ಗ್ಯಾರಂಟಿ ಅನುಷ್ಠಾನ ಜತೆ ಅಭಿವೃದ್ಧಿಗೂ ಆದ್ಯತೆ: ಶಾಸಕ ತಮ್ಮಯ್ಯ

KannadaprabhaNewsNetwork |  
Published : Jan 09, 2024, 02:00 AM ISTUpdated : Jan 09, 2024, 11:16 AM IST
ಚಿಕ್ಕಮಗಳೂರು ನಗರಸಭೆಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ವರಸಿದ್ದಿ ವೇಣುಗೋಪಾಲ್, ಅಮೃತೇಶ್‌, ಬಸವರಾಜ್‌, ನಾಗರತ್ನ ಇದ್ದರು. | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿಯನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು, ಕಾಂಗ್ರೆಸ್‌ ಜೋಡೆತ್ತಿನ ಸರ್ಕಾರದಿಂದ ಮುಂದೆ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು 

ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯವನ್ನು ಸಮಾನವಾಗಿ ಕೊಂಡೊಯ್ಯಲಾಗುತ್ತಿದೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ ಅವರು ಹೇಳಿದರು. ನಗರಸಭೆ ಉದ್ಯಾನವನದ ಆವರಣದಲ್ಲಿರುವ ದೇವಾಲಯದ ನವೀಕರಣ ಹಾಗೂ ಎಂ.ಜಿ.ರಸ್ತೆ ಮತ್ತು ಎಐಟಿ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಲಭ ಶೌಚಾಲಯ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾಗಿದೆ, ಈ ಅವಧಿಯಲ್ಲಿ ಪಕ್ಷ ಭರವಸೆ ನೀಡಿದ್ದ 4 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಅನುಷ್ಠಾನಕ್ಕೆ ತಂದಿದ್ದು, ಇನ್ನೊಂದು ಪ್ರಮುಖ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಇದೇ ತಿಂಗಳ 12 ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು. 

ಎಂ.ಜಿ. ರಸ್ತೆ ಹಾಗೂ ಎಐಟಿ ವೃತ್ತದಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಬಹಳ ದಿನಗಳ ಬೇಡಿಕೆಯಾಗಿದ್ದು, ಸುಮಾರು 24.05 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಮಾದರಿಯ ಸುಲಭ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬಸ್ ಸಂಚಾರಕ್ಕೆ ಬರುವ ಪ್ರಯಾಣಿ ಕರಿಗೆ ಅನುಕೂಲವಾಗಲಿದೆ. 

ಇದರ ಜೊತೆಗೆ ಇದೇ ಸ್ಥಳದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗುವುದೆಂದು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಲಿದ್ದು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರಂಭಗೊಂಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಗರಸಭೆ ವತಿಯಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸ ಬೇಕೆಂಬ ದೃಷ್ಠಿಯಿಂದ ನಗರಸಭಾ ಉದ್ಯಾನವನ ನವೀಕರಣ, ಶೌಚಾಲಯ ನಿರ್ಮಾಣ ಸೇರಿದಂತೆ ಸುಮಾರು 3 ಕೋಟಿ ರೂ. ಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್‌ ಚನ್ನಕೇಶವ, ಸದಸ್ಯರುಗಳಾದ ಲಕ್ಷ್ಮಣ್, ಜಾವಿದ್, ಕುಮಾರ್, ಲಕ್ಷ್ಮಣ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಪೌರಾಯುಕ್ತ ಬಿ.ಸಿ. ಬಸವರಾಜು, ಯೋಜನಾ ನಿರ್ದೇಶಕರಾದ ನಾಗರತ್ನ, ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲರಾದ ಚಾಂದಿನಿ ಹಾಜರಿದ್ದರು.

ಅಭಿವೃದ್ಧಿಯ ಪಥದಲ್ಲಿ ಜೋಡೆತ್ತಿನ ಸರ್ಕಾರ

ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿಯನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು, ಮಾತು ಕೊಟ್ಟಂತೆ ನಡೆದು ಕೊಳ್ಳುವ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರಾಗಿದ್ದು, ಅವರ ಜೊತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಥ್‌ ನೀಡಿ ಈ ಜೋಡೆತ್ತಿನ ಸರ್ಕಾರ ದಿಂದ ಮುಂದೆ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ