‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ

Published : Jan 13, 2026, 07:33 AM IST
vidhan soudha

ಸಾರಾಂಶ

ಕೇಂದ್ರ ಸರ್ಕಾರ ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿರುವ ಸಂಬಂಧ ಚರ್ಚಿಸಲು ಹಾಗೂ ಜಂಟಿ ಅಧಿವೇಶನ ನಡೆಸಲು ದಿನಾಂಕ ನಿಗದಿಗೊಳಿಸಲು ಜ.14ರ ಬುಧವಾರ ವಿಶೇಷ ಸಚಿವ ಸಂಪುಟ ಕರೆಯಲಾಗಿದೆ.

  ಬೆಂಗಳೂರು :  ಕೇಂದ್ರ ಸರ್ಕಾರ ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿರುವ ಸಂಬಂಧ ಚರ್ಚಿಸಲು ಹಾಗೂ ಜಂಟಿ ಅಧಿವೇಶನ ನಡೆಸಲು ದಿನಾಂಕ ನಿಗದಿಗೊಳಿಸಲು ಜ.14ರ ಬುಧವಾರ ವಿಶೇಷ ಸಚಿವ ಸಂಪುಟ ಕರೆಯಲಾಗಿದೆ.

ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಬೇಕಾಗುತ್ತದೆ. ಹೀಗಾಗಿ ಸರ್ಕಾರ ಜಂಟಿ ಅಧಿವೇಶನ ಕರೆಯುವ ಜೊತೆಗೆ ವಿಬಿ ಜಿ ರಾಮ್‌ ಜಿ ಕಾಯ್ದೆ ಕುರಿತು ಚರ್ಚಿಸಲು ದಿನಾಂಕ ನಿಗದಿಗೆ ಸಂಪುಟ ಸಭೆ ಕರೆಯಲಾಗಿದೆ.

ಈಗಾಗಲೇ ಮನರೇಗಾ ಯೋಜನೆ ರದ್ದತಿ ವಿರುದ್ಧವಾಗಿ ಕಾಂಗ್ರೆಸ್‌ ಗ್ರಾಮ ಮಟ್ಟದಿಂದ ಹೋರಾಟ ಮಾಡಲು ಮುಂದಾಗಿದೆ. ಅದರ ಜತೆಗೆ ರಾಜ್ಯ ಸರ್ಕಾರದಿಂದಲೂ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಜ. 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆ ವಿರುದ್ಧ ನಿರ್ಣಯ ಕೈಗೊಂಡು ಈ ಕುರಿತು ವಿಧಾನಮಂಡಲ ಅಧಿವೇಶನ ನಡೆಸಿ ಅಲ್ಲಿಯೂ ಅಧಿಕೃತ ನಿರ್ಣಯ ಕೈಗೊಳ್ಳಲು ಚರ್ಚಿಸಲಾಗಿತ್ತು.

ಜ. 20 ಮತ್ತು 21ರಂದು 2 ದಿನಗಳ ಕಾಲ ವಿಶೇಷ ಅಧಿವೇಶನ

ಬುಧವಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖವಾಗಿ ವಿಬಿ ಜಿ ರಾಮ್‌ ಜಿ ಕಾಯ್ದೆ ಕುರಿತಂತೆ ಚರ್ಚಿಸಿ, ಸರ್ಕಾರದಿಂದ ಅಧಿಕೃತ ನಿರ್ಣಯ ತೆಗೆದುಕೊಳ್ಳುವ ಸಂಬಂಧ ವಿಧಾನಮಂಡಲ ವಿಶೇಷ ಅಧಿವೇಶನ ಕರೆಯುವ ಕುರಿತು ಚರ್ಚಿಸಲಾಗುತ್ತದೆ. ಜ. 20 ಮತ್ತು 21ರಂದು 2 ದಿನಗಳ ಕಾಲ ವಿಶೇಷ ಅಧಿವೇಶನ ನಡೆಸುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಇದರ ಜೊತೆಗೆ ವಿಬಿ ಜಿ ರಾಮ್‌ ಜಿ ಕಾಯ್ದೆ ಕುರಿತಂತೆ ರಾಜ್ಯದ ವಿರೋಧ ವ್ಯಕ್ತಪಡಿಸುವುದು ಹಾಗೂ ಕಾಯ್ದೆಯಿಂದಾಗುವ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದಕ್ಕೆ?:

ವರ್ಷದ ಮೊದಲ ವಿಧಾನಮಂಡಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಜಂಟಿ ಅಧಿವೇಶನ ನಡೆಸಬೇಕಿದೆ. ಹೀಗಾಗಿ ವಿಬಿ ಜಿ ರಾಮ್‌ ಜಿ ಕಾಯ್ದೆ ಕುರಿತಂತೆ ಚರ್ಚೆ ನಡೆಸಲು ಕರೆಯಲಾಗುವ ವಿಶೇಷ ಅಧಿವೇಶನದ ಮೊದಲ ದಿನ ಜಂಟಿ ಅಧಿವೇಶನ ನಡೆಯಲಿದೆ. ರಾಜ್ಯಪಾಲರ ಭಾಷಣದ ನಂತರ ವಿಬಿ ಜಿ ರಾಮ್‌ ಜಿ ಕಾಯ್ದೆ ಕುರಿತ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯನ್ನು ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ನಡೆಯಲಿರುವ ಬಜೆಟ್‌ ಅಧಿವೇಶನದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ
ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌