ಮಂತ್ರಾಲಯ ರಥಬೀದಿ ಮಾದರಿಯಲ್ಲಿ ಚಾಮುಂಡಿಬೆಟ್ಟ ಸೇರಿ ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ: ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Jul 20, 2025, 01:15 AM ISTUpdated : Jul 20, 2025, 08:34 AM IST
Agamika | Kannada Prabha

ಸಾರಾಂಶ

ಘಾಟಿ ಸುಬ್ರಹ್ಮಣ್ಯ, ಚಾಮುಂಡಿ ಬೆಟ್ಟ ಸೇರಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಕ್ಷೇತ್ರ ಮಹತ್ವ ಸಾರಲು ಮಂತ್ರಾಲಯದ ರಥಬೀದಿ ಮಾದರಿಯ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

  ಬೆಂಗಳೂರು :  ಘಾಟಿ ಸುಬ್ರಹ್ಮಣ್ಯ, ಚಾಮುಂಡಿ ಬೆಟ್ಟ ಸೇರಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಕ್ಷೇತ್ರ ಮಹತ್ವ ಸಾರಲು ಮಂತ್ರಾಲಯದ ರಥಬೀದಿ ಮಾದರಿಯ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಶನಿವಾರ ನಗರದ ಬಸವನಗುಡಿಯ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಮುಜರಾಯಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಆಯೋಜಿಸಿದ್ದ ‘ಆಗಮ ಘಟಿಕೋತ್ಸವ - 2025’ ಅರ್ಚಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ‘ಸಿ’ ವರ್ಗದ 34,217 ದೇವಾಲಯಗಳನ್ನು ಮುಜರಾಯಿ ಇಲಾಖೆ ಅಡಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ‘ಎ’ ವರ್ಗ 205, ‘ಬಿ’ ವರ್ಗದ 195 ದೇವಾಲಯಗಳಿಗೆ ಹೆಚ್ಚಿನ ಆದಾಯ ಇದ್ದರೂ, ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಿವೆ. ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳ ಅದಾಯದಲ್ಲಿ ಶೇ.10 ರಷ್ಟನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ನೀಡುವ ಮೂಲಕ ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿ ಹಾಗೂ ಅಲ್ಲಿನ ಅರ್ಚಕರಿಗೆ ತಸ್ತಿಕ್ ಹೆಚ್ಚಳ ಮಾಡಲು ವಿಧೇಯಕಗಳಿಗೆ ತಿದ್ದುಪಡಿ ತಂದು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಆದರೆ, ಅವರು ಸಹಿ ಮಾಡಲಿಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಅದನ್ನು ರಾಷ್ಟ್ರಪತಿ ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಅರ್ಚಕರಿಗೆ ವಯಸ್ಸಾದರೆ, ಕಾಯಿಲೆಯಿಂದ ಬಳಲುತ್ತಿದ್ದರೆ ಅವರ ಸ್ಥಾನಕ್ಕೆ ವಾರಸುದಾರರ ನೇಮಕ ಮಾಡಲು ಆಯಾ ವ್ಯಾಪ್ತಿಯ ತಹಸೀಲ್ದಾರರಿಗೆ ಅನುಮತಿ ನೀಡಲಾಗಿದೆ. ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಕಳೆದ ವರ್ಷ ಕಡಿಮೆ ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಮೂರ್ತಿಪೂಜೆ ಬಗ್ಗೆ ಹಿಂದೂ ಸಮಾಜದ ಕೆಲವರಲ್ಲಿ ಆಕ್ಷೇಪವಿದೆ. ವಸ್ತು ಸಂಗ್ರಹಾಲಯದಲ್ಲಿ ಸಾವಿರಾರು ಪ್ರತಿಮೆಗಳಿದ್ದರೂ ಅಲ್ಲಿಗೆ ಹೋಗಿ ಯಾರೂ ಪೂಜಿಸುವುದಿಲ್ಲ. ಆಗಮ ಶಾಸ್ತ್ರದ ಅನುಸಾರ ಪ್ರತಿಮೆಗಳಲ್ಲಿ ಭಗವಂತನ ಸನ್ನಿಧಾನ ತುಂಬಿದ ಬಳಿಕವೇ ಆರಾಧನೆ ನಡೆಯುತ್ತದೆ. ಆರಾಧನೆಯ ಆಗಮಗಳನ್ನು ತಿಳಿದು ಮಾಡಿದಾಗ ಮಾತ್ರ ಪೂಜಾ ವಿಧಿ ವಿಧಾನ ಅರ್ಥಪೂರ್ಣ ಆಗುತ್ತದೆ ಎಂದರು.

ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಆದಾಯವಿಲ್ಲದೆ ಸೊರಗುತ್ತಿರುವ ‘ಸಿ’ ವರ್ಗದ ದೇವಾಲಯಗಳಿಗೆ ಅನುದಾನವೂ ಇಲ್ಲವಾಗಿದೆ. ಹಾಗಾಗಿ ಅರ್ಚಕರಿಗೆ ನೀಡುತ್ತಿರುವ ತಸ್ತಿಕ್ ಮೊತ್ತವನ್ನು ಹೆಚ್ಚಿಸಬೇಕು. ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದರು.

ವಿಶ್ವ ಒಕ್ಕಲಿಗರ ಮಠದ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಶಾಸಕ ಉದಯ್ ಗರುಡಾಚಾರ್, ಅಖಿಲ ಕರ್ನಾಟಕ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ. ರಾಧಾಕೃಷ್ಣ, ರಾಜ್ಯ ಧಾರ್ಮಿಕ ಪರಿಷತ್ತು ಅಧ್ಯಕ್ಷ ಕೆ.ಎಂ. ನಾಗರಾಜು ಇತರರು ಇದ್ದರು.

ಮುಜರಾಯಿ ಇಲಾಖೆಗೆ ₹15 ಕೋಟಿ ದೇಣಿಗೆ : ಮೈಸೂರು ಮೂಲದ ಜಿ.ಲಕ್ಷಮ್ಮ ಒಡೆತನದ ಸುಮಾರು ₹15 ಕೋಟಿ ಮೌಲ್ಯದ ಆಸ್ತಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಬೇಕೆಂದು ಮಾಡಿಸಿದ್ದ ಮರಣ ಶಾಸನ(ವಿಲ್)ವನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ. ಮೈಸೂರಿನಲ್ಲಿರುವ ತಮ್ಮ 80/50 ಚದರ ಅಡಿ ವಿಸ್ತೀರ್ಣದ ಮನೆ, ಮಲ್ಲೇಶ್ವರದ ಒಂದು ಅರ್ಪಾಟ್‌ಮೆಂಟ್, ತಮ್ಮ ಖಾತೆಯಲ್ಲಿರುವ ₹6 ಕೋಟಿ ಹಾಗೂ ಚಿನ್ನ, ಬೆಳ್ಳಿ ಸೇರಿ ₹15 ಕೋಟಿ ಮೌಲ್ಯದ ಆಸ್ತಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ದಾನ ಮಾಡಲು ನೋಂದಣಿ ಮಾಡಿಸಿ ಪತ್ರವನ್ನು ಕುಟುಂಬಸ್ಥರು ಇಲಾಖೆಗೆ ನೀಡಿದ್ದಾರೆ.

PREV
Read more Articles on

Recommended Stories

ಬುರುಡೆ ಗಿರಾಕಿ ಬಿಜೆಪಿಯ ಕಾರ್ಯಕರ್ತ: ಡಿಕೆ ಬಾಂಬ್‌
ಆಳಂದ ಚುನಾವಣಾ ಅಕ್ರಮ ತನಿಖೆ ಕಾಂಗ್ರೆಸ್‌ನಿಂದ ಮತ್ತೆ ಟಾರ್ಗೆಟ್‌ ಆಯೋಗ