;Resize=(412,232))
ತ್ರಿಶ್ಶೂರು (ಕೇರಳ): ಆರೆಸ್ಸೆಸ್ ಅನ್ನು ನೋಂದಣಿ ಮಾಡಿಸಬೇಕು ಎಂದಿರುವ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಂಘದ ಮುಖ್ಯಸ್ಥ ಮೋಹನ ಭಾಗವತ್ ತಿರುಗೇಟು ನೀಡಿದ್ದು, ‘ಆರ್‌ಎಸ್‌ಎಸ್ ತನ್ನ ಲಿಖಿತ ಸಂವಿಧಾನವನ್ನು 1950ರ ದಶಕದಲ್ಲೇ ಸರ್ಕಾರಕ್ಕೆ ಸಲ್ಲಿಸಿದೆ. ಅದರ ನೋಂದಣಿ ಕಡ್ಡಾಯವಾಗಿದ್ದರೆ, ಸರ್ಕಾರ ಆಗಲೇ ಕೇಳುತ್ತಿತ್ತು. ಅಲ್ಲದೆ, ಹಿಂದೂ ಧರ್ಮವೂ ನೋಂದಣಿಯಾಗಿಲ್ಲ. ಸರ್ಕಾರದ ಅನುದಾನ ಅಗತ್ಯವಿರುವವರಿಗೆ ಮಾತ್ರ ನೋಂದಣಿ ಬೇಕಾಗುತ್ತದೆ’ ಎಂದರು.
ಕೇರಳದ ತ್ರಿಶ್ಶೂರಿನಲ್ಲಿ ಮಾತನಾಡಿದ ಭಾಗವತ್, ‘ನೋಂದಣಿಯಾಗದ ಹಲವು ಸಂಗತಿಗಳಿವೆ. ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ. ಸರ್ಕಾರಿ ಅನುದಾನ ಪಡೆಯಲು ಬಯಸುವವರಿಗೆ ನೋಂದಣಿ ಬೇಕಾಗುತ್ತದೆ. ನಾವು ತೆರೆದ ಮೈದಾನದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಸ್ವಯಂಸೇವಕರು ಜನರ ನಡುವೆ ವಾಸಿಸುತ್ತಾರೆ. ನಮ್ಮ ಕಾರ್ಯಕ್ರಮಗಳು ಎಲ್ಲರಿಗೂ ಗೋಚರಿಸುತ್ತವೆ. ನಾವು ರಹಸ್ಯವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಆರ್‌ಎಸ್‌ಎಸ್ 1950ರ ದಶಕದಲ್ಲಿ ತನ್ನ ಲಿಖಿತ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆಗ ಯಾರೂ ಸಂಘದ ನೋಂದಣಿಯನ್ನು ಒತ್ತಾಯಿಸಿಲ್ಲ. ನೋಂದಣಿ ಅಗತ್ಯವಿದ್ದರೆ, ಸರ್ಕಾರ ಆಗಲೇ ಕೇಳುತ್ತಿತ್ತು’ ಎಂದು ತಿರುಗೇಟು ನೀಡಿದರು.
ಅಲ್ಲದೆ, ‘ಆರೆಸ್ಸೆಸ್ ನೋಂದಣಿಗೆ ಕೂಗು ಇದು ಮೊದಲೇನಲ್ಲ. ಆರೆಸ್ಸೆಸ್ ಸ್ಥಾಪನೆಯಾದ 10-15 ವರ್ಷ ಬಳಿಕವೂ ಇದು ನಡೆದಿತ್ತು. ಇದು ಕೇವಲ ಗಿಮಿಕ್ ಹಾಗೂ ರಾಜಕೀಯ ಮಾತ್ರ. ಪದೇ ಪದೇ ಈ ವಿಚಾರ ಕೆದಕುವುದು ಕೆಲವರಿಗೆ ಖಯಾಲಿ’ ಎಂದು ಅವರು ಕುಟುಕಿದರು.
‘2 ಸಲ ನಮ್ಮನ್ನು ನಿಷೇಧಿಸಲಾಗಿತ್ತು. ಒಮ್ಮೆ ಕೋರ್ಟ್ ಆದೇಶ, ಇನ್ನೊಮ್ಮೆ ಸತ್ಯಾಗ್ರಹದ ಬಳಿಕ ತೆರವು ಮಾಡಲಾಯಿತು. ನಮ್ಮದು ಬಲವಾದ ಸಂಘಟನೆ ಎಂಬುದು ಇದರ ಅರ್ಥ’ ಎಂದು ಸೂಚ್ಯವಾಗಿ ನುಡಿದರು.
ಜೂ.13ರಂದು ಭಾಗ್ವತ್‌ಗೆ ಪತ್ರ ಬರೆದಿದ್ದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ನ ಆದಾಯದ ಮೂಲ, ತೆರಿಗೆ, ಕಚೇರಿ ನಿರ್ವಹಣೆ ಹಾಗೂ ಸಂಘಟನೆಯ ಸ್ವರೂಪವನ್ನು ಬಹಿರಂಗಪಡಿಸುವಂತೆ ಕೋರಿದ್ದರು. ಜತೆಗೆ, ಸಂಘಟನೆ ನೋಂದಣಿ ಮಾಡಿಕೊಂಡಿಲ್ಲ ಎಂದು ಆಕ್ಷೇಪಿಸಿದ್ದರು.
ನಮ್ಮ ಲಿಖಿತ ಸಂವಿಧಾನವನ್ನು ನಾವು 1950ರ ದಶಕದಲ್ಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ
ನೋಂದಣಿ ಕಡ್ಡಾಯ ಆಗಿದ್ದರೆ ಆಗಲೇ ಸರ್ಕಾರ ನಮ್ಮನ್ನು ಕೇಳಿತ್ತು, ಆದರೆ ಕೇಳಿಲ್ಲ
ಸರ್ಕಾರದ ಅನುದಾನ ಅಗತ್ಯವಿರುವವರು ಮಾತ್ರ ನೋಂದಣಿ ಮಾಡಬೇಕಾಗುತ್ತದೆ
ನೋಂದಣಿ ಆಗದ ಹಲವು ಸಂಗತಿಗಳಿವೆ. ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ
ನೋಂದಣಿ ಕುರಿತಾದ ಬೇಡಿಕೆ ಕೇವಲ ಗಿಮಿಕ್ ಹಾಗೂ ರಾಜಕೀಯ ಮಾತ್ರ ಅಷ್ಟೇ
ಪದೇ ಪದೇ ಈ ವಿಚಾರ ಕೆದಕುವುದು ಕೆಲವರಿಗೆ ಖಯಾಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್