ಗುತ್ತಿಗೆದಾರ ಸಚಿನ್‌ ಪಂಚಾಳ ಆತ್ಮಹತ್ಯೆ ಪ್ರಕರಣ : ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ರಾಜೀನಾಮೆ ಅಸ್ತ್ರ

KannadaprabhaNewsNetwork |  
Published : Jan 03, 2025, 12:33 AM ISTUpdated : Jan 03, 2025, 04:19 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

 ಸಚಿನ್‌  ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪಾತ್ರವೇ ಇಲ್ಲ. ಹೀಗಾಗಿ ಪ್ರಿಯಾಂಕ್‌ ಖರ್ಗೆ ಪರ ಎಲ್ಲಾ ಸಚಿವರು ಗಟ್ಟಿಯಾಗಿ ನಿಲ್ಲಬೇಕು. ಬಿಜೆಪಿ ನಾಯಕರ ಮೇಲಿರುವ ಪ್ರಕರಣಗಳನ್ನು ಮುಂದಿಟ್ಟುಕೊಂಡು  ರಾಜೀನಾಮೆ ನೀಡುವಂತೆ ಆಗ್ರಹಿಸಬೇಕು ಎಂದು  ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

  ಬೆಂಗಳೂರು : ಗುತ್ತಿಗೆದಾರ ಸಚಿನ್‌ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪಾತ್ರವೇ ಇಲ್ಲ. ಹೀಗಾಗಿ ಪ್ರಿಯಾಂಕ್‌ ಖರ್ಗೆ ಪರ ಎಲ್ಲಾ ಸಚಿವರು ಗಟ್ಟಿಯಾಗಿ ನಿಲ್ಲಬೇಕು. ಬಿಜೆಪಿ ನಾಯಕರ ಮೇಲಿರುವ ಪ್ರಕರಣಗಳನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಬೇಕು, ರಾಜೀನಾಮೆ ನೀಡುವಂತೆ ಆಗ್ರಹಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಂಪುಟ ಸದಸ್ಯರ ಜತೆಗಿನ ಅನೌಪಚಾರಿಕ ಚರ್ಚೆ ವೇಳೆ ಬಿಜೆಪಿ ನಾಯಕರ ಮೇಲಿನ ಪ್ರಕರಣಗಳು ಹಾಗೂ ಹಗರಣಗಳ ಆರೋಪಗಳ ಪಟ್ಟಿಯನ್ನೂ ಸದಸ್ಯರಿಗೆ ನೀಡಿರುವುದಾಗಿ ತಿಳಿದುಬಂದಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇಡೀ ಪ್ರಕರಣದ ಬಗ್ಗೆ ಸಂಪುಟ ಸದಸ್ಯರಿಗೆ ವಿವರಣೆ ನೀಡಿದರು ಎನ್ನಲಾಗಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಿಯಾಂಕ್‌ ಖರ್ಗೆ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಪ್ರಕರಣದಲ್ಲಿ ಪ್ರಿಯಾಂಕ್‌ ಖರ್ಗೆ ಪಾತ್ರವಿಲ್ಲ. ಡೆತ್‌ನೋಟ್‌ನಲ್ಲಿ ಅವರ ಹೆಸರಿಲ್ಲದಿದ್ದರೂ ಬಿಜೆಪಿಯವರು ರಾಜಕೀಯ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲಾ ಸಚಿವರು ತಿರುಗೇಟು ನೀಡಬೇಕು ಎಂದು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗರ ಪ್ರಕರಣಗಳ ಪಟ್ಟಿ ಪ್ರಸ್ತಾಪ:

ಲಂಚದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸ್ವಂತ ಸಹೋದರನ ಬಂಧನವಾದರೂ ಅವರು ಯಾಕೆ ರಾಜೀನಾಮೆ ನೀಡಲಿಲ್ಲ. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರ ಮೇಲೆ ಇ.ಡಿ. ಪ್ರಕರಣ ಇರುವುದನ್ನು ಪ್ರಮಾಣಪತ್ರದಲ್ಲಿ ಅವರೇ ಹೇಳಿದ್ದಾರೆ. ಇನ್ನು ಸಚಿವ ವಿ.ಸೋಮಣ್ಣ ಅವರ ಮೇಲೂ ಹೌಸಿಂಗ್ ಸೊಸೈಟಿ ಅಕ್ರಮ ಆರೋಪ ಇದೆ. ಇವರೆಲ್ಲರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಯಾವಾಗ ಎಂದು ಪ್ರಶ್ನಿಸಬೇಕು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.

ಇನ್ನು ವಿಜಯೇಂದ್ರ ಇ.ಡಿ. ಪ್ರಕರಣ ಎದುರಿಸುತ್ತಿದ್ದಾರೆ. ಅವರೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿ.ಎಸ್‌.ಯಡಿಯೂರಪ್ಪ ಮೇಲೆ ಪೋಕ್ಸೋ ಪ್ರಕರಣ ಇದೆ. ಇವರೆಲ್ಲರೂ ತಮ್ಮ ರಾಜಕೀಯ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು