;Resize=(412,232))
ಬೆಂಗಳೂರು : ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಬದಲಾಗಿ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ (ವಿಬಿ ಜಿ ರಾಮ್ ಜಿ) ಜಾರಿ ತಂದಿರುವ ವಿರುದ್ಧ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸೂಚನೆ ಮೇರೆಗೆ ವಿಬಿ-ಜಿ ರಾಮ್ ಜಿ ಕುರಿತು ಚರ್ಚಿಸಲು ಶುಕ್ರವಾರ ಸಚಿವ ಸಂಪುಟ ಸಭೆಗೆ ವಿಷಯ ಮಂಡಿಸಲಾಗುತ್ತಿದೆ. ಸಂಪುಟ ಸಭೆಯಲ್ಲಿ, ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಯಿಂದಾಗುವ ಸಮಸ್ಯೆಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ವಿಬಿ ಜಿ ರಾಮ್ ಜಿ ಕಾಯ್ದೆ ತರುವುದಕ್ಕೂ ಮುನ್ನ ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದಿಲ್ಲ. ರಾಜ್ಯ ಸರ್ಕಾರಗಳು ಭರಿಸುವ ಹಣದ ಪಾಲು ಹೆಚ್ಚಿಸಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರ ಶೇ.10 ಹಣ ಭರಿಸುತ್ತಿತ್ತು. ಈಗ ಅದನ್ನು 60:40ರ ಅನುಪಾತಕ್ಕೆ ಬದಲಿಸಲಾಗಿದೆ. ರಾಜ್ಯಗಳ ಪಾಲು ಹೆಚ್ಚಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆಯಾಗಬೇಕಿತ್ತು. ಹಾಗೆಯೇ, ವಿಬಿ ಜಿ ರಾಮ್ ಜಿ ಕಾಯ್ದೆ ಉದ್ಯೋಗ ಕಡಿತ ಮಾಡಲಿದೆ. ಹೀಗಾಗಿ ಈ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮನರೇಗಾ ಕಾಯ್ದೆ ಬದಲಾಗಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ಮುಂದಾಗಿನಿಂದಲೂ ರಾಜ್ಯ ಸರ್ಕಾರ ಅದನ್ನು ವಿರೋಧಿಸುತ್ತಿದೆ. ಇದಕ್ಕೆ ಸಂಬಂಧಿಸಿ ಕಳೆದೆರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವಿಬಿ-ಜಿ ರಾಮ್ ಜಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ನೂತನ ಕಾಯ್ದೆ ಗ್ರಾಮೀಣ ಭಾಗದ ಉದ್ಯೋಗ ಖಾತ್ರಿ ಉದ್ದೇಶಕ್ಕೆ ಹೊಡೆತ ನೀಡುವುದಲ್ಲದೆ, ರಾಜ್ಯ ಸರ್ಕಾರ ಮೇಲೆ ಆರ್ಥಿಕ ಹೊರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ವಿಬಿ-ಜಿ ರಾಮ್ ಜಿ ಜಾರಿ ಮಾಡದಂತೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಸ್ಪಷ್ಟ ಬಳಕೆಗೆ ನೀತಿ ರೂಪಿಸಲಾಗಿದ್ದು, ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನೂತನ ನೀತಿಗೆ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ.
ರಾಜ್ಯದ ಶಾಲೆಗಳ ಅಭಿವೃದ್ಧಿಗಾಗಿ ಸಿಎಸ್‌ಆರ್ ನಿಧಿ ಬಳಕೆಗೆ ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಅದಕ್ಕಾಗಿ ಸಿಎಸ್‌ಆರ್ ನಿಧಿ ಮೂಲಕ ಶಾಲೆಗಳ ಅಭಿವೃದ್ಧಿ ಮಾಡುವಂತೆ ಕಾರ್ಪೋರೆಟ್ ಸಂಸ್ಥೆಗಳಿಗೂ ಸೂಚಿಸಲಾಗಿದೆ. ಆದರೆ, ಸಿಎಸ್‌ಆರ್ ನಿಧಿ ಬಳಕೆ ಕುರಿತು ಸ್ಪಷ್ಟ ನೀತಿಯಿರಲಿಲ್ಲ. ಹೀಗಾಗಿ ಸಿಎಸ್‌ಆರ್ ನಿಧಿಯನ್ನು ಯಾವ ರೀತಿ ಬಳಸಬೇಕು, ಶಾಲೆಗಳ ಅಭಿವೃದ್ಧಿಯಲ್ಲಿ ಯಾವೆಲ್ಲ ಅಂಶಗಳಿರಬೇಕು ಎಂಬುದೂ ಸೇರಿ ಹಲವು ಅಂಶಗಳನ್ನೊಳಗೊಂಡ ಸಮುದಾಯ ಮತ್ತು ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ ನೀತಿ (ಸಿಸಿಎಸ್‌ಆರ್ ಪಾಲಿಸಿ) ರೂಪಿಸಲಾಗಿದೆ. ಈ ನೀತಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.
ಸದ್ಯ ಸಿಎಸ್‌ಆರ್ ನಿಧಿ ಬಳಕೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲ ಕಾರ್ಪೋರೆಟ್ ಸಂಸ್ಥೆಗಳು ಸರ್ಕಾರಕ್ಕೆ ಸಿಎಸ್‌ಆರ್ ನಿಧಿ ನೀಡಿ ಸರ್ಕಾರದ ಮೂಲಕವೇ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ಇನ್ನು ಕೆಲ ಕಾರ್ಪೋರೇಟ್ ಸಂಸ್ಥೆಗಳು ಸರ್ಕಾರ ಅಥವಾ ಶಿಕ್ಷಣ ಇಲಾಖೆ ಗಮನಕ್ಕೆ ತರದೇ ನೇರವಾಗಿ ಶಾಲೆಗಳ ಅಭಿವೃದ್ಧಿ ಮಾಡುತ್ತಿವೆ. ಇದರಿಂದ ಸಾಕಷ್ಟು ಗೊಂದಲಗಳುಂಟಾಗುತ್ತಿವೆ. ಹೀಗಾಗಿ ಶಾಲೆಗಳ ಅಭಿವೃದ್ಧಿ ಯಾವ ರೀತಿಯಲ್ಲಿರಬೇಕು, ಶಾಲೆ ಅಭಿವೃದ್ಧಿಗೆ ಬರುವ ಕಾರ್ಪೋರೆಟ್ ಸಂಸ್ಥೆಗಳು ಶಿಕ್ಷಣ ಇಲಾಖೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂಬಂತಹ ಅಂಶಗಳು ಸಿಸಿಎಸ್‌ಆರ್ ನೀತಿಯಲ್ಲಿವೆ.
ತಕರಾರು ಏನು?
- ಜಿ ರಾಮ್ ಜಿ ಕಾಯ್ದೆ ಜಾರಿಗೆ ಮುನ್ನ ಕೇಂದ್ರ ಸರ್ಕಾರ ರಾಜ್ಯಗಳಿಂದ ಅಭಿಪ್ರಾಯ ಪಡೆದಿಲ್ಲ
- ನರೇಗಾ ಯೋಜನೆಗೆ ಕೇಂದ್ರ ಶೇ.90, ರಾಜ್ಯಗಳು ಶೇ.10ರಷ್ಟು ಹಣವನ್ನು ಭರಿಸುತ್ತಿದ್ದವು
- ಈಗ ಆ ವೆಚ್ಚದ ಮೊತ್ತವನ್ನು 60:40 (ಕೇಂದ್ರ: ರಾಜ್ಯ) ಅನುಪಾತದಡಿ ಹೆಚ್ಚಳ ಮಾಡಲಾಗಿದೆ
- ರಾಜ್ಯಗಳ ಪಾಲು ಹೆಚ್ಚಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಿಯೇ ಇಲ್ಲ
- ಜಿ ರಾಮ್ ಜಿ ಯೋಜನೆ ಜಾರಿಯಿಂದ ಉದ್ಯೋಗ ಕಡಿತವಾಗಲಿದೆ. ಹೀಗಾಗಿ ಹಿಂಪಡೆಯಬೇಕು