ಬೆಂಗಳೂರು ನಗರದಲ್ಲಿ ಜೆಡಿಎಸ್‌ ಭರ್ಜರಿ ಶಕ್ತಿ ಪ್ರದರ್ಶನ

KannadaprabhaNewsNetwork |  
Published : Apr 12, 2026, 02:00 AM ISTUpdated : Apr 12, 2026, 04:58 AM IST
JDS

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪಂಚ ನಗರ ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ನಗರದ ಹೊರವಲಯದ ಕೊಮ್ಮಘಟ್ಟದ ನೈಸ್‌ ಮೈದಾನದಲ್ಲಿ ಶನಿವಾರ ಬೃಹತ್‌ ಜನತಾ ಸಮಾವೇಶ ಮತ್ತು ಪಕ್ಷದ ಬೆಳ್ಳಿ ಹಬ್ಬ ಆಚರಿಸುವ ಮುಖಾಂತರ ಶಕ್ತಿ ಪ್ರದರ್ಶಿಸಲಾಯಿತು.

  ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪಂಚ ನಗರ ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ನಗರದ ಹೊರವಲಯದ ಕೊಮ್ಮಘಟ್ಟದ ನೈಸ್‌ ಮೈದಾನದಲ್ಲಿ ಶನಿವಾರ ಬೃಹತ್‌ ಜನತಾ ಸಮಾವೇಶ ಮತ್ತು ಪಕ್ಷದ ಬೆಳ್ಳಿ ಹಬ್ಬ ಆಚರಿಸುವ ಮುಖಾಂತರ ಶಕ್ತಿ ಪ್ರದರ್ಶಿಸಲಾಯಿತು.

ಈ ಬೃಹತ್‌ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆ ಬಳಿಕ ಜೆಡಿಎಸ್‌ ಕಥೆ ಮುಗಿದೇ ಬಿಟ್ಟಿತು ಎನ್ನುವ ಕಟು ಟೀಕೆಗಳಿಗೆ ಉತ್ತರವಾಗಿ ಈ ಬೃಹತ್‌ ಸಮಾವೇಶ ಸಂಘಟಿಸುವ ಮುಖಾಂತರ ದಳಪತಿಗಳು ತಿರುಗೇಟು ನೀಡಿದರು.

ಜೆಡಿಎಸ್‌ಗೆ ರಾಜ್ಯದಲ್ಲಿ ಇನ್ನು ಅಸ್ತಿತ್ವವೇ ಇಲ್ಲ ಎಂದು ಕೆಲವರು ಅಪಹಾಸ್ಯ ಮಾಡಿದ್ದರು. ಇದಕ್ಕೆ ಉತ್ತರವಾಗಿ ಹಾಸನ ಮತ್ತು ವಿಜಯಪುರದಲ್ಲಿ ಯಶಸ್ವಿ ಸಮಾವೇಶ ಮಾಡಿದ್ದ ಜೆಡಿಎಸ್‌ ನಾಯಕರು, ಇದೀಗ ರಾಜಧಾನಿಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಬೃಹತ್‌ ಸಮಾವೇಶ ನಡೆಸುವ ಮುಖಾಂತರ ಜೆಡಿಎಸ್‌ ಅಸ್ತಿತ್ವ ಗಟ್ಟಿಯಾಗಿದೆ. ಮುಂಬರುವ ಚುನಾವಣೆಗಳಲ್ಲಿ ಕಠಿಣ ಪೈಪೋಟಿ ನೀಡಲು ನಾವು ಸಿದ್ಧ ಎಂಬ ಸಂದೇಶ ರವಾನಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ:

ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ಕಾರ್ಯಕರ್ತರು ಹಾಗೂ ಹೊರ ವಲಯದ ಹಳ್ಳಿಗಳ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜನತಾ ಸಮಾವೇಶಕ್ಕೆ ಆಗಮಿಸಿದ್ದರು. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಬ್ಬರಿಸಿದ ಜೆಡಿಎಸ್‌ ನಾಯಕರು, ಮುಂಬರುವ ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಮ್ಮ ಶಕ್ತಿ ತೋರಿಸಲು ಈಗಿಂದಲೇ ಸಜ್ಜಾಗುವಂತೆ ಕರೆ ನೀಡಿದರು. ತಮ್ಮ ವ್ಯಾಪ್ತಿಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಜನತಾ ಸಮಾವೇಶ ನಡೆಸುವುದಾಗಿ ತಿಳಿಸಿದರು.

ಪಕ್ಷ ಸಂಘಟನೆಗೆ ಕರೆ:

ರಾಜ್ಯ ಕಾಂಗ್ರೆಸ್‌ ಸರ್ಕಾರ ವೈಫಲ್ಯಗಳ ಬಗ್ಗೆ ಜನತೆಗೆ ತಿಳಿಸಬೇಕು. ಎಚ್‌.ಡಿ.ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತೆಗೆ ಮನದಟ್ಟು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕು. ಬಿಜೆಪಿ ಜೊತೆಗಿನ ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಪಕ್ಷ ಸಂಘಟನೆಗೆ ಒತ್ತು ಕೊಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಲಾಯಿತು.

ಜೆಡಿಎಸ್‌‍ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಗ್ರೇಟರ್‌ ಬೆಂಗಳೂರು ಜೆಡಿಎಸ್‌ ಘಟಕದ ಅಧ್ಯಕ್ಷ ಎಚ್‌.ಎಂ. ರಮೇಶ್‌ಗೌಡ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ವಿವಿಧ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೆಂಗಳೂರು ನಗರಕ್ಕೆ ಜಾಗತಿಕ ಮನ್ನಣೆ ಹೆಗ್ಗಳಿಕೆ ದೇವೇಗೌಡರದ್ದು: ಕುಮಾರಸ್ವಾಮಿ
21ಕ್ಕೆ ಗುಂಡ್ಲುಪೇಟೆಯಲ್ಲಿ ಶಕ್ತಿ ಪ್ರದರ್ಶನ: ಗಣೇಶ್‌ ಪ್ರಸಾದ್‌