ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?

Published : May 08, 2026, 08:35 AM IST
 Mallikarjun kharge

ಸಾರಾಂಶ

ದಶಕದ ಬಳಿಕ ಕೇರಳಂನಲ್ಲಿ ಯುಡಿಎಫ್‌ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಬಹುಮತ ಪಡೆದಿದ್ದರೂ, ಆ ಕೂಟದ ನೇತೃತ್ವ ಹೊತ್ತಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಷಯ ಕಗ್ಗಂಟಾಗಿದೆ.

 ತಿರುವನಂತಪುರಂ: ದಶಕದ ಬಳಿಕ ಕೇರಳಂನಲ್ಲಿ ಯುಡಿಎಫ್‌ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಬಹುಮತ ಪಡೆದಿದ್ದರೂ, ಆ ಕೂಟದ ನೇತೃತ್ವ ಹೊತ್ತಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಷಯ ಕಗ್ಗಂಟಾಗಿದೆ. ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಗಾಗಿ ಗುರುವಾರ ನಡೆದ ಸಭೆಯ ವೇಳೆ ಕಾಂಗ್ರೆಸ್‌ನ 63 ಶಾಸಕರ ಪೈಕಿ ಕನಿಷ್ಠ 46 ಮಂದಿ ವಿಧಾನಸಭೆಯ ಸದಸ್ಯರೇ ಅಲ್ಲದ ಹಾಲಿ ಸಂಸದ, ರಾಹುಲ್‌ ಗಾಂಧಿ ಅವರ ಆಪ್ತ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಪರ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆ ಸಹಜವಾಗಿಯೇ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ, ಹಿಂದಿನ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ವಿ.ಡಿ. ಸತೀಶನ್‌ ಮತ್ತು ಪಕ್ಷದ ಹಿರಿಯ ನಾಯಕ ರಮೇಶ್‌ ಚೆನ್ನಿತ್ತಲ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲು ಸಭೆ ನಿರ್ಣಯ ಕೈಗೊಂಡಿದೆ.

ವೇಣು ಪರ ಬ್ಯಾಟಿಂಗ್‌:

ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್‌ ನೇತೃತ್ವದಲ್ಲಿ ನಡೆದ ಸಭೆ ವೇಳೆ ಬಹುತೇಕ ಶಾಸಕರು ವೇಣುಗೋಪಾಲ್‌ ಮುಖ್ಯಮಂತ್ರಿಯಾಗುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟ ಉಳಿದಿಬ್ಬರು ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.

ಈ ಬಾರಿ ಚುನಾವಣೆಯಲ್ಲಿ ಸಂಸದರನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪಕ್ಷ ಮೊದಲೇ ನಿರ್ಧರಿಸಿತ್ತು. ಜೊತೆಗೆ ವೇಣುಗೋಪಾಲ್‌ ಶಾಸಕ ಕೂಡ ಅಲ್ಲ. ಹೀಗಾಗಿ ಅವರ ಆಯ್ಕೆ ಸೂಕ್ತವಲ್ಲ. ಜೊತೆಗೆ ರಾಜ್ಯದ ಹಲವು ಕಡೆ ವೇಣುಗೋಪಾಲ್‌ ಅವರು ಕೂಡ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದು ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಮುನ್ನುಡಿ ಬರೆಯುತ್ತದೆ. ಇದಕ್ಕೆ ಕೂಡಲೇ ತಡೆ ಹಾಕಬೇಕು ಎಂದು ಚೆನ್ನಿತ್ತಲ ಹಾಗೂ ಸತೀಶನ್‌ ನೇರವಾಗಿ ವೀಕ್ಷಕರ ಬಳಿ ಧ್ವನಿ ಎತ್ತಿದ್ದಾರೆ ಎನ್ನಾಗಿದೆ.

ವೇಣು ಏಕೆ?:

ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಮೈತ್ರಿಕೂಟದ ನಡುವೆ ಹೊಂದಾಣಿಕೆ ಏರ್ಪಡಿಸುವಲ್ಲಿ ವೇಣು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಎಲ್‌ಡಿಎಫ್‌ ಕೂಟದ ಅಭ್ಯರ್ಥಿಗಳ ಸೆಳೆದು ಕಾಂಗ್ರೆಸ್‌ ಬಲ ಹೆಚ್ಚಿಸಿದ್ದು ವೇಣುಗೋಪಾಲ್‌ ಪರ ಬಹುತೇಕ ಶಾಸಕರು ಒಲವು ತೋರಲು ಕಾರಣವಾಗಿದೆ. ಜೊತೆಗೆ ಹೈಕಮಾಂಡ್‌ ಬೆಂಬಲವೂ ಇದೆ. ಜೊತೆಗೆ ಮೈತ್ರಿಕೂಟ ಸರ್ಕಾರ ನಡೆಸಲು ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರ ಅಗತ್ಯವಿದೆ ಎನ್ನುವ ಅಂಶವೂ ವೇಣುಗೋಪಾಲ್‌ ಪರವಾಗಿದೆ.

ಸತೀಶನ್‌ಗೆ ಜಾತಿ ಸಂಘ ವಿರೋಧ:

ಸತೀಶನ್‌ ಕಳೆದ 5 ವರ್ಷಗಳಿಂದ ವಿಪಕ್ಷ ನಾಯಕನಾಗಿ ವಿಪಕ್ಷ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಬರಿಮಲೆ ವಿಷಯದಲ್ಲಿ ಕೇರಳದ ಪ್ರಭಾವಿ ನಾಯರ್‌ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರ ಆಯ್ಕೆ ಬಗ್ಗೆ ಪಕ್ಷದ ಶಾಸಕರಲ್ಲೇ ವಿರೋಧವಿದೆ ಎನ್ನಲಾಗಿದೆ.

ಚೆನ್ನಿತ್ತಲಗೆ ಬೆಂಬಲವಿಲ್ಲ:

ಪಕ್ಷದ ಹಿರಿಯ ನಾಯಕ. 4 ಬಾರಿ ಸಂಸದರಾದ ಹಿನ್ನೆಲೆ ಹೊಂದಿದ್ದಾರೆ. ಸಂಘಟನಾ ಚತುರ ಎಂಬ ಹಿರಿಮೆ ಇದೆ. ಆದರೆ ಈಗಾಗಲೇ 69 ವರ್ಷ ತುಂಬಿರುವ ನಾಯಕನ ಆಯ್ಕೆಗೆ ಪಕ್ಷದ ಶಾಸಕರು ಒಲವು ತೋರಿಲ್ಲ ಎಂದು ಹೇಳಲಾಗಿದೆ.

- 10 ವರ್ಷಗಳ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ಕೇರಳಂನಲ್ಲಿ ಭರ್ಜರಿ ಬಹುಮತ

- 140 ಸ್ಥಾನಗಳ ಪೈಕಿ 102 ಸೀಟು ಗೆದ್ದಿರುವ ಯುಡಿಎಫ್‌. ಈ ಪೈಕಿ ಕಾಂಗ್ರೆಸ್ಸಿನ ಬಲವೇ 63

- ಮುಖ್ಯಮಂತ್ರಿ ಆಯ್ಕೆಗೆ ಎಐಸಿಸಿ ವೀಕ್ಷಕರಿಂದ ರಾಜಧಾನಿ ತಿರುವನಂತಪುರದಲ್ಲಿ ಸಭೆ

- ಕನಿಷ್ಠ 46 ಮಂದಿ ಶಾಸಕರಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣು ಪರ ಬೆಂಬಲ

- ಸಂಸದರಾಗಿರುವ ವೇಣು ಶಾಸಕರಲ್ಲ, ಹೀಗಾಗಿ ಇತರೆ ಆಕ್ಷಾಂಕ್ಷಿಗಳಿಂದ ತೀವ್ರ ವಿರೋಧ

- ಪಿಣರಾಯಿ ಸರ್ಕಾರದ ವಿರುದ್ಧ ಹೋರಾಡಿದ್ದ ವಿಪಕ್ಷ ನಾಯಕ ಸತೀಶನ್‌ ಮುಂಚೂಣಿಯಲ್ಲಿ

- ಆದರೆ ಜಾತಿ ಸಂಘಟನೆಗಳ ವಿರೋಧ ಮುಳುವು. ಮತ್ತೊಂದೆಡೆ ರಮೇಶ್‌ ಚೆನ್ನಿತ್ತಲ ರೇಸಲ್ಲಿ

- ಅವರಿಗೆ ಹೆಚ್ಚು ಶಾಸಕರ ಬೆಂಬಲವಿಲ್ಲ. ಹೀಗಾಗಿ ಯಾರಿಗೆ ಪಟ್ಟ? ನಿರ್ಧಾರ ಖರ್ಗೆ ಹೆಗಲಿಗೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮತ್ತೆ ಕೇಂದ್ರ ವರ್ಸಸ್‌ ರಾಜ್ಯ ಜಿ ರಾಮ್‌ ಜಿ ವಿರುದ್ಧ ಕೋರ್ಟ್‌ಗೆ ಮೊರೆ
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!