;Resize=(412,232))
ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸರಿದಾರಿಯಲ್ಲಿ ನಡೆಯುತ್ತಿದೆ ಎಂದು ಬೆನ್ನುತಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಜೊತೆಗೆ ತಮ್ಮ ಹೊಸ ಯೋಜನೆಗಳನ್ನೂ ಅನುಷ್ಠಾನಗೊಳಿಸಲಿ. ಉಳಿದ ಅಧಿಕಾರಾವಧಿಯಲ್ಲಿ ಪ್ರಣಾಳಿಕೆಯಲ್ಲಿ ಜನರಿಗೆ ಪಕ್ಷ ನೀಡಿದ್ದ ಇತರೆ ಎಲ್ಲಾ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ದೃಢ ಕರ್ನಾಟಕದ ಸಂಕಲ್ಪ-100 ದಿನಗಳ ಯಶಸ್ವಿ ಪೂರೈಕೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅನೇಕ ಹೊಸ ಚಿಂತನೆಗಳು ಹಾಗೂ ಹೊಸ ಕಾರ್ಯಕ್ರಮಗಳನ್ನು ಜನರಿಗೆ ನೀಡುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದು ನನಗೆ ಅನಿಸುತ್ತಿದೆ. ಸರ್ಕಾರ 100 ದಿನಗಳನ್ನು ಪೂರೈಸಿರುವ ಕಾರ್ಯಕ್ರಮ ಸಂಭ್ರಮಾಚರಣೆಯಲ್ಲ. ಈ ನೂರು ದಿನಗಳಲ್ಲಿ ನಾವು ಸರಿ ದಾರಿಯಲ್ಲಿ ನಡೆಯುತ್ತಿದ್ದೇವೋ, ಇಲ್ಲವೋ ಎಂಬುದನ್ನು ಜನರ ಮುಂದಿಡುವ ಒಂದು ಜವಾಬ್ದಾರಿ. ಆ ಜವಾಬ್ದಾರಿಯನ್ನು ಸರ್ಕಾರ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಮಾತ್ರ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಬಜೆಟ್ ರೂಪಿಸುತ್ತದೆ. ಉಳಿದ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಬಳಿಕ ಪ್ರಣಾಳಿಕೆಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಪ್ರಣಾಳಿಕೆ ಭರವಸೆ ಈಡೇರಿಸಲು ಐದು ವರ್ಷಗಳ ಅವಕಾಶವಿರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಾನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪಂಚ ಗ್ಯಾರಂಟಿ ಯೋಜನೆಗಳು ಸೇರಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹಲವು ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆವು. ಮೂರು ವರ್ಷಗಳ ಬಳಿಕ ಈಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದ್ದಾರೆ. ಗ್ಯಾರಂಟಿಗಳನ್ನು ಮುಂದುವರೆಸಿದ್ದಾರೆ. ಜೊತೆಗೆ ಭೂ ಗ್ಯಾರಂಟಿ, ಸಿಎಂ ನೇಗಿಲ ಯೋಗಿ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಅವುಗಳ ಜೊತೆಗೆ ಉಳಿದ ಅಧಿಕಾರಾವಧಿಯಲ್ಲಿ ಪ್ರಣಾಳಿಕೆಯ ಬಾಕಿ ಇರುವ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದರು.
ನಾವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಅವುಗಳ ಜಾರಿ ಸಾಧ್ಯವಿಲ್ಲ. ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ, ಅಭಿವೃದ್ದಿಗೆ ಹಣ ಇರುವುದಿಲ್ಲ ಎಂದು ಪ್ರಧಾನಮಂತ್ರಿ ಆದಿಯಾಗಿ ಟೀಕಿಸುತ್ತಿದ್ದ ಬಿಜೆಪಿಯವರು ನಂತರ ನಮ್ಮ ಯೋಜನೆಗಳನ್ನೇ ಬೇರೆ ರಾಜ್ಯಗಳಲ್ಲಿ ನಕಲು ಮಾಡಿದರು. ಮೂರು ವರ್ಷಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ನಾನು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಈಗ ಡಿ.ಕೆ.ಶಿವಕುಮಾರ್ ಅವರೂ ಅವನ್ನು ಮುಂದುವರೆಸಿದ್ದಾರೆ. ಪ್ರತೀ ವರ್ಷ 52 ಸಾವಿರ ಕೋಟಿ ರು. ವೆಚ್ಚವಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಯಾವುದೂ ಕುಂಠಿತವಾಗಿಲ್ಲ. ಹಾಗಾಗಿ ಪ್ರತಿಪಕ್ಷಗಳ ಟೀಕೆಗಳಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ. ಎಷ್ಟೇ ಟೀಕೆಗಳು ಬಂದರೂ, ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಯಾಕೆಂದರೆ ಗ್ಯಾರಂಟಿ ಯೋಜನೆಗಳು ಅಸಮಾನತೆಯನ್ನು ತೊಲಗಿಸುವಂತಹ ಕಾರ್ಯಕ್ರಮಗಳಾಗಿವೆ ಎಂದರು.
ರಾಜ್ಯದಲ್ಲಿ ಈ ಬಾರಿ ಬರ ಆವರಿಸಿದೆ. ಈಗಾಗಲೇ 101 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಹಲವು ತಾಲೂಕುಗಳ ಅಧ್ಯಯನ ನಡೆಸುತ್ತಿದ್ದೀರಿ. ಬರ ಪರಿಹಾರ, ನಿರ್ವಹಣೆಗೆ ಕೇಂದ್ರದ ನೆರವನ್ನೇ ಸಂಪೂರ್ಣ ನಂಬಿ ಕೂರಬೇಡಿ. ಅವರು ಸೂಕ್ತ ಪರಿಹಾರ ಕೊಡುವ ಭರವಸೆ ಇಲ್ಲ. ರಾಜ್ಯ ಸರ್ಕಾರದಿಂದಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಎಂದು ಇದೇ ವೇಳೆ ಸಿದ್ದರಾಮಯ್ಯ ಸಲಹೆ ನೀಡಿದರು.
ಕೇಂದ್ರ ಸರ್ಕಾರ ನಿಮ್ಮ ನೆರವಿಗೆ ಧಾವಿಸುತ್ತದೆ ಎಂಬ ನಂಬಿಕೆ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬೇಡಿ. ಕೇಂದ್ರದ ನೆರವಿಗಾಗಿ ಕಾಯುತ್ತಾ ಕುಳಿತುಕೊಳ್ಳಬೇಡಿ. ನೀವು ಈಗಾಗಲೇ ಯಾವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೀರೋ, ಇನ್ನೂ ಯಾವುದಾದರೂ ತಾಲೂಕುಗಳನ್ನು ಘೋಷಣೆ ಮಾಡಬೇಕಿದ್ದರೆ ಅದನ್ನೂ ಮಾಡಿ. ಸೆಪ್ಟೆಂಬರ್ ತಿಂಗಳು ಮುಗಿದ ನಂತರ ಮಳೆ ಬರುವ ಸಾಧ್ಯತೆ ಕಡಿಮೆ. ನಮ್ಮ ಕೆರೆ-ಕಟ್ಟೆಗಳು ತುಂಬುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಈಗಾಗಲೇ ನೀವು ರೂಪಿಸಿರುವ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತನ್ನಿ. ಹಳೆಯ ಕಾರ್ಯಕ್ರಮಗಳನ್ನೂ ಸಮರ್ಪಕವಾಗಿ ಜಾರಿಗೆ ತನ್ನಿ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿ ಎನ್ನುವ ಕಿವಿಮಾತು ಹೇಳಿದರು.
ಉಳಿದ ಪಕ್ಷಗಳು ಚುನಾವಣೆ ಬಳಿಕ ಪ್ರಣಾಳಿಕೆ ಕಣ್ಣೆತ್ತಿಯೂ ನೋಡಲ್ಲ
ನಾನು ಸಿಎಂ, ಡಿಕೆ ಡಿಸಿಎಂ ಆದಾಗ ಹಲವು ಭರವಸೆ ಈಡೇರಿಸಿದ್ದೇವೆ
ಈಗ ಅವರು ಗ್ಯಾರಂಟಿ ಜೊತೆಗೆ ಹೊಸ ಯೋಜನೆ ಜಾರಿ ಮಾಡ್ತಿದ್ದಾರೆ
ಉಳಿದ ಅವಧಿಯಲ್ಲಿ ಬಾಕಿ ಗ್ಯಾರಂಟಿಗಳನ್ನೂ ಅವರು ಈಡೇರಿಸಲಿ