ಕೋಲಾರ ಕ್ಷೇತ್ರದ ಅಭ್ಯರ್ಥಿಗಳ ಸೋಲು ಗೆಲುವಿನ ಚರ್ಚೆ, ಬೆಟ್ಟಿಂಗ್‌

KannadaprabhaNewsNetwork |  
Published : Apr 30, 2024, 02:03 AM ISTUpdated : Apr 30, 2024, 04:32 AM IST
Congress BJP Flags

ಸಾರಾಂಶ

ಮತದಾನ ಮುಗಿದರೂ ಜನರು ಇನ್ನು ಚುನಾವಣೆಯ ಗುಂಗಿನಿಂದ ಹೊರ ಬಂದಿಲ್ಲ. ಅಂಗಡಿ-ಮುಂಗಟ್ಟು, ಹೋಟೆಲ್, ರಸ್ತೆ ಬದಿ, ಬಸ್ ನಿಲ್ದಾಣ, ಉದ್ಯಾನ ವನ, ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆ, ಎಲ್ಲಿ ನಾಲ್ಕು ಮಂದಿ ಸೇರುತ್ತಾರೋ ಅಲ್ಲೆಲ್ಲಾ ಚುನಾವಣೆಯದ್ದೇ ಮಾತುಗಳು

 ಕೋಲಾರ :  ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮುಗಿದ ನಂತರ ಈಗ ಸೋಲು ಗೆಲುವಿನ ಲೆಕ್ಕಾಚಾರ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಮಧ್ಯೆ ಬೆಟ್ಟಿಂಗ್‌ ದಂಧೆಯೂ ಶುರುವಾಗಿದೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ೮ ವಿಧಾನಸಭಾ ಕ್ಷೇತ್ರಗಳು ಸೇರಿದ್ದು, ಕಳೆದ ೫ ವರ್ಷಗಳ ಹಿಂದಿನ ಚುನಾವಣೆಗಿಂತ ಈ ಬಾರಿ ಚುನಾವಣೆಯಲ್ಲಿ ಮತದಾನ ಹೆಚ್ಚಳವಾಗಿದ್ದು, ಮತದಾರರ ನಾಡಿಮಿಡಿತ ಕಂಡುಹಿಡಿಯಲು ಕಷ್ಟವಾಗಿರುವ ಕಾರಣ ಬೆಟ್ಟಿಂಗ್‌ಗಾಗಿ ಜನ ಸಿದ್ಧರಿದ್ದರೂ ಸ್ಪಷ್ಟ ಚಿತ್ರಣ ಸಿಗದೇ ಇರುವುದರಿಂದ ಬೆಟ್ಟಿಂಗ್‌ಗೆ ಮುಂದೆ ಬರುವವರು ಕಡಿಮೆಯಾಗಿದೆ.

ಚುನಾವಣೆಯದ್ದೇ ಚರ್ಚೆ

ಮತದಾನ ಮುಗಿದರೂ ಜನರು ಇನ್ನು ಚುನಾವಣೆಯ ಗುಂಗಿನಿಂದ ಹೊರ ಬಂದಿಲ್ಲ. ಅಂಗಡಿ-ಮುಂಗಟ್ಟು, ಹೋಟೆಲ್, ರಸ್ತೆ ಬದಿ, ಬಸ್ ನಿಲ್ದಾಣ, ಉದ್ಯಾನ ವನ, ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆ, ಎಲ್ಲಿ ನಾಲ್ಕು ಮಂದಿ ಸೇರುತ್ತಾರೋ ಅಲ್ಲೆಲ್ಲಾ ಚುನಾವಣೆಯದ್ದೇ ಮಾತುಗಳು, ಮತದಾನ ಎಲ್ಲೆಲ್ಲಿ ಹೇಗೆ ನಡೆದಿದೆ. ಯಾರ ಕಡೆ ಜೋರಾಗಿತ್ತು, ಯಾರು ಎಷ್ಟೆಷ್ಟು ಹಣ ಹಂಚಿದರು. ಯಾರು ಗೆಲ್ಲಬಹುದು, ಎಲ್ಲಿ ಕಡಿಮೆ ಮತದಾನವಾಯಿತು ಇತ್ಯಾದಿಗಳ ಚರ್ಚೆಗಳು ನಡೆಯುತ್ತಿವೆ.

ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ೧೮ ಮಂದಿ ಅಭ್ಯರ್ಥಿಗಳು ಇದ್ದರೂ ಸಹ ಕಾಂಗ್ರೆಸ್ ಮತ್ತು ಎನ್.ಡಿ.ಎ. ಪಕ್ಷದ ನಡುವೆಯೇ ನೇರ ಸ್ಪರ್ಧೆ ಇದ್ದು ಹಾಗೂ ಪ್ರಚಾರಗಳು ನಡೆಯುತ್ತಿದ್ದು ಸಹ ಎರಡು ಪಕ್ಷಗಳ ನಡುವೆ. ಪ್ರತಿ ಚುನಾವಣೆಯಲ್ಲೂ ಪಕ್ಷೇತರರಾಗಿ ಹಲವಾರು ಮಂದಿ ನಾಮಪತ್ರ ಸಲ್ಲಿಸಿ ಸ್ಪರ್ಧಿಸುತ್ತಾರೆ. ಒಂದರೆಡು ಪತ್ರಿಕಾಗೋಷ್ಠಿ ಮೂಲಕ ಪ್ರಚಾರ ಪಡೆದು ತಟಸ್ಥರಾಗುತ್ತಾರೆ.

ಸೋಲು ಗೆಲುವಿನ ಬೆಟ್ಟಿಂಗ್‌

ಚುನಾವಣೆಯಲ್ಲಿ ನೇರ ಸ್ಪರ್ಧೆ ಇರುವಂತ ಇಬ್ಬರು ಅಭ್ಯರ್ಥಿಗಳ ನಡುವೆ ಫಲಿತಾಂಶ ಏನಾಗಲಿದೆ ಎಂಬ ಕುತೂಹಲದ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿದ್ದು ಗ್ರಾಮೀಣ ಪ್ರದೇಶಗಳು ಸೇರಿದಂತೆ ಹಲವಡೆ ಬೆಟ್ಟಿಂಗ್ ನಡೆಯುತ್ತಿದೆ. ಪ್ರಮುಖವಾಗಿ ಬಾರ್- ಕ್ಲಬ್- ಹೋಟೆಲ್‌ಗಳಲ್ಲಿ ಹೆಚ್ಚಾಗಿ ಚರ್ಚೆಗಳು ಕೇಳಿ ಬರುತ್ತಿದೆ. ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಮತ ಸಿಗಲಿದೆ, ಯಾವ ಅಭ್ಯರ್ಥಿ ಎಷ್ಟು ಬಹುಮತದಿಂದ ಗೆಲ್ಲಬಹುದೆಂಬ ಕುರಿತು ಬರಿ ಚರ್ಚೆಗಳು ಮಾತ್ರ ನಡೆಯುತ್ತಿಲ್ಲ, ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಪ್ರಾರಂಭವಾಗಿದೆ.

ಸಧ್ಯಕ್ಕೆ ಎನ್‌ಡಿಎ ಅಭ್ಯರ್ಥಿ ಪರವೇ ಬೆಟ್ಟಿಂಗ್ ಕಟ್ಟಲು ಬೆಟ್ಟಿಂಗ್‌ದಾರರು ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನವರು ಸಹ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ, ಆದರೆ ನಮಗೆ ಇನ್ನು ಎರಡ್ಮೂರು ದಿನ ಸ್ಪಷ್ಟವಾಗಿ ಮತದಾನದ ಚಿತ್ರಣ ಬರಬೇಕಾಗಿದೆ. ನಾವು ಬೆಟ್ಟಿಂಗ್ ಕಟ್ಟಲು ಸಿದ್ಧ ಎಂಬ ಮಾತುಗಳು ಕೇಳಿಬರುತ್ತಿದೆ. ಪ್ರಸ್ತುತ ಎಲ್ಲರ ಚಿತ್ತ ಚುನಾವಣೆ ಫಲಿತಾಂಶ ದಿನವಾದ ಜೂ.೪ ರತ್ತ ಕೇಂದ್ರಿಕೃತವಾಗಿದೆ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!