10 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಡಿಸಿಸಿ ಬ್ಯಾಂಕ್‌ ಭ್ರಷ್ಟಾಚಾರ ಸಿಬಿಐ ತನಿಖೆಗೆ ಒಪ್ಪಿಸಿ

KannadaprabhaNewsNetwork | Updated : Aug 13 2024, 05:19 AM IST

ಸಾರಾಂಶ

10 ವರ್ಷಗಳ ಕಾಲ ಲಾಭದಲ್ಲಿದ್ದಂತಹ ಬ್ಯಾಂಕ್ ದಿಢೀರನೇ 10 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಹಿಂದಿನ ರಹಸ್ಯವೇನು. ಬ್ಯಾಂಕ್ ವ್ಯವಸ್ಥಾಪಕರು, ಸೂಪರ್‌ವೈಸರ್ ರವರು ನಕಲಿ ಸಂಘಗಳನ್ನು ಸೃಷ್ಟಿ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

  ಕೋಲಾರ  : ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಲಕ್ಷಾಂತರ ರೈತರ ಜೀವನಾಡಿ ಆಗಿರುವ ಬ್ಯಾಂಕ್‌ನ್ನು ಉಳಿಸಬೇಕೆಂದು ರೈತ ಸಂಘದ ಕಾರ್ಯಕರ್ತರು ಬ್ಯಾಂಕ್ ಮುಂದೆ ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿ ಉಪ ವಿಭಾಗಧಿಕಾರಿ ಮುಖಾಂತರ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು.

ಉಚ್ಚ ನ್ಯಾಯಾಲಯವೂ ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಬ್ಯಾಂಕ್‌ಗೆ ಚುನಾವಣೆ ನಡೆಸಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರೂ ಚುನಾವಣೆ ನಡೆಸದೆ ಜಿಲ್ಲಾಧಿಕಾರಿ ಚುನಾವಣೆ ದಿನಾಂಕ ನಿಗದಿ ಪಡಿಸಿ ಮತ್ತೆ ಮುಂದೂಡಲು ಕಾರಣವೇನು, ಸಹಕಾರ ಬ್ಯಾಂಕ್ ಹಾಳು ಮಾಡಲು ಕಣ್ಣಿಗೆ ಕಾಣದ ಹಿತ ಶತ್ರುಗಳ ಕೈವಾಡ ನಡೆಯುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.ಬ್ಯಾಂಕ್‌ಗೆ ದಿಢೀರ್‌ ನಷ್ಟ

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎರಡೂ ಜಿಲ್ಲೆಗಳ ರೈತರ ಹಾಗೂ ಸ್ತ್ರೀಶಕ್ತಿ ಸಂಘಗಳ ಜೀವನಾಡಿಯಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್‌ ಅನ್ನು ೨೦೧೪ರಲ್ಲಿ ಅಧಿಕಾರಕ್ಕೆ ಬಂದು ಬ್ಯಾಲಹಳ್ಳಿ ಗೋವಿಂದ ಗೌಡರ ನೇತ್ರತ್ವದ ಆಡಳಿತ ಮಂಡಳಿಯು ಸುಧಾರಣೆ ಮಾಡಿ ರೈತರ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ, ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಆರ್ಥಿಕ ಶಕ್ತಿ ತುಂಬಿದ್ದರು. 

ಈಗ ಬ್ಯಾಂಕ್‌ ಅನ್ನು ದಿವಾಳಿ ಮಾಡಿ ಖಾಸಗಿ ಬ್ಯಾಂಕ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ೧೦ ವರ್ಷಗಳ ಕಾಲ ಲಾಭದಲ್ಲಿದ್ದಂತಹ ಬ್ಯಾಂಕ್ ದಿಢೀರನೇ 10 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಹಿಂದಿನ ರಹಸ್ಯವೇನು. ಬ್ಯಾಂಕ್ ವ್ಯವಸ್ಥಾಪಕರು, ಸೂಪರ್‌ವೈಸರ್ ರವರು ನಕಲಿ ಸಂಘಗಳನ್ನು ಸೃಷ್ಟಿ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಡುತ್ತಿದೆ. ಬ್ಯಾಂಕ್‌ನ ವ್ಯವಸ್ಥಾಪಕರು ೧.೫೦ ಕೋಟಿ ರು.ಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಸರ್ಕಾರದ ತನಿಖಾ ವರದಿಯಲ್ಲಿ ಸಾಬೀತಾಗಿದ್ದರೂ ಭ್ರಷ್ಟ ಅಧಿಕಾರಿಯ ರಕ್ಷಣೆಗೆ ನಿಂತಿರುವವರು ಯಾರು ಎಂದು ಪ್ರಶ್ನಿಸಿದರು. ಬ್ಯಾಂಕಿನ ಆಡಳಿಯ ಮಂಡಳಿಯ ಅವಧಿ ಮುಗಿದ ನಂತರ ಸರ್ಕಾರವು ಅಡಳಿತಾಧಿಕಾರಿಯನ್ನು ನೇಮಕ ಮಾಡಿದೆ, ಆದರೆ ಬಡವರಿಗೆ ಸಾಲ ಸೌಲಭ್ಯಗಳು ದೊರೆಯದೆ ಇರುವುದು ಖಾಸಗಿ ಲೇವಾದೇವಿದಾರರಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡುತ್ತಿದೆ ಎಂದು ಬ್ಯಾಂಕ್ ವಿರುದ್ಧ ಆರೋಪಿಸಿದರು.ಸಾಲ ವಿತರಣೆಯ ಭರವಸೆ

ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿಗಳು, ಹಗರಣದ ವಿಚಾರವಾಗಿ ತನಿಖೆ ನಡೆಯುತ್ತಿದೆ. ಲೆಕ್ಕ ಪರಿಶೋಧಕರಿಗೂ ಪತ್ರ ಬರೆಯಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ತಿಂಗಳ ಅಂತ್ಯದಲ್ಲಿ ಸಾಲ ವಿತರಣೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ನರಸಿಂಹಯ್ಯ, ಕುವ್ವಣ್ಣ, ಅಶ್ವತಪ್ಪ, ಯಲ್ಲಪ್ಪ, ಹರೀಶ್, ಸುಪ್ರೀಂ ಚಲ ಇದ್ದರು.

Share this article