;Resize=(412,232))
ಬೆಂಗಳೂರು : ಬೆಂಗಳೂರು ನಗರದಲ್ಲಿ ಐಟಿ-ಬಿಟಿಗೆ ನಾಂದಿ ಹಾಡಿ ನಗರಕ್ಕೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿದ ಹೆಗ್ಗಳಿಕೆ ರೈತನ ಮಗ ಎಚ್.ಡಿ. ದೇವೇಗೌಡ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಹೊರವಲಯದ ಕೊಮ್ಮಘಟ್ಟ ನೈಸ್ ಮೈದಾನದಲ್ಲಿ ಶನಿವಾರ ನಡೆದ ಜೆಡಿಎಸ್ ಜನತಾ ಸಮಾವೇಶ- ಬೆಳ್ಳಿಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ದೇವೇಗೌಡರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸುಸಜ್ಜಿತ ಫ್ಲೈ ಓವರ್ ಗಳ ಯುಗ ಆರಂಭವಾಗಿದ್ದೇ ದೇವೇಗೌಡರಿಂದ. ನನ್ನ ಕಾಲದಲ್ಲೂ ಬೆಂಗಳೂರು ಭಾರೀ ಮುನ್ನಡೆಯನ್ನು ಕಂಡಿತ್ತು. ಇವತ್ತು ನಗರದ ಸಾಮೂಹಿಕ ಸಂಚಾರಕ್ಕೆ ಅತ್ಯಂತ ಸುಲಭ ಮಾರ್ಗವಾಗಿರುವ ಮೆಟ್ರೋ ವ್ಯವಸ್ಥೆಗೆ ಚಾಲನೆ ಕೊಟ್ಟಿದ್ದೆ ನಾನು ಎಂಬುದನ್ನು ಜನ ಮರೆತಿಲ್ಲ ಎಂದು ನಂಬಿದ್ದೇನೆ ಎಂದರು.
ಬೆಂಗಳೂರು ನಗರದಲ್ಲಿ ಎಲ್ಲಿ ನೋಡಿದರೂ ಕಸ ಕಣ್ಣಿಗೆ ರಾಚುತ್ತದೆ. ಕಸ ಎತ್ತಲು ಸಮಸ್ಯೆ ಏನಿದೆ? ವೈಜ್ಞಾನಿಕವಾಗಿ ಕಸ ವಿಲೇವಾರಿ ವ್ಯವಸ್ಥೆ ಮಾಡುವುದಕ್ಕೆ ನಿಮಗೆ ಏನು ತೊಂದರೆ? ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜಧಾನಿಯಲ್ಲಿ ಕಸದ ಸಮಸ್ಯೆ ಎನ್ನುವುದೇ ಇರಲಿಲ್ಲ. ದೇಶದಲ್ಲಿಯೇ ಬೆಂಗಳೂರು ಅತ್ಯಂತ ಸುಂದರ ನಗರವಾಗಿತ್ತು. ಕರ್ನಾಟಕಕ್ಕೆ ನೀವು ಈಗ ಗ್ರಹಣ ಹಿಡಿಸಿದ್ದೀರಿ, ಆ ಗ್ರಹಣ ಬಿಡಿಸುವ ದಿನಗಳು ಹತ್ತಿರದಲ್ಲೇ ಇವೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರ ಅಭಿವೃದ್ಧಿಗೆ ದೂರದೃಷ್ಟಿ ಮತ್ತು ಪಾರದರ್ಶಕ ಆಡಳಿತದ ಅಗತ್ಯವಿದೆ. ಇವರೆಲ್ಲ ಈಗ ಸುರಂಗ ಮಾರ್ಗ ಎಂದು ಈಗ ಜಪ ಮಾಡುತ್ತಿದ್ದಾರೆ. ಆದರೆ ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ನಗರಕ್ಕೆ ಸುರಂಗ ಮಾರ್ಗ ತರುವ ಚಿಂತನೆ ಮಾಡಿದ್ದೇ. ನನ್ನ ಕಾಲದಲ್ಲಿ ಔಟರ್ ಪೇರಿಫೆರಲ್ ರಸ್ತೆಗೆ ನಿರ್ಧಾರ ಮಾಡಲಾಗಿತ್ತು, ಈಗ ಈ ಸರ್ಕಾರವು ಅದೇ ಯೋಜನೆಗೆ 29 ಸಾವಿರ ಕೋಟಿ ರು. ವೆಚ್ಚ ಆಗುತ್ತದೆ ಎಂದು ಹೇಳುತ್ತಿದೆ ಎಂದು ಟೀಕಿಸಿದರು.
ಬೆಂಗಳೂರಿನ ಜನ ಈಗ ಕೆಂಡದಂತ ಬೇಸಿಗೆ ನೋಡುತ್ತಿದ್ದಾರೆ. ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರ ಅಗಾಧವಾಗಿ ಬೆಳೆಯುತ್ತಿದೆ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಈ ಸರ್ಕಾರ ವಿಫಲವಾಗಿದೆ. ದೇವೇಗೌಡರು ತಾವು ಪ್ರಧಾನಿಯಾಗಿದ್ದಾಗಲೇ ನಗರದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಮುಂದಿನ ವರ್ಷಗಳಲ್ಲಿ ಬೆಂಗಳೂರು ಹೇಗೆ ಬೆಳೆಯುತ್ತದೆ ಎಂದು ಯೋಚಿಸಿ ಕಾವೇರಿ ನೀರನ್ನು ನಗರಕ್ಕೆ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನ ಜನ ಈ ಸಾಧನೆಯನ್ನು ಮರೆಯಬಾರದು ಎಂದು ಹೇಳಿದರು.
ಶಾಸಕ ಎಸ್‌ಟಿಎಸ್ ಬಗ್ಗೆ ಎಚ್‌ಡಿಕೆ ಕಿಡಿ:
ಈ ಭಾಗದ ಶಾಸಕ ತನ್ನ ರಾಜಕೀಯಕ್ಕೆ ಯಾವ ಪಕ್ಷವಾದರೇನು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಬೇಕಿದ್ದರೆ ನಾನು ಕಾಂಗ್ರೆಸ್ ನಿಂದ ಬೇಕಾದರೂ ನಿಲ್ಲುತ್ತೇನೆ ಅಥವಾ ಬಿಜೆಪಿಯಿಂದ ಬೇಕಾದರೂ ನಿಲ್ಲುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಆ ವ್ಯಕ್ತಿ ಜೆಡಿಎಸ್ ಹೆಸರನ್ನು ಮಾತ್ರ ಹೇಳುತ್ತಿಲ್ಲ. ಅವರಿಗೆ ಗೊತ್ತಿರಲಿ, ಜೆಡಿಎಸ್ ಮಾರಾಟದ ಪಕ್ಷವಲ್ಲ. ಹಾಲಿ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡರು ನಾಲ್ಕು ಬಾರಿ ಸೋತಿದ್ದಾರೆ. ಕೆಲವರಿಂದ ಅವರಿಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ನಾನು ಮಾಡಿದ್ದೇನೆ ಎಂದು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹೆಸರು ಪ್ರಸ್ತಾಪಿಸದೆ ಕುಮಾರಸ್ವಾಮಿ ಕಿಡಿಕಾರಿದರು.