ಮಂಡ್ಯದಲ್ಲಿ ದಾಂಧಲೆ: ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

KannadaprabhaNewsNetwork |  
Published : Sep 13, 2024, 01:33 AM ISTUpdated : Sep 13, 2024, 05:52 AM IST
HD Kumaraswamy

ಸಾರಾಂಶ

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದಾಂಧಲೆಯನ್ನು ಖಂಡಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಕಿಡಿಕಾರಿದ್ದಾರೆ.

  ಮಂಡ್ಯ :  ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡುತ್ತಿರುವುದರಿಂದಲೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಒಂದು ಸಮುದಾಯದ ಪುಂಡರು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿಕೊಂಡು ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿದ್ದಾರೆ. ಸಾರ್ವಜನಿಕರು ಮತ್ತು ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದಿದ್ದಾರೆ. ಪುಂಡರು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎಂಬ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ಶಾಂತಿ ಕಾಪಾಡಬೇಕು. ತಕ್ಷಣವೇ ಪಟ್ಟಣದಲ್ಲಿ ಶಾಂತಿಯನ್ನು ಮರುಸ್ಥಾಪನೆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈ ಪ್ರಕರಣದ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌