;Resize=(412,232))
ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲಿಗೆ ಮತ ಪತ್ರ (ಬ್ಯಾಲೆಟ್ ಪೇಪರ್) ಬಳಕೆ ಕಡ್ಡಾಯಗೊಳಿಸುವ ‘ಕರ್ನಾಟಕ ಸರ್ಕಾರದ 2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದ ಹತ್ತು ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಿದ್ದ 11 ವಿಧೇಯಕಗಳ ಪೈಕಿ ಮರ್ಯಾದೆಗೇಡು ಹತ್ಯೆ ತಡೆಯುವ ಉದ್ದೇಶದ ‘ಇವ ನಮ್ಮವ ವಿಧೇಯಕ’ ಸೇರಿ ಹತ್ತು ವಿಧೇಯಕಗಳಿಗೆ ರಾಜ್ಯಪಾಲರು ಅಂಗೀಕಾರ ಹಾಕಿದ್ದು, ಅಧಿಕೃತ ರಾಜ್ಯಪತ್ರ ಪ್ರಕಟಿಸಲಾಗಿದೆ.
ಆದರೆ, ಗ್ರಾಪಂ, ತಾಪಂ, ಜಿಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಇವಿಎಂ ಬದಲು ಬ್ಯಾಲೆಟ್ ಪತ್ರ ಬಳಸುವ ಕುರಿತ ತಿದ್ದುಪಡಿ ವಿಧೇಯಕ ಇನ್ನೂ ರಾಜ್ಯಪಾಲರ ಪರಿಶೀಲನಾ ಹಂತದಲ್ಲಿದೆ. ಹೀಗಾಗಿ ಅಂಕಿತ ತಡೆ ಹಿಡಿಯಲಾಗಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮರ್ಯಾದೆ ಗೇಡು ಹತ್ಯೆ ನಿಷೇಧ, ಅಂತರ್‌ಜಾತಿ ಹಾಗೂ ಅಂತರ್ ಧರ್ಮೀಯ ವಿವಾಹಕ್ಕೆ ಅಡ್ಡಿ, ಸಂಪ್ರದಾಯಗಳ ಹೆಸರಿನಲ್ಲಿ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕರಿಸಿದ್ದ ‘ಇವ ನಮ್ಮವ ಇವ ನಮ್ಮವ ವಿಧೇಯಕಕ್ಕೆ’ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಪಾಲರು ಈ ವಿಧೇಯಕಕ್ಕೆ ಏ.9 ರಂದು ಒಪ್ಪಿಗೆ ನೀಡಿದ್ದು, ಇದರ ಬೆನ್ನಲ್ಲೇ ಅಧಿಕೃತ ರಾಜ್ಯಪತ್ರ ಪ್ರಕಟಗೊಳಿಸಿದೆ.
ತನ್ಮೂಲಕ ‘ಕರ್ನಾಟಕದಲ್ಲಿ ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ವಿಧೇಯಕ-2026’ ಅಸ್ತಿತ್ವಕ್ಕೆ ಬಂದಿದೆ.
ರಾಜ್ಯಪಾಲರು ಅಂಕಿತ ಹಾಕಿದ 10 ವಿಧೇಯಕಗಳ ಪೈಕಿ ಶಿಕ್ಷಕರ ವರ್ಗಾವಣೆ ವೇಳೆ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಮಸೂದೆ, ಕರ್ನಾಟಕ ಪೊಲೀಸ್ ಮಸೂದೆ, ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಮಸೂದೆ, ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿ ರಕ್ಷಣೆ ಮತ್ತು ಸಕ್ರಮಾತಿ ಮಸೂದೆ, ಕರ್ನಾಟಕ ಧನ ವಿನಿಯೋಗ ಮಸೂದೆ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ಮಸೂದೆಗಳೂ ಇವೆ ಎಂದು ತಿಳಿದು ಬಂದಿದೆ.
ಪಾಸ್ ಆದ ಬಿಲ್‌ಗಳು
- ಮರ್ಯಾದೆಗೇಡು ಹತ್ಯೆ ನಿಷೇಧಿಸುವ ‘ಇವ ನಮ್ಮವ, ಇವ ನಮ್ಮವ’ ವಿಧೇಯಕ
- ಶಿಕ್ಷಕರ ವರ್ಗಾವಣೆ ವೇಳೆ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಆದ್ಯತೆ ನೀಡುವ ಮಸೂದೆ
- ಕರ್ನಾಟಕ ಪೊಲೀಸ್ ಮಸೂದೆ, ಮುನ್ಸಿಪಾಲಿಟಿ ಕಾನೂನು ತಿದ್ದುಪಡಿ ವಿಧೇಯಕ
- ಕರ್ನಾಟಕ ಧನವಿನಿಯೋಗ ಮಸೂದೆ, ಶೈಕ್ಷಣಿಕ ಭೂಮಿಯನ್ನು ರಕ್ಷಿಸುವ ವಿಧೇಯಕ
- ಕನಾಟಕ ವೃತ್ತಿ, ಕಸುಬು, ಅಜೀವಿಕೆಗಳು, ಉದ್ಯೋಗಗಳ ಮೇಲಿನ ತೆರಿಗೆ ಮಸೂದೆ6trfdsz