ಇನ್ನೂ 50 ವರ್ಷ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ: ಡಾ। ಕೆ.ಸುಧಾಕರ್‌

KannadaprabhaNewsNetwork |  
Published : Apr 16, 2024, 02:02 AM ISTUpdated : Apr 16, 2024, 04:42 AM IST
ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಚಾರ ಮಾಡಿದರು. | Kannada Prabha

ಸಾರಾಂಶ

ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಡಾ। ಕೆ.ಸುಧಾಕರ್‌ ಪ್ರಚಾರ ನಡೆಸಿದರು.

 ನೆಲಮಂಗಲ/ದೊಡ್ಡಬಳ್ಳಾಪುರ :  ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಮಾಗಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ತ್ರಿಬಲ್‌ ಎಂಜಿನ್‌ನ ಗೆಲುವಿನ ಗಾಳಿ ಬೀಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಹೇಳಿದರು.

ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಡಾ। ಕೆ.ಸುಧಾಕರ್‌ ಪ್ರಚಾರ ನಡೆಸಿದರು.

ನಂತರ ಮಾತನಾಡಿದ ಡಾ। ಕೆ.ಸುಧಾಕರ್‌, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಇರುವವರೆಗೂ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯಗಳನ್ನು ಮಾಡಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆಗಳನ್ನು ಯಾರೂ ಕೊಟ್ಟಿಲ್ಲ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಅದರೆ ಮಹಿಳೆಯರಿಗಾಗಿಯೇ ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್‌ಗೆ ಹೇಳಲು ಸಾಧನೆಗಳ ಸರಕು ಇಲ್ಲದೆ ಈ ರೀತಿಯ ತಂತ್ರ ಹೆಣೆಯುತ್ತಿದೆ ಎಂದರು.

ಕಾಂಗ್ರೆಸ್‌ ಇಂಡಿ ಕೂಟ ಮಾಡಿಕೊಂಡು ಮಂಡಿಯಲ್ಲಿ ಭಾರತವನ್ನೇ ಮಾರಾಟ ಮಾಡಲು ಮುಂದಾಗಿದೆ. 40 ಸ್ಥಾನಕ್ಕಿಂತ ಹೆಚ್ಚು ಬರಲ್ಲ ಎನ್ನುವುದು ಗೊತ್ತಿರುವುದರಿಂದ ಹಾಗೂ ಮುಂದಿನ 50 ವರ್ಷ ಅಧಿಕಾರ ಸಿಗದಿರುವುದು ಖಚಿತವಾಗಿರುವುದರಿಂದ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ. ₹2,000 ಕೊಡುತ್ತಿರುವುದರಿಂದಲೇ ರಾಜ್ಯದ ಸ್ಥಿತಿ ಅಧೋಗತಿಗೆ ಸಾಗಿದೆ. ದೇಶದ ಬೊಕ್ಕಸದಿಂದ ಇದೇ ರೀತಿ ಹಣ ನೀಡಿದರೆ ಇಡೀ ದೇಶ ಹಾಳಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯಲಿದೆ ಎಂದು ಎಚ್ಚರಿಸಿದರು.

ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗೆ ಬಳಸಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡದೆ ದೆಹಲಿಗೆ ಕಳುಹಿಸಲಾಗಿದೆ. ದಲಿತರ ಬಗ್ಗೆ ಕಾಂಗ್ರೆಸ್‌ಗೆ ಗೌರವ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕಿತ್ತು. ಡಾ। ಬಿ.ಆರ್‌.ಅಂಬೇಡ್ಕರ್‌ರ ಹೆಸರು ಹೇಳಲು ಕಾಂಗ್ರೆಸ್‌ ಯೋಗ್ಯತೆ ಮತ್ತು ನೈತಿಕತೆ ಇಲ್ಲ. ಬಾಬಾ ಸಾಹೇಬರನ್ನು ಎರಡು ಬಾರಿ ಸೋಲಿಸಿದ್ದೇ ಕಾಂಗ್ರೆಸ್‌ ಎಂದರು.

ಹಿಂದೂಗಳ ಮತ ನೀಡಬೇಕಾ?

ಕಾಂಗ್ರೆಸ್‌ನ ಅಭ್ಯರ್ಥಿ ಕ್ಯಾಶ್‌ ಪಾರ್ಟಿ. ಅವರ ಖಾತೆಯಲ್ಲಿನ ಹಣ ನೋಡಿ ಟಿಕೆಟ್‌ ನೀಡಿದ್ದಾರೆ. ನಾನು ಆರೋಗ್ಯ ಸಚಿವನಾಗಿ, ಶಾಸಕನಾಗಿ ಕೆಲಸ ಮಾಡಿದ್ದನ್ನು ನೋಡಿ ಟಿಕೆಟ್‌ ನೀಡಿದ್ದಾರೆ. ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸರ್ಕಾರ ಆಳಲು ಬಂದು ರಾಜ್ಯವನ್ನು ಹಾಳು ಮಾಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರಿನಲ್ಲಿ ರಾಮ ಇದೆ, ಅವರಿಗೆ ಟಿಕೆಟ್ ಕೊಡಿಸಿದ್ದವರಾ ಹೆಸರಿನಲ್ಲೂ ರಾಮ ಇದೆ, ಆದರೆ ಅವರು ರಾಮ ಮಂದಿರಕ್ಕೆ ಹೋಗುವುದಿಲ್ಲ, ಅವರ ಹೃದಯದಲ್ಲಿ ರಾಮನ ಬಗ್ಗೆ ಭಕ್ತಿ ಇಲ್ಲ. ಇಂಥವರಿಗೆ ಹಿಂದೂಗಳು ಮತ ನೀಡಬೇಕಾ ಎಂದು ಡಾ। ಕೆ.ಸುಧಾಕರ್‌ ಪ್ರಶ್ನೆ ಮಾಡಿದರು.

ಪಿಕ್‌ ಪಾಕೆಟ್‌ ಸರ್ಕಾರ

ಹಿಂದೆ ಇಂದಿರಾಗಾಂಧಿ ಬಡತನ ನಿರ್ಮೂಲನೆ ಮಾಡುವ ಯೋಜನೆ ಜಾರಿ ಮಾಡಿದ್ದರೂ ಬಡತನ ನಿವಾರಿಸಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಗ್ಯಾರಂಟಿಗಳನ್ನು ತೋರಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಹಿಳೆಯರಿಗೆ ಹಣ ನೀಡಿ, ಪುರುಷರಿಂದ ಹಣ ಪಡೆಯಲಾಗುತ್ತಿದೆ. ಇದು ಪಿಕ್‌ ಪಾಕೆಟ್‌ ಸರ್ಕಾರ.

-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು