ತುಂಗಭದ್ರಾ ಜಲಾಶಯಕ್ಕೆ ಚೀಫ್‌ ಎಂಜಿನಿಯರ್ ನೇಮಕ ಮಾಡಿಲ್ಲವೇಕೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ

KannadaprabhaNewsNetwork |  
Published : Aug 13, 2024, 12:51 AM ISTUpdated : Aug 13, 2024, 05:23 AM IST
12ಕೆಪಿಎಲ್21 ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ಭೇಟಿ ನೀಡಿ, ಪರಿಶೀಲಿಸಿದರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ರಾಜ್ಯ ಸರ್ಕಾರ ಒಂದು ವರ್ಷವಾದರೂ ಮುಖ್ಯ ಎಂಜಿನಿಯರ್‌ ಯಾಕೆ ನೇಮಕ ಮಾಡಿಲ್ಲ? ಮೊದಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಉತ್ತರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.

 ಕೊಪ್ಪಳ :  ರಾಜ್ಯದ ಬಹುದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ತುಂಗಭದ್ರಾ ಜಲಾಶಯಕ್ಕೆ ರಾಜ್ಯ ಸರ್ಕಾರ ಒಂದು ವರ್ಷವಾದರೂ ಮುಖ್ಯ ಎಂಜಿನಿಯರ್‌ ಯಾಕೆ ನೇಮಕ ಮಾಡಿಲ್ಲ? ಮೊದಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಉತ್ತರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.

ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿರುವ, ಮೂರು ರಾಜ್ಯಗಳಿಗೆ ನೀರು ಪೂರೈಕೆ ಮಾಡುವ ಜಲಾಶಯಕ್ಕೆ ಮುಖ್ಯ ಅಭಿಯಂತರರನ್ನು ನೇಮಕ ಮಾಡಿಲ್ಲ ಅಂದರೇ ಏನರ್ಥ? ಇದರಿಂದಲೇ ಜಲಾಶಯದ ಬಗ್ಗೆ ಜಲಸಂಪನ್ಮೂಲ ಸಚಿವರಿಗೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ. ಅವರಿಗೆ ನೀರಿಗಿಂತ ಸಂಪತ್ತಿನ ಬಗ್ಗೆ ಮಾತ್ರ ಕಾಳಜಿ ಎಂದು ವ್ಯಂಗ್ಯವಾಡಿದರು.

ಮುಖ್ಯ ಅಭಿಯಂತರರನ್ನು ನೇಮಿಸದಿರುವ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಆರೋಪಗಳಿವೆ. ಈ ಕುರಿತು ರಾಜ್ಯ ಸರ್ಕಾರವೇ ಉತ್ತರ ನೀಡಲಿ, ನಾನು ಅದನ್ನು ಹೇಳಲು ಹೋಗುವುದಿಲ್ಲ. ಸಿಎಂ, ಡಿಸಿಎಂ ಮೊದಲು ಸಮಸ್ಯೆಗೆ ಸ್ಪಂದಿಸಲು ಪ್ರಯತ್ನಿಸಲಿ. ಅದನ್ನು ಬಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದು ಕಿಡಿಕಾಡಿದರು.

ಪೋಲಾಗುತ್ತಿರುವ ನೀರು ನಿಲ್ಲಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು. ಲಕ್ಷ ಕ್ಯುಸೆಕ್‌ ನೀರು ಹೀಗೆ ಪೋಲಾಗುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ ಎಂದರು.

ವರ್ಷದಿಂದ ಮುಖ್ಯ ಅಭಿಯಂತರರೇ ಇಲ್ಲ. ನಿರ್ವಹಣೆ ಇಲ್ಲದೆ, ನಿರ್ಲಕ್ಷ್ಯದಿಂದಲೇ ಈ ದುರಂತ ನಡೆದಿದೆ. ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ. ಅಚ್ಚರಿ ಎಂದರೆ ಜಲಸಂಪನ್ಮೂಲ ಸಚಿವರು ಮಾತ್ರ ದುರಂತಕ್ಕೆ ಯಾರನ್ನೂ ಹೊಣೆ ಮಾಡುವುದಿಲ್ಲ, ಯಾವುದೇ ಅಧಿಕಾರಿಗಳನ್ನೂ ಹೊಣೆಗಾರರಾಗಿ ಮಾಡುವುದಿಲ್ಲವೆಂದು ಹೇಳಿರುವುದಕ್ಕೆ ಏನರ್ಥ? ಎಂದರು.

ಪ್ರಕರಣನ್ನು ಗಂಭೀರವಾಗಿ ಪರಿಗಣಿಸಬೇಕು, ರೈತರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು. ಎರಡು ವರ್ಷದ ಬಳಿಕ ಜಲಾಶಯ ತುಂಬಿ, ಈ ವರ್ಷ ಎರಡು ಬೆಳೆ ಬರುತ್ತದೆ ಎನ್ನುವಾಗ ದುರಂತ ನಡೆದು ನೀರು ಖಾಲಿ ಮಾಡುವಂತಾಗಿದೆ. ಇದರಿಂದ ರೈತರ ಪಾಡು ಹೇಳತೀರದಾಗಿದೆ. ಇದನ್ನು ಹೇಳಲು, ಸಲಹೆ ನೀಡಲು ಬಿಜೆಪಿ ನಾಯಕರು ಇಲ್ಲಿಗೆ ಬರುತ್ತಿದ್ದಾರೆ. ನಾವೇನು ರಾಜಕಾರಣ ಮಾಡಲು ಬಂದಿಲ್ಲ ಎಂದು ಶಿವರಾಜ ತಂಗಡಗಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀರಿನ ಸಮಸ್ಯೆಯಿಂದಾಗಿ ರೈತರಿಗೆ ಆಗುವ ಹಾನಿಯ ಹೊಣೆ ಹೊತ್ತು ಸರ್ಕಾರ ಅವರಿಗೆ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ವಿಪ ಸದಸ್ಯೆ ಹೇಮಲತಾ ನಾಯಕ, ಡಾ. ಬಸವರಾಜ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸ್ಗೂರು ಇತರರು ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ