ರಾಜಕೀಯ ಪುನರ್ಜನ್ಮ ನೀಡಿದ ನಿಮಗೆ ಕೋಟಿ ಶರಣು : ಸಂಸದ ಸುಧಾಕರ್‌

KannadaprabhaNewsNetwork | Updated : Jun 24 2024, 03:35 AM IST

ಸಾರಾಂಶ

ಗೌರಿಬಿದನೂರು ಭಾಗಕ್ಕೆ ನೀರಾವರಿ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆ, ಬೃಹತ್ ಕೈಗಾರಿಕಾಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಯಾವುದೇ ಅಧಿಕಾರದ ವ್ಯಾಮೋಹವಿಲ್ಲದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ಸಂಸದ ಸುಧಾಕರ್‌ ಹೇಳಿದ್ದಾರೆ

 ಚಿಕ್ಕಬಳ್ಳಾಪುರ :  ರಾಜಕೀಯ ಜೀವನದಲ್ಲಿ ಪುನರ್ಜನ್ಮ ಕೊಟ್ಟಂತಹ ಪುಣ್ಯಾತ್ಮರು ನೀವೆಲ್ಲಾ, ನಿಮ್ಮ ಪಾದಗಳಿಗೆ ಕೋಟಿ ನಮನಗಳನ್ನು ಅರ್ಪಿಸುತ್ತೆನೆ. ವಿಶೇಷವಾಗಿ 3 ನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿರುವುದು ದಾಖಲೆಯಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.ಜಿಲ್ಲೆಯ ಗೌರಿಬಿದನೂರು ನಗರದ ನದಿದಡ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಭೂತಪೂರ್ವ ಗೆಲುವು ದಾಖಲಿಸಿರುವುದಕ್ಕೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಮೂಲಕ ಕೇಂದ್ರ ಯೋಜನೆ ಜಾರಿ

ದೇಶದಲ್ಲಿ ಒಕ್ಕೂಟ ವ್ಯವಸ್ಥೆಯಿದೆ. ಕೇಂದ್ರ ಸರ್ಕಾರದ ಅನುದಾನ ರಾಜ್ಯ ಸರ್ಕಾರಕ್ಕೆ ನೀಡುತ್ತದೆ, ರಾಜ್ಯ ಸರ್ಕಾರದ ಮೂಲಕ ಅದು ಅನುಷ್ಠಾನಗೊಳ್ಳುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಈ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ರಾಜ್ಯ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಗೌರಿಬಿದನೂರು ಕ್ಷೇತ್ರ ರಾಜಕೀಯವಾಗಿ, ಐತಿಹಾಸಿಕವಾಗಿ ವಿಶೇಷವಾದದ್ದು ಏಕೆಂದರೆ ಹುತಾತ್ಮರ ಪುಣ್ಯಕ್ಷೇತ್ರವಾದ ವಿದುರಾಶ್ವತ್ಥ , ಶಿಕ್ಷಣ ತಜ್ಞ ಹಾಗೂ ಗಾಂಧಿವಾದಿ ಎಚ್.ನರಸಿಂಹಯ್ಯ ನವರ ಪುಣ್ಯ ಸ್ಥಳವಾಗಿದೆ.ಈ ಭಾಗಕ್ಕೆ ನೀರಾವರಿ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆ, ಬೃಹತ್ ಕೈಗಾರಿಕಾಗಳ ಸ್ಥಾಪನೆಗೆ ಆದ್ಯತೆ ನೀಡುತ್ತೇನೆ.ನನಗೆ ಯಾವುದೇ ಅಧಿಕಾರದ ದಾಹ , ವ್ಯಾಮೋಹವಿಲ್ಲ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು.ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಭರವಸೆ

ಬಿಜೆಪಿ ಮುಖಂಡ ಎನ್.ಎಂ.ರವಿನಾರಾಯಣರೆಡ್ಡಿ ಮಾತನಾಡಿ, ನೂತನ ಸಂಸದರು ನಮಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಈ ಭಾಗದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಗಟ್ಟಿಮಾಡುತ್ತೆವೆ ಎಂದರು.ಜೆಡಿಎಸ್ ಮುಖಂಡ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಛಿಧ್ರ ಛಿಧ್ರವಾಗಿದ್ದ ಮತಗಳನ್ನು ರಾಷ್ಟ್ರದ ಹಿತದೃಷ್ಟಿಯಿಂದ ಹಾಗೂ ಮೋದಿಯವರು ಚುಕ್ಕಾಣಿ ಹಿಡಿಯಲೆಬೇಕೆಂದು ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಎಲ್ಲರೂ ಸೇರಿ ಡಾ.ಸುಧಾಕರ್ ರವರನ್ನು ಗೆಲ್ಲಿಸಿದ್ದೇವೆ. ಸಂಸದರು ಈ ಭಾಗದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದರ ಮೂಲಕ ಮೈತ್ರಿ ಪಕ್ಷಗಳ ಬೆಳವಣಿಗೆಗೆ ಸಹಕರಿಸ ಬೇಕು ಎಂದು ಹೇಳಿದರು.ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸಲಿ

ಬಿಜೆಪಿ ಮುಖಂಡರು ಹಾಗೂ ಮಾನಸ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಚ್.ಎಸ್.ಶಶಿಧರ್ ಮಾತನಾಡಿ, ಈ ಕ್ಷೇತ್ರಕ್ಕೆ ಬೃಹತ್ ಕೈಗಾರಿಕಾಗಳು ತಂದು ಈ ಭಾಗದ ಜನರಿಗೆ ಇಲ್ಲಿಯೇ ಕೆಲಸ ಸೃಷ್ಟಿಸಿ ಕೊಟ್ಟಲ್ಲಿ ಅವರ ಜೀವನ ಸಾಗಿಸಲು ಅನುಕೂಲವಾಗುತ್ತದೆ ಮತ್ತು ಶಾಶ್ವತ ನೀರಾವರಿ ಸೇರಿದಂತೆ ಇನ್ನಿತರ ಯೋಜನೆಗಳು ತಂದು ಅಭಿವೃದ್ಧಿ ಮಾಡುವುದರ ಜೊತೆಗೆ ಈ ಜಿಲ್ಲೆಯಲ್ಲಿ ಪಕ್ಷಕ್ಕೆ ಆಸರೆಯಾಗಿ ನಿಲ್ಲಬೇಕು ಎಂದರು.ಇದೇ ವೇಳೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ವಿ.ರಾಮಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮತ್ತು ಮುಖಂಡರಾದ ವೇಮಾರೆಡ್ಡಿ, ರಮೇಶ್ ರಾವ್ ಶೆಲ್ಕೆ, ಮೋಹನ್, ಬಿ.ಜಿ.ವೇಣುಗೋಪಾಲ ರೆಡ್ಡಿ, ಬಿ.ಎನ್.ರಂಗನಾಥ, ಕೆ.ನಾಗಭೂಷಣ ರಾವ್, ಡೈರಿರಮೇಶ್, ಬೈಪಾಸ್ ನಾಗರಾಜ, ಮಧುಸೂದನ್, ನಾರಾಯಣರೆಡ್ಡಿ, ಪುಣ್ಯವತಿ. ಜಯಣ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Share this article