ಚಿಕ್ಕೋಡಿ. 1957ರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಒಂಬತ್ತು ಬಾರಿ ಗೆದ್ದಿದೆ. ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಅವರೇ ಸತತ 7 ಬಾರಿ ಇಲ್ಲಿ ಗೆಲುವು ಸಾಧಿಸಿದ್ದು ಇತಿಹಾಸ. ಇದೀಗ ಕ್ಷೇತ್ರ ಬಿಜೆಪಿ ತೆಕ್ಕೆಗೆ ಹೋಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಲ್ಲಿ ನೇರ ಹಣಾಹಣಿ ಇದೆ.
ಜಗದೀಶ ವಿರಕ್ತಮಠ
ಬೆಳಗಾವಿ : ಬಹುತೇಕ ಲಿಂಗಾಯತರೇ ನಿರ್ಣಾಯಕರಾಗಿರುವ ಕ್ಷೇತ್ರ ಚಿಕ್ಕೋಡಿ. 1957ರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಒಂಬತ್ತು ಬಾರಿ ಗೆದ್ದಿದೆ. ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಅವರೇ ಸತತ 7 ಬಾರಿ ಇಲ್ಲಿ ಗೆಲುವು ಸಾಧಿಸಿದ್ದು ಇತಿಹಾಸ. ಇದೀಗ ಕ್ಷೇತ್ರ ಬಿಜೆಪಿ ತೆಕ್ಕೆಗೆ ಹೋಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಲ್ಲಿ ನೇರ ಹಣಾಹಣಿ ಇದೆ.
ಈ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಎಂಟು ವಿಧಾನಸಭೆಗಳ ಪೈಕಿ ಐದರಲ್ಲಿ ಕಾಂಗ್ರೆಸ್, ಉಳಿದ ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ದೇಶಾದ್ಯಂತ ಬಿಜೆಪಿ ಪ್ರಬಲವಾಗಿದ್ದು, ಮೋದಿ ಅಲೆ ಎದುರಿಸುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಉದ್ದೇಶದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಪ್ರಿಯಾಂಕಾ ಪಾಲಿಗಿದು ಇದೇ ಮೊದಲ ಚುನಾವಣೆ. ತಂದೆ ಮತ್ತು ಕುಟುಂಬದ ರಾಜಕೀಯ ಪ್ರಭಾವ ಮತ್ತು ವರ್ಚಸ್ಸು ಅವರ ಬೆನ್ನಿಗಿದೆ.
ಅಂತರ ಕಾಯ್ದುಕೊಂಡರೆ ಬಿಜೆಪಿ ನಾಯಕರು?:
ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಅವರು ಚುನಾವಣಾ ಪ್ರಚಾರದಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಜತೆಗೆ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಪ್ರಭಾಕರ ಕೋರೆ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಹೆಚ್ಚು ಪ್ರಭಾವಿಯಾಗಿರುವ ಬಿಜೆಪಿಯ ಜಾರಕಿಹೊಳಿ ಸಹೋದರರೂ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಬಿಜೆಪಿಗೆ ತುಸು ಹೊಡೆತ ನೀಡಬಹುದು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ.
ಕಾಂಗ್ರೆಸ್‌ನಲ್ಲೂ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲೂ ಅವರು ರಾಯಬಾಗ (ಮೀಸಲು) ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಹಾವೀರ ಮೋಹಿತೆ ಅವರಿಗೆ ಪಕ್ಷ ಆಗ ಮಣೆ ಹಾಕಿತ್ತು. ಇದರಿಂದ ಬಂಡಾಯವೆದ್ದ ಶಂಭು ಕಲ್ಲೋಳಿಕರ ಸ್ವತಂತ್ರವಾಗಿ ಸ್ಪರ್ಧಿಸಿ 54000ಕ್ಕಿಂತ ಅಧಿಕ ಮತಗಳನ್ನು ಪಡೆದು ಕೇವಲ 2631 ಮತಗಳ ಅಂತರದಿಂದ ಬಿಜೆಪಿಯ ದುರ್ಯೋಧನ ಐಹೊಳೆ ವಿರುದ್ಧ ಪರಾಭವಗೊಂಡಿದ್ದರು. ದಲಿತ ಸಮುದಾಯಕ್ಕೆ ಸೇರಿರುವ ಕಲ್ಲೋಳಿಕರ ಅವರು ಈಗ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್‌ಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಆದರೆ, 2014ರಲ್ಲಿ ಪ್ರಬಲ ಮೋದಿ ಅಲೆ ನಡುವೆಯೂ ಇಲ್ಲಿ ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಸೋಲುಂಡರು. ಈಗ ಮತ್ತೆ ಕಾಂಗ್ರೆಸ್ ಮೋದಿ ಅಲೆ ನಡುವೆಯೂ ಯುವ ಮುಖ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಿದೆ.
ಅಣ್ಣಾಸಾಹೇಬ್ ಜೊಲ್ಲೆ, ಬಿಜೆಪಿ
ಚಿಕ್ಕೋಡಿ ಕ್ಷೇತ್ರದ ಹಾಲಿ ಸಂಸದ. ಸಂಘ ಪರಿವಾರದಲ್ಲಿ ಉತ್ತಮ ಬಾಂಧವ್ಯ ಹೊಂದಿದವರು. ಉದ್ಯಮಿಯೂ ಆಗಿರುವ ಜೊಲ್ಲೆ ಅವರು ಈಗ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಇವರ ಪತ್ನಿ. ಅಣ್ಣಾ ಸಾಹೇಬ್ ಅವರು ಕ್ಷೇತ್ರದಲ್ಲಿ ಅನೇಕ ಸಂಘ-ಸಂಸ್ಥೆಗಳ ಮೂಲಕ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ. 2019ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ವಿರುದ್ಧ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದರು. ಜಾರಕಿಹೊಳಿ ಸಹೋದರರು, ರಮೇಶ್ ಕತ್ತಿ, ಕೋರೆ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಇವರಿಗೆ ಸ್ವಲ್ಪ ಮೈನಸ್. ಜತೆಗೆ ಬಿಜೆಪಿಯಿಂದ ಕಾಂಗ್ರೆಸ್‌ನಲ್ಲಿರುವ ಲಕ್ಷ್ಮಣ ಸವದಿ, ರಾಜು ಕಾಗೆ ಪ್ರಭಾವ ಕೂಡ ಇವರಿಗೆ ಕೊಂಚ ಹೊಡೆತ ನೀಡಬಹುದು.
----------
ಪ್ರಿಯಾಂಕಾ ಜಾರಕಿಹೊಳಿ, ಕಾಂಗ್ರೆಸ್
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹಿರಿಯ ಪುತ್ರಿ. ಇಪ್ಪತ್ತಾರು ವರ್ಷದ ಎಂಬಿಎ ಪದವೀಧರರಾಗಿರುವ ಪ್ರಿಯಾಂಕಾ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವರ್ಚಸ್ಸಿನ ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸಿಗಿಂತ ಜಾರಕಿಹೊಳಿ ಕುಟುಂಬದ ಪ್ರಭಾವ ಮತ್ತು ವರ್ಚಸ್ಸು ಹೆಚ್ಚು ಕೆಲಸ ಮಾಡುವ ಸಾಧ್ಯತೆ ಇದೆ. ಪ್ರಿಯಾಂಕಾ ಅವರು ಹೊಸ ಮುಖ ಮತ್ತು ರಾಜಕೀಯ ಅನುಭವದ ಕೊರತೆ ಇದೆ. ಆದರೆ ಜಾರಕಿಹೊಳಿ ಕುಟುಂಬ ಬೆಳಗಾವಿ ಮೇಲೆ ತನ್ನದೇ ಆದ ಹಿಡಿತ ಹೊಂದಿರುವುದು ಇವರ ಪಾಲಿಗೆ ಪ್ಲಸ್.
-----------
ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು ಸುಮಾರು 4.10ಲಕ್ಷದಷ್ಟು ಲಿಂಗಾಯತ ಮತದಾರರಿದ್ದಾರೆ. ಕುರುಬ 1.70 ಲಕ್ಷ, ಎಸ್‌ಸಿ 1.45 ಲಕ್ಷ, ಎಸ್‌ಟಿ 90 ಸಾವಿರ, ಮುಸ್ಲಿಂ 1.80 ಲಕ್ಷ, ಮರಾಠ 1.70 ಲಕ್ಷ, ಜೈನ 1.30 ಲಕ್ಷ ಮತ್ತು ಇತರೆ ಸಮುದಾಯದ 2.25ಲಕ್ಷ ಮಂದಿ ಕ್ಷೇತ್ರದಲ್ಲಿದ್ದಾರೆ. ಲಿಂಗಾಯತರು ಯಾರ ಕೈಹಿಡಿಯುತ್ತಾರೆನ್ನುವುದರ ಮೇಲೆ ಸೋಲು-ಗೆಲುವು ನಿರ್ಧಾರವಾಗಲಿದೆ.
---------
ಕ್ಷೇತ್ರದಲ್ಲಿ ಮತದಾರರು
ಪುರುಷ ಮತದಾರರು - 8,75,953
ಮಹಿಳಾ ಮತದಾರರು- 8,65,731
ತೃತೀಯ ಲಿಂಗಿ ಮತದಾರರು- 74
ಒಟ್ಟು ಮತದಾರರು - 17,41,758
---
2019ರ ಬಾರಿ ಚುನಾವಣೆ ಫಲಿತಾಂಶ
ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ)- 645017 ಮತ, ಪ್ರಕಾಶ ಹುಕ್ಕೇರಿ (ಕಾಂಗ್ರೆಸ್) -526140 ಮತ