ಬಾಗಲಕೋಟೆ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ವಸೂಲಿ ಗ್ಯಾಂಗ್ ಅನ್ನು ನಡೆಸುತ್ತಿದೆಯೇ ಹೊರತು ಸರ್ಕಾರ ನಡೆಸುತ್ತಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಎಟಿಎಂ ಆಗಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಕಡಿಮೆ ಅವಧಿಯಲ್ಲೇ ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ನವನಗರದಲ್ಲಿ ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕೀಯಕ್ಕಾಗಿ ಇದ್ದರೆ, ನಾನು ಜನರ ಅಗತ್ಯಗಳಿಗಾಗಿ ಇದ್ದೇನೆ. ಒಂದು ಕಾಲಕ್ಕೆ ಕರ್ನಾಟಕ ಐಟಿ ಹಬ್ ಆಗಿತ್ತು. ಆದರೆ ಈಗ ಟ್ಯಾಂಕರ್ ಹಬ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ಕಾಂಗ್ರೆಸ್ ನಾಯಕರು ವಸೂಲಿ ಗ್ಯಾಂಗ್ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಶಾಸಕರಿಗೆ ಸರಿಯಾದ ಸಮಯಕ್ಕೆ ಅನುದಾನ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ವೇತನ ನೀಡಲೂ ರಾಜ್ಯ ಸರ್ಕಾರ ಪರದಾಡಬೇಕಾದ ದಿನ ದೂರವಿಲ್ಲ. ಅಧಿಕಾರಕ್ಕೆ ಬಂದ ಅತ್ಯಂತ ಕಡಿಮೆ ಅವಧಿಯಲ್ಲಿ ಖಜಾನೆ ಖಾಲಿ ಮಾಡಿರುವ ಕಾಂಗ್ರೆಸ್ ಪಕ್ಷ ಲೂಟಿಯಲ್ಲಿ ತೊಡಗಿದೆ. ಲೂಟಿಯೇ ಕಾಂಗ್ರೆಸ್ ಪಕ್ಷದ ಹೆಗ್ಗುರುತು ಎಂದು ವಾಗ್ದಾಳಿ ನಡೆಸಿದರು.
ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಜಲಜೀವನ್ ಯೋಜನೆ ಮೂಲಕ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಕೊಟ್ಟಿದ್ದೇವೆ. ಉಜ್ವಲಾ ಯೋಜನೆಯಡಿ ಸಿಲಿಂಡರ್, ಕಿಸಾನ್ ಸಮ್ಮಾನ್ ನಿಧಿ ಮೂಲಕ ರೈತರ ಖಾತೆಗೆ ನೇರ ಹಣ ಜಮೆ ಸೇರಿ ನಮ್ಮ ಎಲ್ಲಾ ಯೋಜನೆಗಳು ಜನರಿಗೆ ತಲುಪಿವೆ ಎಂದು ಸಮರ್ಥಿಸಿಕೊಂಡರು.
ದಾಳಿಯ ವಿಚಾರವನ್ನೂ ಮುಚ್ಚಿಡಲಿಲ್ಲ: ಇದೇ ವೇಳೆ ಇದೀಗ ನಮ್ಮದು ನಯಾ ಭಾರತ್ ಎಂದು ಹೇಳಿಕೊಂಡಿರುವ ಮೋದಿ, ಅಮಾಯಕರ ಹತ್ಯೆ ಮಾಡುವವರ ಮನೆಗೆ ನುಗ್ಗಿ ಹೊಡೆಯಲೂ ಹಿಂದೆ ಮುಂದೆ ನೋಡಲ್ಲ. ಹಾಗಂತ ಯಾರ ಮೇಲೂ ಹಿಂದಿನಿಂದ ದಾಳಿ ನಡೆಸುವ ಜಾಯಮಾನ ಈ ಮೋದಿಯದ್ದಲ್ಲ, ನನ್ನದೇನಿದ್ದರೂ ಎಲ್ಲವೂ ನೇರಾ ನೇರ. ಬಾಲಾಕೋಟ್ ದಾಳಿಯ ಕುರಿತು ನಾವು ಮೊದಲು ಮಾಹಿತಿ ನೀಡಿದ್ದೇ ಪಾಕಿಸ್ತಾನಕ್ಕೆ. ನಾವು ಅವರಿಗೆ ಕರೆ ಮಾಡಿ ದಾಳಿಯ ಕುರಿತು ಮಾಹಿತಿ ನೀಡಿದ ಬಳಿಕವಷ್ಟೇ ಹೊರಜಗತ್ತಿಗೆ ಆ ಕಾರ್ಯಾಚರಣೆ ಕುರಿತ ಮಾಹಿತಿ ಬಹಿರಂಗ ಮಾಡಿದ್ದೇವೆ ಎಂದು ಹೇಳಿದರು.
ಏಳನೇ ದಿನವೂ ಮುಸ್ಲಿಂ ಕಾರ್ಡ್ : ಬಾಗಲಕೋಟೆ: ಅಲ್ಪಸಂಖ್ಯಾತರ ಮೀಸಲಾತಿ ಮತ್ತು ಮತಬ್ಯಾಂಕ್ ರಾಜಕಾರಣ ವಿಚಾರ ಮುಂದಿಟ್ಟುಕೊಂಡು ಸತತ ಏಳನೇ ದಿನವೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ತುಷ್ಟೀಕರಣದ ರಾಜಕಾರಣಕ್ಕಾಗಿ ದಲಿತರು ಮತ್ತು ಹಿಂದುಳಿದ ವರ್ಗದರ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಹೊರಟಿದ್ದಾರೆ. ಆದರೆ ಮೀಸಲಾತಿ ವಿಚಾರದಲ್ಲಿ ದಲಿತರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗದವರ ಹಕ್ಕು ಮತ್ತು ಮೀಸಲಾತಿ ರಕ್ಷಣೆ ವಿಚಾರದಲ್ಲಿ ನಾನು ಯಾವ ಹಂತಕ್ಕಾದರೂ ಹೋಗಲು ಸಿದ್ಧ ಎಂದು ಹೇಳಿದ್ದಾರೆ.