ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಬಗ್ಗೆ ಕ್ಷೇತ್ರವಾರು ಸಭೆ: ಡಿ.ಕೆ.ಶಿವಕುಮಾ‌ರ್

Published : Jun 11, 2024, 10:48 AM IST
DK shivakumar

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ‌ರ್ ತಿಳಿಸಿದ್ದಾರೆ.

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ‌ರ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪು ನಮಗೆ ಎಚ್ಚರಿಕೆಯ ಗಂಟೆ. ನಮ್ಮಿಂದ ಎಲ್ಲೆಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಪರಾಮರ್ಶೆ ನಡೆಸಿ, ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಸೋಲಿಗೆ ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹೀಗಾಗಿ, ಪ್ರತಿ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಸಭೆ ನಡೆಸಲಾಗುವುದು. ಶೀಘ್ರದಲ್ಲಿ ಅದಕ್ಕಾಗಿ ದಿನಾಂಕ ನಿಗದಿ ಮಾಡಲಾಗುವುದು. ಸತ್ಯಶೋಧನೆ ಮಾಡಿ ಅದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡುತ್ತೇವೆ ಎಂದರು.

ಕರ್ನಾಟಕ, ಹಿಮಾಚಲ ಪ್ರದೇಶ ರಾಜ್ಯಗಳ ಫಲಿತಾಂಶದ ಬಗ್ಗೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ 14ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ, ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ನಾವು ವಿಫಲರಾಗಿದ್ದೇವೆ. ಜನರ ತೀರ್ಪಿಗೆ ನಾವು ತಲೆ ಬಾಗಲೇಬೇಕು. ಪ್ರಮುಖ ನಾಯಕರ ಕ್ಷೇತ್ರಗಳಲ್ಲೇ ಮತ ಗಳಿಕೆಯಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರುಗಳಲ್ಲಿ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಅದಕ್ಕೆ ಏನಾದರೊಂದು ಕಾರಣ ಹೇಳಿದರೆ ಕೇಳುವುದಿಲ್ಲ. ಅದಕ್ಕೆ ಏನು ಕಾರಣ ಎಂಬ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದರು.

ಶಾಸಕರು ಮರ್ಯಾದೆಯಿಂದ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು: ಡಿಕೆಶಿ

ಬಹಿರಂಗ ಹೇಳಿಕೆ ಬೇಡ:

ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಕೊಡಿಸದ ಸಚಿವರು ರಾಜೀನಾಮೆ ನೀಡಲಿ ಎಂಬ ಶಾಸಕ ಬಸವರಾಜ ಶಿವಗಂಗಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಶಾಸಕರು ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡಬಾರದು. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು. ಸೋಲಿಗೆ ಎಲ್ಲಿ ತಪ್ಪಾಗಿದೆ ಎಂದು ಎಲ್ಲರೂ ಕುಳಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಅಷ್ಟೇ ಎಂದು ಹೇಳಿದರು.

ಕಾಂಗ್ರೆಸ್ ಸೋಲಿಗೆ ಸಚಿವರೇ ಕಾರಣ ಎಂದು ಶಾಸಕರು ದೂರು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಬಳಿ ಯಾರೂ ಬಂದು ಯಾರ ಬಗ್ಗೆಯೂ ದೂರು ನೀಡಿಲ್ಲ. ಈಗ ಒಬ್ಬರ ಮೇಲೊಬ್ಬರು ದೂರು ನೀಡಿದರೂ ಪ್ರಯೋಜನವಿಲ್ಲ. ಶಾಸಕರು, ಸಚಿವರು ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡವರು ಕಾರ್ಯಕರ್ತರ ಬಳಿ ಮಾತನಾಡಿ ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ನಡೆಸಿ, ಅದಕ್ಕೆ ಪರಿಹಾರ ಏನು ಎಂಬ ಬಗ್ಗೆಯೂ ತಿಳಿಸಬೇಕು ಅಷ್ಟೇ ಎಂದರು.

ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆ ಬಗ್ಗೆ ಸತ್ಯಶೋಧನೆ

• ಕರ್ನಾಟಕ, ಹಿಮಾಚಲ ಪ್ರದೇಶ ಫಲಿತಾಂಶದ ಬಗ್ಗೆ ಖರ್ಗೆ ಬೇಸರ

• ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ನಾವು ವಿಫಲರಾಗಿದ್ದೇವೆ: ಡಿಕೆಶಿ

• ಪ್ರಮುಖ ನಾಯಕರ ಕ್ಷೇತ್ರ ಗಳಲ್ಲೇ ಮತ ಗಳಿಕೆಯಾಗಿಲ್ಲ, ನನ್ನ ಕ್ಷೇತ್ರದಲ್ಲೂ ಕೆಲವೆಡೆ ಮತಗಳು ಬಂದಿಲ್ಲ

• ಹಿನ್ನಡೆಗೆ ಏನಾದರೊಂದು ಕಾರಣ ಹೇಳಿದರೆ ಕೇಳುವುದಿಲ್ಲ. ಕಾರಣ ಏನೆಂದು ಪರಿಶೀಲಿಸು ತ್ತೇವೆ: ಡಿಸಿಎಂ ಹೇಳಿಕೆ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ