆ. ರಾಮೇಗೌಡ ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಪ್ತ ಮಂತ್ರಿಗಿರಿ ಪ್ರಶ್ನೆಗೆ ಸೈಲೆಂಟ್‌ ಆದ ಸಿಎಂ!
‘ಇನ್ಮುಂದೆ ರಾಜ್ಯದ ಗಣ್ಯರಿಗೆ ತಿರುಪತಿಯ ಮೊದಲ ಆರತಿ’