ಸಿ.ಪಿ.ಯೋಗೇಶ್ವರ್‌ ನಮ್ಮ ಸಂಪರ್ಕದಲ್ಲಿ ಇಲ್ಲ, ಅವರು ನಮ್ಮ ಬಳಿ ಬಂದಿಲ್ಲ : ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Oct 22, 2024, 12:07 AM ISTUpdated : Oct 22, 2024, 04:29 AM IST
21ಕೆಎಂಎನ್‌ಡಿ-7ಮಂಡ್ಯದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸೆಂಟರ್‌ ಆಫ್‌ ಎಕ್ಸಲೆನ್ಸ್ ಕಚೇರಿ ಪ್ರಾರಂಭಿಸಲು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರು, ಮುಖಂಡರಿಂದ ತೀವ್ರ ಒತ್ತಡವಿದೆ. ಆಕಾಂಕ್ಷಿತರ ಪಟ್ಟಿಯಲ್ಲಿ ಪುಟ್ಟಣ್ಣ, ಅಶ್ವಥ್, ರಘುನಂದನ್ ಹೆಸರುಗಳೂ ಇವೆ. ನೂರಕ್ಕೆ ನೂರು ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸಬೇಕೆಂದು ತೀವ್ರ ಒತ್ತಾಯವಿದೆ.  

 ಮಂಡ್ಯ : ಸಿ.ಪಿ.ಯೋಗೇಶ್ವರ್ ನಮ್ಮ ಸಂಪರ್ಕದಲ್ಲಿ ಇಲ್ಲ. ಅವರು ನಮ್ಮ ಬಳಿ ಬಂದಿಲ್ಲ. ನಾವು ಅವರ ಬಳಿ ಹೋಗಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಜೆಡಿಎಸ್ ಚಿಹ್ನೆಯಿಂದ ಸಿ.ಪಿ.ಯೋಗೇಶ್ವರ್‌ ನಿಲ್ಲುತ್ತಾರೆ ಅಂತ ಒಂದು ಕಡೆ ಕೇಳಿಬಂದರೆ, ಮತ್ತೊಂದು ಕಡೆ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧಿಸುವರೆಂಬ ಮಾತುಗಳು ಮತ್ತೊಂದೆಡೆ ಕೇಳಿಬರುತ್ತಿವೆ. ಅವರ ಪಕ್ಷದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ನುಡಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರು, ಮುಖಂಡರಿಂದ ತೀವ್ರ ಒತ್ತಡವಿದೆ. ಆಕಾಂಕ್ಷಿತರ ಪಟ್ಟಿಯಲ್ಲಿ ಪುಟ್ಟಣ್ಣ, ಅಶ್ವಥ್, ರಘುನಂದನ್ ಹೆಸರುಗಳೂ ಇವೆ. ನೂರಕ್ಕೆ ನೂರು ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸಬೇಕೆಂದು ತೀವ್ರ ಒತ್ತಾಯವಿದೆ. ಡಿ.ಕೆ.ಸುರೇಶ್ ಹೆಸರನ್ನು ಹೊರತುಪಡಿಸಿ ಅವರ ಕುಟುಂಬದಿಂದ ಬೇರೆ ಯಾರೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಲ್ಲ ಎಂದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನಿನ್ನೆಯಷ್ಟೇ ಸಭೆ ಕರೆದು ಮೂರು ಉಪ ಚುನಾವಣೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಂಡೂರು ಕ್ಷೇತ್ರದ ಟಿಕೆಟ್ ವಿಷಯವನ್ನು ಅಲ್ಲಿನ ನಮ್ಮ ಎಂಪಿ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಶಿಗ್ಗಾವಿ ಮತ್ತು ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದಾರೆ.

ನನಗೆ ಚನ್ನಪಟ್ಟಣ ಉಸ್ತುವಾರಿ ಕೊಟ್ಟಿದ್ದಾರೆ. ಅಲ್ಲಿನ ಸ್ಥಳೀಯ ಶಾಸಕರು, ಮುಖಂಡರಿಂದ ಮಾಹಿತಿ ಸಂಗ್ರಹಿಸಿ ಸಿಎಂ, ಡಿಸಿಎಂಗೆ ಕೊಡುತ್ತೇವೆ. ಚನ್ನಪಟ್ಟಣದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವುದಾಗಿ ಸ್ಪಷ್ಟಪಡಿಸಿದರಲ್ಲದೇ, ಅಂತಿಮ ಪಟ್ಟಿಯನ್ನು ಸಿಎಂ-ಡಿಸಿಎಂ ಎಐಸಿಸಿಗೆ ಕಳುಹಿಸುವರು ಎಂದರು.

ಬಿಜೆಪಿ ಮತ್ತು ಜೆಡಿಎಸ್ ನಡುವೆ ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡ್ತಿದೆ ಎಂಬ ಎಚ್‌ಡಿಕೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಅವರೇನು ಕಿವಿಗೆ ಹೂ ಇಟ್ಟುಕೊಂಡಿದ್ದಾರಾ?. ನಮ್ಮನ್ನ ಕೇಳಿ ಮೈತ್ರಿ ಮಾಡಿಕೊಂಡಿದ್ದಾರಾ?, ಟೀಕೆ ಮಾಡೋದು ರಾಜಕಾರಣ. ಅದರಲ್ಲಿ ಹುಳಿ ಹಿಂಡೋದೇನು?, ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಜೊತೆ ಕುಮಾರಸ್ವಾಮಿ ಚೆನ್ನಾಗಿದ್ದಾರೆ ಎಂದುಕೊಂಡಿದ್ದೆವು. ಈಗ ಅವರ ಹೇಳಿಕೆ ನೋಡಿದರೆ ಅವರಲ್ಲೂ ವ್ಯತ್ಯಾಸಗಳಿವೆ ಎಂದು ತಿಳಿದುಕೊಳ್ಳಬೇಕು ಎಂದು ತಿವಿದರು.

ಪ್ರತಿ ದಿನ ಕುಮಾರಸ್ವಾಮಿಗೆ ಸರ್ಕಾರ ಉರುಳಿಸಬೇಕು ಅನ್ನೋದೇ ಕೆಲಸ. ಅದೊಂಥರಾ ಅವರಿಗೆ ಚಪಲ. ಸರ್ಕಾರ ತೆಗೆಯುತ್ತೇನೆ ಅಂತ ಮಾತನಾಡುವುದೇ ಅಪರಾಧ. ಕುಮಾರಸ್ವಾಮಿ ಯಾವತ್ತು ನಾನು ಮುಖ್ಯಮಂತ್ರಿ ಆಗುವುದಿಲ್ಲ ಅಂತಾರೆ, 123 ಸೀಟ್ ಬರದಿದ್ದರೆ ರಾಜಕೀಯ ನಿವೃತ್ತಿ ಆಗುವೆ ಎಂದಿದ್ದರು. ಅವರು ಆಡಿದ ಮಾತಿನಂತೆ ನಡೆದುಕೊಂಡರಾ ಎಂದು ಪ್ರಶ್ನಿಸಿದರು.

ಸರ್ಕಾರ ಬೀಳುತ್ತೆ ಅಂತ ಕುಮಾರಸ್ವಾಮಿಗೆ ಜಪ ಮಾಡೋಕೆ‌ ಹೇಳಿ. ಏನಾದರೂ ಅಲುಗಾಡಿದರೆ ಕೇಂದ್ರ ಸರ್ಕಾರ ಅಲುಗಾಡಬೇಕಷ್ಟೇ. ಇಲ್ಲಿ ನಾವು ಮೆಜಾರಿಟಿ ಇದ್ದೇವೆ, ಕೇಂದ್ರ ಬಿಜೆಪಿಯಲ್ಲಿ ಮೆಜಾರಿಟಿ ಇಲ್ಲ ಎಂದು ಹೇಳಿ ಮಾತು ಮುಗಿಸಿದರು.

2.03 ಕೋಟಿ ರು. ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕಚೇರಿ ಶಂಕುಸ್ಥಾಪನೆ

ಮಂಡ್ಯ : ಕೃಷಿ ಇಲಾಖೆಯ ವಿವಿಧ ಕೆಲಸಗಳ ನಿರ್ವಹಣೆಗಾಗಿ ಮಂಡ್ಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ 2 ಕೋಟಿ ರು. ವೆಚ್ಚದ ಸೆಂಟರ್ ಆಫ್ ಎಕ್ಸಲೆನ್ಸ್ ಕಚೇರಿ ಪ್ರಾರಂಭಿಸಲು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.

ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳಿಗೆ ಸರ್ಕಾರಿ ಕಟ್ಟಡ ನಿರ್ಮಿಸಲು ಸರ್ಕಾರ ಅನುದಾನವನ್ನು ಒದಗಿಸಲಿದೆ ಎಂದರು.

ಜಿಲ್ಲೆಯ 7 ತಾಲೂಕುಗಳಲ್ಲಿಯೂ ಕೃಷಿ ನಿರ್ದೇಶಕರ ಕಚೇರಿ ನಿರ್ಮಿಸುವುದು ನಮ್ಮ ಉದ್ದೇಶವಾಗಿದ್ದು, ಆಯಾ ಕ್ಷೇತ್ರದ ಶಾಸಕರು ಸ್ಥಳವನ್ನು ಹುಡುಕಿ ನಿಗಧಿಪಡಿಸಬೇಕು. ತಹಸೀಲ್ದಾರರು ಹಾಗೂ ಕೃಷಿ ಇಲಾಖೆಯವರು ಪರಸ್ಪರ ಸಹಕಾರದೊಂದಿಗೆ ಕಚೇರಿ ನಿರ್ಮಿಸಲು ಸ್ಥಳ ಗುರುತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಅಶೋಕ್, ಸಹಾಯಕ ಕೃಷಿ ನಿರ್ದೇಶಕಿ ಸುನೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ