ಸ್ಥಗಿತ ಗೊಳಿಸಿರುವ ಅನುದಾನವನ್ನು ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಚಿಕ್ಕಬಳ್ಳಾಪುರ : ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನುದಾನ ಬಿಡುಗಡೆಯನ್ನು ಬಹುತೇಕ ಸ್ಥಗಿತಗೊಳಿಸಿದೆ. ಸ್ಥಗಿತ ಗೊಳಿಸಿರುವ ಅನುದಾನವನ್ನು ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ಸ್ಥಗಿತಗೊಳಿಸಿದೆ. ನೆಪ ಮಾತ್ರಕ್ಕೆ ಎನ್ನುವಂತೆ ಬಜೆಟ್ ನಲ್ಲಿ ಘೋಷಿಸುವ ಮೊತ್ತಕ್ಕೂ, ವಾಸ್ತವವಾಗಿ ಬಿಡುಗಡೆ ಮಾಡುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಹಲವು ಯೋಜನೆಗಳು ಸ್ಥಗಿತ
ಇದರಿಂದ ಹಿಂದುಳಿದ ಹಾಗೂ ಅತೀ ಹಿಂದುಳಿದ ಹಾಗೂ ಅಲೆಮಾರಿ ಸಮುದಾಯಗಳು ಹಾಗೂ ಇತರೆ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಈ ಹಿಂದಿನ ಸರ್ಕಾರದಲ್ಲಿ ಪಡೆಯುತ್ತಿದ್ದ ಸ್ವ-ಉದ್ಯೋಗ ಯೋಜನೆ, ವಿದ್ಯಾರ್ಥಿ ಅರಿವು ಯೋಜನೆ ಹಾಗೂ ಸಣ್ಣ ಹಿಡುವಳಿದಾರ ರೈತರ ಗಂಗಾ ಕಲ್ಯಾ ಣ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗುತ್ತಿದ್ದ ಉಚಿತ ಬೋರ್ ವೆಲ್ ಯೋಜನೆ ಬಹುತೇಕ ಸ್ಥಗಿತಗೊಂಡಿದ್ದು, ತಮ್ಮ ಪಂಚ ಭಾಗ್ಯ ಯೋಜನೆಯ ಅನುಷ್ಠಾಕ್ಕಾಗಿ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ವಿನಿಯೋಗವಾಗಬೇಕಿದ್ದ ಹಣವೆಲ್ಲವೂ ವರ್ಗಾವಣೆಯಾಗುತ್ತಿದೆ ಎಂದು ಆರೋಪಿಸಿದರು.
ಕೇವಲ ₹170 ಕೋಟಿ ಅನುದಾನ
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮುರಳೀಧರ ಮಾತನಾಡಿ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್ ನಲ್ಲಿ ಘೋಷಿಸಿದಂತೆ 546 ಕೋಟಿ ರು.ಗಳ ಅನುದಾನ ಬಿಡುಗಡೆಯಾದರೆ, 2023 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ನಿಗಮಗಳಿಗೆ ಒಟ್ಟಾರೆಯಾಗಿ ಬಿಡುಗಡೆ ಮಾಡಿದ್ದು ಕೇವಲ 170 ಕೋಟಿ ರು. ಡಿ. ದೇವರಾಜ ಅರಸು ಹಿಂದುಳಿದ ಅಭಿವೃವೃದ್ದಿ ನಿಗಮಕ್ಕೆ ರೂ. 50.00 ಕೋಟಿ, ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 6.50 ಕೋಟಿ ರು. ನೀಡಿದೆ.
ನಿಗಮಗಳಿಗೆ ನೀಡಿದ ಅನುದಾನ
ನಿಜಶರಣ ಅಂಭಿಗರ ಚೌಡಯ್ಯ ನಿಗಮಕ್ಕೆ 4.50 ಕೋಟಿ ರು., ಕರ್ನಾಟಕ ಸವಿತಾ ಸಮಾಜ ಅಭಿವೃಧ್ದಿ ನಿಗಮಕ್ಕೆ 2.50 ಕೋಟಿ ರು., ಕರ್ನಾಟಕ ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 6.00 ಕೋಟಿ ರು.,ಕರ್ನಾಟಕ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮಕ್ಕೆ 4.50 ಕೋಟಿ ರು. ಕರ್ನಾಟಕ ಕಾಡುಗೊಲ್ಲ ಅಭಿವೃದ್ದಿ ನಿಗಮಕ್ಕೆ 7.50 ಕೋಟಿ ರು.,ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 30.00 ಕೋಟಿ ರು., ಕರ್ನಾಟಕ ಕಾಡುಗೊಲ್ಲಮರಾಠ ಅಭಿವೃದ್ಧಿ ನಿಗಮಕ್ಕೆ: 25.00 ಕೋಟಿ ರು. ಬಿಡುಗಡೆ ಮಾಡಿದೆ.2024-25 ರಲ್ಲಿ ರೂ. 1600 ಬಿಡುಗಡೆ ಮಾಡಲಾಗುವುದೆಂದು ಬಜೆಟ್‌ನಲ್ಲಿ ಘೋಷಣೆ ಮಾಡಿ, ಕೇವಲ 347 ಕೋಟಿ ರು. ಗಳ ಅನುದಾನವನ್ನು ಮಾತ್ರ ಬಿಡುಗಡೆಮಾಡಿದೆ ಎಂದರು.
ಅಪರ ಡೀಸಿಗೆ ಮನವಿ ಸಲ್ಲಿಕೆ
ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನೇಯ ಗೌಡ, ಉಪಾಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪತಿ, ಕಾರ್ಯಕಾರಿಣಿ ಸದಸ್ಯ ಕೆ.ಆರ್ ಆಂಜನಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ, ಮುಖಂಡರಾದ ಸುರೇಂದ್ರ ಗೌಡ, ಸುಮತಿ, ಪ್ರತಾಪ್, ವೇಣು, ಶಿವಕುಮಾರ್, ವಾಸು, ನಾಗೇಶ್ ಇದ್ದರು.