ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ ಎಂದಿದ್ದ ದೇವೇಗೌಡರು: ಸಿಆರ್‌ಎಸ್

KannadaprabhaNewsNetwork |  
Published : Jan 25, 2024, 02:05 AM ISTUpdated : Jan 25, 2024, 05:36 AM IST
೨೪ಕೆಎಂಎನ್‌ಡಿ-೮ಎನ್.ಚಲುವರಾಯಸ್ವಾಮಿ | Kannada Prabha

ಸಾರಾಂಶ

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎನ್ನುವಷ್ಟು ಕಠೋರವಾದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸಿದ್ದ ದೇವೇಗೌಡರು ಇಂದು ಬಿಜೆಪಿಯನ್ನು ಬೆಂಲಿಸುತ್ತಿದ್ದಾರೆಂದರೆ ನಮಗೆ ನೋವಾಗುತ್ತಿದೆ. ಅವರ ಇಂದಿನ ಸ್ಥಿತಿಗೆ ಮಕ್ಕಳೇ ಕಾರಣ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎನ್ನುವಷ್ಟು ಕಠೋರವಾದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸಿದ್ದ ದೇವೇಗೌಡರು ಇಂದು ಬಿಜೆಪಿಯನ್ನು ಬೆಂಲಿಸುತ್ತಿದ್ದಾರೆಂದರೆ ನಮಗೆ ನೋವಾಗುತ್ತಿದೆ. ಅವರ ಇಂದಿನ ಸ್ಥಿತಿಗೆ ಮಕ್ಕಳೇ ಕಾರಣ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ದೇವೇಗೌಡರ ಇಂದಿನ ನಿಲುವು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ದೇವೇಗೌಡರು ನಮ್ಮ ನಾಯಕರು. ದೇಶದ ಪ್ರಧಾನಿಯಾಗಿದ್ದವರು. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಎಲ್ಲರನ್ನೂ ಅದರೆಡೆಗೆ ಕರೆತಂದಿದ್ದರು. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಹಲವು ದಶಕಗಳಿಂದ ರಾಜಕಾರಣ ಮಾಡಿದ ಎಚ್.ಡಿ.ದೇವೇಗೌಡರನ್ನು ಆ ಪಕ್ಷದ ನಾಯಕರು, ಅವರ ಮಕ್ಕಳು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಛೇಡಿಸಿದರು.

ರಾಮನ ಹೆಸರಲ್ಲಿ ಬಿಜೆಪಿ ರಾಜಕಾರಣ:

ನಾವೂ ರಾಮ ಭಕ್ತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಹೇಳಲಿಲ್ಲವೇ, ಬಿಜೆಪಿಯವರು ಚುನಾವಣೆಗಾಗಿ ಶ್ರೀರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಚುನಾವಣೆ ಬಿಟ್ಟು ವೈಯಕ್ತಿಕವಾಗಿ ದೇವರ ಆರಾಧನೆ ಮಾಡುತ್ತೇವೆ. ನಮಗೂ ಭಕ್ತಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಾದಯಾತ್ರೆಗೆ ಅಡ್ಡಿ-ಕಿಡಿ:

ಚಂದ್ರಶೇಖರ್ ನಂತರ ಇಡೀ ರಾಷ್ಟ್ರದಲ್ಲಿ ಸ್ವಾತಂತ್ರ್ಯ ನಂತರ ಯಾರೂ ಪಾದಯಾತ್ರೆ ಮಾಡಿರಲಿಲ್ಲ. ರಾಹುಲ್‌ ಗಾಂಧಿಯವರು ಭಾರತದ ಬದುಕಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಆಂಧ್ರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳು ಬರುತ್ತವೆಂದು ಖಾತ್ರಿಯಾಗಿದೆ. ಹಾಗಾಗಿ ಪ್ರಚೋದನೆ ಮಾಡುತ್ತಿದ್ದಾರೆ ಎಂದು ದೂರಿದರು.

ಅಭ್ಯರ್ಥಿ ಹೆಸರು ಘೋಷಣೆ ಬಾಕಿ:

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬುದು ಪಕ್ಷದ ನಿರ್ಧಾರ. ಆದರೆ, ಮಂತ್ರಿಯಾಗದವರು, ಹಿರಿಯ ಶಾಸಕರು ನಮಗೂ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ತಡವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಆಯ್ಕೆಯಾಗಿದೆ. ಹೆಸರು ಘೋಷಣೆಯಷ್ಟೇ ಬಾಕಿ ಉಳಿದಿದೆ. ಅಭ್ಯರ್ಥಿಯ ಹೆಸರನ್ನು ಕೆಪಿಸಿಸಿಗೆ ಕಳುಹಿಸುತ್ತೇವೆ. ಅಲ್ಲೂ ನಿರ್ಧಾರ ಕೈಗೊಂಡು ಎಐಸಿಸಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಗ್ರೀನ್ ಸಿಗ್ನಲ್ ದೊರಕಿದ ನಂತರ ಹೆಸರು ಘೋಷಣೆ ಮಾಡುತ್ತೇವೆ. ನಾವು ಈಗಾಗಲೇ ಚುನಾವಣೆಗೆ ತಯಾರಾಗಿದ್ದೇವೆ ಎಂದರು.

ಪ್ರೀತಿಯಿಂದ ಕರೆಯುತ್ತಿದ್ದಾರೆ:

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ನಾಯಕರು ದೇವೇಗೌಡರ ಕುಟುಂಬದವರನ್ನು ಪ್ರೀತಿಯಿಂದ ಕರೆಯುತ್ತಿದ್ದಾರೆ. ಅದನ್ನು ಬೇಡ ಎನ್ನಲು ನಾವ್ಯಾರು. ಯಾರೇ ಬಂದು ಸ್ಪರ್ಧಿಸಲಿ ನಮಗೆ ಅದರ ಬಗ್ಗೆ ಭಯವೂ ಇಲ್ಲ, ಆತಂಕವೂ ಇಲ್ಲ. ನಮ್ಮ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಗೆಲುವಿಗಾಗಿ ಹೋರಾಟ ನಡೆಸುತ್ತೇವೆ ಎಂದರು.

ಸುಮಲತಾ ಅವರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿಯಿಂದಲೇ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಅವರು ರಾಜಕೀಯವಾಗಿ ಇದುವರೆಗೂ ನನ್ನೊಂದಿಗೆ ಮಾತನಾಡಿಲ್ಲ. ವಿಶ್ವಾಸಕ್ಕೆ ಭೇಟಿಯಾಗುತ್ತಿದ್ದೇವೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರವಾಗಿ ನನ್ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ನುಡಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ