ಐಪಿಎಲ್‌ ಟೀಂ, 25 ಲಕ್ಷ ವಿಮೆ, ಒಬಿಸಿ ಕೋಟ: ಮಧ್ಯಪ್ರದೇಶ ಕೈ ಪ್ರಣಾಳಿಕೆ!

KannadaprabhaNewsNetwork | Published : Oct 18, 2023 1:01 AM

ಸಾರಾಂಶ

59 ಭರವಸೆಗಳ 106 ಪುಟಗಳ ಬೃಹತ್‌ ಪ್ರಣಾಳಿಕೆ. ಜಾತಿ ಗಣತಿ, ಶಾಲಾ ಮಕ್ಕಳಿಗೆ ಸಹಾಯಧನ ಘೋಷಣೆ.
ಭೋಪಾಲ್‌: ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಧ್ಯಪ್ರದೇಶದಲ್ಲೂ ಗೆಲುವು ಕಾಣಲು ಹವಣಿಸುತ್ತಿರುವ ಕಾಂಗ್ರೆಸ್‌, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಐಪಿಎಲ್‌ ಟೀಂ, 25 ಲಕ್ಷ ರು. ವಿಮೆ, ಜಾತಿಗಣತಿ ಸೇರಿದಂತೆ 59 ಭರವಸೆಗಳನ್ನು ಘೋಷಣೆ ಮಾಡಿದೆ. ಮಂಗಳವಾರ ಸುಮಾರು 106 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌, 59 ಭರವಸೆಗಳು ಮತ್ತು 101 ಪ್ರಮುಖ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ರಾಜ್ಯಕ್ಕಾಗಿ ಒಂದು ಐಪಿಎಲ್‌ ತಂಡ, 500 ರು.ಗೆ ಎಲ್‌ಪಿಜಿ ಸಿಲಿಂಡರ್‌, ಮಹಿಳೆಯರಿಗೆ ಪ್ರತಿ ತಿಂಗಳು 1500 ರು. ಸಹಾಯಧನ, 2 ಲಕ್ಷ ರು.ವರೆಗೆ ಕೃಷಿ ಸಾಲ ಮನ್ನ, 100 ಯುನಿಟ್‌ ಉಚಿತ ವಿದ್ಯುತ್‌, 5 ಎಚ್‌ಪಿ ಮೋಟರ್‌ಗೆ ಉಚಿತ ವಿದ್ಯುತ್‌, 25 ಲಕ್ಷ ರು. ವೈದ್ಯಕೀಯ ವಿಮೆ, 10 ಲಕ್ಷ ರು., ಅಪಘಾತ ವಿಮೆ, ಒಬಿಸಿ ವರ್ಗಕ್ಕೆ ಶೇ.27ರಷ್ಟು ಮೀಸಲಾತಿ, ಗೋಧಿಗೆ ಕ್ವಿಂಟಲ್‌ಗೆ 2600 ರು., ಭತ್ತಕ್ಕೆ 2500 ರು. ಕನಿಷ್ಠ ದರ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ‘ಕಾಂಗ್ರೆಸ್‌ ಬರಲಿದೆ, ಸಂತೋಷ ತರಲಿದೆ’ ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿರುವ ಪಕ್ಷ, ಉಚಿತ ಶಾಲಾ ಶಿಕ್ಷಣ, 1ರಿಂದ 8ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ತಿಂಗಳಿಗೆ 500 ರು., 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 1 ಸಾವಿರ ರು. ಮತ್ತು 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ 1500 ರು. ನೀಡಲಾಗುತ್ತದೆ ಎಂದು ಪಕ್ಷ ಘೋಷಿಸಿದೆ.

Share this article