;Resize=(412,232))
ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.
ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿ ಇತರ ವರಿಷ್ಠರನ್ನು ಭೇಟಿ ಮಾಡಿ ಅಡ್ಡಮತದಾನದ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ.
ಸೋಮವಾರ ವಿಜಯೇಂದ್ರ ಮತ್ತು ಅಶೋಕ್ ಅವರು ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣಿಸಲಿದ್ದಾರೆ. ಮಂಗಳವಾರ ಇಡೀ ದಿನ ವಿವಿಧ ನಾಯಕರ ಭೇಟಿ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಲಿಖಿತ ವಿವರಣೆಯನ್ನು ಸಿದ್ಧಪಡಿಸಿಕೊಂಡಿದ್ದು, ವರಿಷ್ಠರಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಡ್ಡಮತದಾನ ಬೆಳವಣಿಗೆಯನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದು, ಯಾರು ಪಕ್ಷದ ಬೇಲಿ ಹಾರಿದ್ದಾರೋ ಭವಿಷ್ಯದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂಬ ನಿಲುವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ವೇಳೆ ಎಲ್ಲ ಮಾಹಿತಿಯೊಂದಿಗೆ ಆಗಮಿಸುವಂತೆ ಸೂಚಿಸಿದ್ದರು.
- ಜೂ.18ರಂದು ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ನ 11 ಶಾಸಕರ ಅಡ್ಡಮತ
- ಮರುದಿನ ಈ ಬಗ್ಗೆ ವಿವರಣೆ ಕೇಳಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿ. ಭೇಟಿಗೆ ಅವಕಾಶ ಕೇಳಿದ್ದ ಬಿವೈವಿ
- ಅದರಂತೆ ಸೋಮವಾರ ದೆಹಲಿಗೆ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಲಿರುವ ವಿಜಯೇಂದ್ರ, ಆರ್. ಅಶೋಕ್
- ಮಂಗಳವಾರ ನಿತಿನ್ ನಬಿ ಸೇರಿ ಬಿಜೆಪಿ ಹೈಕಮಾಂಡ್‌ನ ವಿವಿಧ ನಾಯಕರನ್ನು ಭೇಟಿ ಆಗಿ ವಿವರಣೆ ಸಾಧ್ಯತೆ