ಕುಣಿಗಲ್ : ವಿಧಾನಸಭೆ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿ ಎಲ್ಲರ ಗಮನ ಸೆಳೆದಿದ್ದ ಬೆನ್ನಲ್ಲೇ ಅವರ ಷಡ್ಡಕರೂ ಆಗಿರುವ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಕೂಡ ಅದೇ ಗೀತೆಯನ್ನು ಹಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದಲ್ಲಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕೂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಒಡನಾಟ ಇತ್ತು. ಅದರ ವಿಚಾರ ನನಗೆ ಸದಾ ಮನವರಿಕೆ ಆಗಿದೆ. ಅವರು ಯಾವ ರೀತಿ ಶಾಖೆಗಳನ್ನು ಮಾಡುತ್ತಾರೆ. ಜನಗಳ ಜೊತೆ ಅವರ ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಅರಿತಿದ್ದೇನೆ ಎಂದರು.
ಈ ವೇಳೆ ಆರ್‌ಎಸ್‌ಎಸ್ ಗೀತೆಯನ್ನು ಹಾಡಿರುವ ಡಿ.ಕೆ.ಶಿವಕುಮಾರ್ ಬಗ್ಗೆ ಸಂತಸ ವ್ಯಕ್ತಪಡಿಸಿದ ರಂಗನಾಥ್, ಕಾಂಗ್ರೆಸ್ ಶಾಸಕನಾದ ನನಗೂ ಹಾಡು ಬರುತ್ತದೆಂದು ‘ನಮಸ್ತೇ ಸದಾ ವತ್ಸಲೇ ಮಾತೃಭೂಮಿ. ತ್ವಯ ಹಿಂದೂ ಭೂಮಿ....’ ಎಂದು ಒಂದೇರೆಡು ಸಾಲು ಹಾಡಿದರು.
ಡಿಕೆ ಹಾಡಿರುವುದು ತಪ್ಪಲ್ಲ: ‘ನಮ್ಮ ಡಿಕೆ ಸಾಹೇಬರು ಆರ್‌ಎಸ್‌ಎಸ್ ಗೀತೆ ಹಾಡಿರುವುದರಲ್ಲಿ ಏನು ತಪ್ಪು ಕಾಣಿಸುತ್ತಿಲ್ಲ. ನಮ್ಮದು ಜಾತ್ಯತೀತ ಪಕ್ಷ ಎಲ್ಲಾ ಧರ್ಮದವರು ಮನುಷ್ಯರಂತೆ ಇಲ್ಲಿ ಒಟ್ಟಾಗಿ ಬದುಕುವುದು ನಮ್ಮ ಸಂಕಲ್ಪ’ ಎಂದರು.
ಬಿಜೆಪಿಯರೂ ಹೆಚ್ಚಾಗಿ ಬಲಪಂಥೀಯ ವಾದ ಮಂಡಿಸುತ್ತಾ ಧರ್ಮದಲ್ಲಿ ಹುಳುಕು ಮೂಡಿಸುವಂತಹ ಕೆಲಸ ಮಾಡುತ್ತಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವುದು. ಇದು ಸರಿಯಲ್ಲ. ಅದಕ್ಕಾಗಿ ಕಾಂಗ್ರೆಸ್ ಎಲ್ಲರನ್ನೂ ಕೂಡ ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ ಎಂದು ಡಾ.ರಂಗನಾಥ್ ಹೇಳಿದರು.